Advertisement

ನ.20ರಂದು ಪಿಯು ಉಪನ್ಯಾಸಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ: ಸುರೇಶ್ ಕುಮಾರ್

04:14 PM Nov 17, 2020 | keerthan |

ಬೆಂಗಳೂರು: ಈಗಾಗಲೇ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಂಡಿರುವ ನೂತನ ಪಿಯು ಉಪನ್ಯಾಸಕ ಅಭ್ಯರ್ಥಿಗಳಿಗೆ ನವೆಂಬರ್ 20 ರಿಂದ ನೇಮಕಾತಿ ಆದೇಶಗಳನ್ನು ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

Advertisement

ಮಂಗಳವಾರ ಬೆಳಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ನವೆಂಬರ್ 20ರಂದು ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ನೇಮಕಾತಿ ಆದೇಶ ನೀಡಲಿದ್ದಾರೆಂದು ಅವರು ತಿಳಿಸಿದ್ದಾರೆ.

ಕಾಲೇಜುಗಳು ಆರಂಭವಾದ ದಿನದಿಂದ ನೇಮಕಾತಿ ಆದೇಶ ಜಾರಿಗೆ ಬರಲಿದ್ದು, ಅದಕ್ಕೂ ಮೊದಲು ನೂತನ ಉಪನ್ಯಾಸಕರಿಗೆ ಇಲಾಖೆಯ ನಿಯಮಗಳು, ಆಡಳಿತ, ವೃಂದ ಮತ್ತು ನೇಮಕಾತಿ ನಿಯಮಗಳು, ಉಪನ್ಯಾಸಕರ ವೃತ್ತಿ ಧರ್ಮ, ವೃತ್ತಿ ಗೌರವ ಸೇರಿದಂತೆ ಪ್ರೇರಣಾದಾಯಕ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಗಳಲ್ಲಿ ಇಲ್ಲವೇ ವಿಭಾಗಗಳಲ್ಲಿ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ:ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ: ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಕರೆ

ಕೋವಿಡ್‍ನಿಂದಾಗಿ ಆರ್ಥಿಕ ಇಲಾಖೆ ಮತ್ತು ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಗಳ ಆರ್ಥಿಕ ಮಿತವ್ಯಯ ಆದೇಶವಿದ್ದುದರಿಂದ ಹಾಗೂ ಶಾಲಾ ಕಾಲೇಜುಗಳ ಆರಂಭ ಕುರಿತು ಅನಿಶ್ಚಿತತೆ ಹಿನ್ನೆಲೆಯಲ್ಲಿ ಉಪನ್ಯಾಸಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಸಾಧ್ಯವಾಗಿರಲಿಲ್ಲ. ಈ ಮಿತವ್ಯಯ ಆದೇಶವಿದ್ದರೂ ಸಹ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೌನ್ಸೆಲಿಂಗ್ ನಡೆಸಿ ಸ್ಥಳ ನಿಯುಕ್ತಿಗೆ  ಅವಕಾಶ ನೀಡಲಾಗಿತ್ತು ಎಂದು ಅವರು ಹೇಳಿದರು.

Advertisement

ನ. 23ರಿಂದ ಪಿಯು ಉಪನ್ಯಾಸಕ ವರ್ಗಾವಣಾ ಪ್ರಕ್ರಿಯೆ:

ಪಿಯು ಉಪನ್ಯಾಸಕರ ವರ್ಗಾವಣೆಗೆ ಪ್ರಕ್ರಿಯೆ ನವೆಂಬರ್ 23ರಿಂದ ಆರಂಭವಾಗಲಿದ್ದು, ಅಂದಿನಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶವಾಗಲಿದೆ ಎಂದರು. ಈ ಬಾರಿ ಉಪನ್ಯಾಸಕರ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆ ಇರುವುದಿಲ್ಲ. ಮುಂದಿನ ಅಧಿವೇಶನದಲ್ಲಿ ಪದವಿಪೂರ್ವ ಶಿಕ್ಷಣ ಉಪನ್ಯಾಸಕರ ವರ್ಗಾವಣಾ ನಿಯಂತ್ರಣ ಕಾಯ್ದೆಗೆ ಸಂಪೂರ್ಣ ತಿದ್ದುಪಡಿ ತಂದು, ಉಪನ್ಯಾಸಕ ಸ್ನೇಹಿಯಾದ ವರ್ಗಾವಣಾ ನೀತಿ ನೀತಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next