Advertisement

ಬಡ್ಸ್‌ ಶಾಲೆಗಳಿಗೆ ಕನ್ನಡ ಅರಿಯದ ಶಿಕ್ಷಕಿಯರ, ಶುಶ್ರೂಷಕರ ನೇಮಕ

11:08 AM Jul 09, 2019 | keerthan |

ಕಾಸರಗೋಡು: ಕೇರಳ ಸರಕಾರದ ಆಧೀನದಲ್ಲಿ ಸಾಮಾಜಿಕ ನ್ಯಾಯ ಇಲಾಖೆ (ಸೋಶಿಯಲ್‌ ಜಸ್ಟಿಸ್‌ ಡಿಪಾರ್ಟ್‌ ಮೆಂಟ್‌) ಎಂಬುದೊಂದಿದೆ. ಸಮಾಜದ ಎಲ್ಲ ವರ್ಗಗಳಿಗೆ ನ್ಯಾಯವನ್ನೊದಗಿಸಬೇಕಾದುದು ಈ ಇಲಾಖೆಯ ಜವಾಬ್ದಾರಿ. ಮಹಿಳೆಯರು ಹಾಗೂ ಮಕ್ಕಳ ಕ್ಷೇಮ, ಅಂಗನವಾಡಿಗಳ ನಿರ್ವಹಣೆ, ಎಂಡೋಸಲ್ಫಾನ್‌ ಬಾಧಿತ ಮಕ್ಕಳ ಕಲ್ಯಾಣಕ್ಕಾಗಿ ಬಡ್ಸ್‌ ಶಾಲೆಗಳ ಸ್ಥಾಪನೆ ಮತ್ತು ನಿರ್ವಹಣೆ ಮೊದಲಾದವುಗಳನ್ನು ಈ ಇಲಾಖೆ ಕೈಗೊಳ್ಳುತ್ತದೆ.

Advertisement

ತಾರತಮ್ಯ
ಆದರೆ ಸಮಾಜಕ್ಕೆ ನ್ಯಾಯವನ್ನೊದಗಿಸಬೇಕಾದ ಈ ಇಲಾಖೆಯಿಂದಲೇ ಭಾಷಾ ಅಲ್ಪಸಂಖ್ಯಾಕ ಕನ್ನಡ ಮಕ್ಕಳಿಗೆ ಅನ್ಯಾಯವಾಗುತ್ತಿರುವುದು ದಿಗ್ಭ್ರಾಂತಿ ಹುಟ್ಟಿಸಿದೆ. ಅದರಲ್ಲೂ ಎಂಡೋಸಲ್ಫಾನ್‌ ಸಂತ್ರಸ್ತ ಮಕ್ಕಳ ಶಿಕ್ಷಣದ ವಿಷಯದಲ್ಲಿ ಭಾಷಾ ಅಲ್ಪಸಂಖ್ಯಾಕರ ಬಗ್ಗೆ ತಾರತಮ್ಯ ನಡೆಸಲಾಗುತ್ತಿದೆ. ಈಚೆಗೆ ಕನ್ನಡ ಪ್ರದೇಶದ ಬಡ್ಸ್‌ ಶಾಲೆಗಳಿಗಾಗಿ ಕನ್ನಡದ ಒಂದು ಅಕ್ಷರವೂ ಅರಿಯದ ಸ್ಥಳೀಯ ಭಾಷೆಗಳಾದ ಕನ್ನಡ, ತುಳು ಅರ್ಥವಾಗದ, ಮಾತನಾಡಲು, ಓದಲು, ಬರೆಯಲು ಬಾರದ ಶಿಕ್ಷಕಿಯರನ್ನು ಹಾಗೂ ಶುಶ್ರೂಷಕಿಯರನ್ನು ಆಯ್ಕೆ ಮಾಡಲಾಗಿದೆ.

ಮಲಯಾಳಿಗರಿಗೆ ನೇಮಕಾತಿ ಆದೇಶ
ಕೇರಳ ಸರಕಾರದ ಸಮಾಜ ಕಲ್ಯಾಣ ಇಲಾಖೆ ದಿನಾಂಕ 2-5-2019ರಂದು ಹೊರಡಿಸಿದ ನೇಮಕಾತಿ ಅಧಿಸೂಚನೆಯ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್‌ ಸಂತ್ರಸ್ತರಾದ ದೈಹಿಕ ಮತ್ತು ಮಾನಸಿಕ ವೈಕಲ್ಯ ವುಳ್ಳ ಮಕ್ಕಳ ಪಾಲನೆ ಮತ್ತು ಶಿಕ್ಷಣಕ್ಕಾಗಿ ಎಲ್ಲ ಪಂಚಾಯತ್‌ಗಳಲ್ಲಿ ಸ್ಥಾಪಿಸಲಾಗುವ ಬಡ್ಸ್‌ ಶಾಲೆಗಳಿಗೆ ತರಬೇತುದಾರರನ್ನು (ಶಿಕ್ಷಕಿಯರನ್ನು ಹಾಗೂ ಶುಶ್ರೂಷಕರನ್ನು) ಆಯ್ಕೆ ಮಾಡಲು ದಿನಾಂಕ 15-6-2019ರಂದು ರ್‍ಯಾಂಕ್‌ ಪಟ್ಟಿ ಪ್ರಕಟವಾಗಿದ್ದು 27-6-2019ರಂದು ನೇಮಕಾತಿ ಆದೇಶವನ್ನೂ ನೀಡಲಾಗಿದೆ.

ಅಂಗನವಾಡಿ ಪಠ್ಯಪುಸ್ತಕ ಸಿದ್ಧವಾದರೂ ವಿತರಣೆಯಲ್ಲಿ ವಿಳಂಬ
ಕನ್ನಡ ಸಂಘಟನೆಗಳ ನಿರಂತರ ಪ್ರಯತ್ನದ ಫಲವಾಗಿ ಕನ್ನಡ ಪ್ರದೇಶದ ಅಂಗನವಾಡಿಗಳಿಗೆ ವಿತರಿಸಲು ಕನ್ನಡ ಪಠ್ಯಪುಸ್ತಕಗಳು ಹಾಗೂ ಕೈಪಿಡಿಗಳು ತಯಾರಾಗಿದ್ದರೂ ಅವುಗಳನ್ನು ವಿತರಿಸದೆ ವಿಳಂಬ ನೀತಿಯನ್ನು ಅನುಸರಿಸ ಲಾಗುತ್ತಿದೆ. ಸಾಮಾಜಿಕ ನ್ಯಾಯ ಇಲಾಖೆಯ ಕೈಕೆಳಗಿನ ಜಿಲ್ಲಾ ಶಿಶು ಕಲ್ಯಾಣ ವಿಭಾಗದ ಕಚೇರಿಯಲ್ಲಿ ಕನ್ನಡ ಪಠ್ಯಪುಸ್ತಕಗಳು ಕೊಳೆಯುತ್ತಿವೆ. ಅವುಗಳನ್ನು ಅಂಗನವಾಡಿಗಳಿಗೆ ವಿತರಿಸಲು ಇನ್ನೂ ಮುಹೂರ್ತ ಕೂಡಿಬಂದಿಲ್ಲ.

ಕನ್ನಡಿಗ ಅಭ್ಯರ್ಥಿಗಳಿದ್ದರೂ ಇಲಾಖೆ ತಾತ್ಸಾರ
ಎಂಡೋ ಸಂತ್ರಸ್ತ ಮಕ್ಕಳಲ್ಲಿ ಹೆಚ್ಚಿನವರ ಮಾತೃ ಭಾಷೆ ಕನ್ನಡ ತುಳು ಆಗಿರುತ್ತದೆ. ರ್‍ಯಾಂಕ್‌ ಪಟ್ಟಿ ಯಲ್ಲಿ ಕನ್ನಡ ಉದ್ಯೋಗಾರ್ಥಿಗಳು ಇದ್ದರೂ ಅವರನ್ನು ಕಡೆಗಣಿಸಿ ಮಲಯಾಳ ಮಾತ್ರ ತಿಳಿದ ಕನ್ನಡ ತುಳು ಅರಿಯದವರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಎಂಡೋ ಸಂತ್ರಸ್ತ ಮಕ್ಕಳ ಜತೆ ವ್ಯವಹರಿಸಲು, ಅವರಿಗೆ ಶಿಕ್ಷಣವನ್ನು ನೀಡಲು, ಪಾಲನೆ ಮಾಡಲು ಶಿಕ್ಷಕಿಯರಿಗೆ ಮಕ್ಕಳ ಮಾತೃ ಭಾಷೆ ಅರಿವು ಅನಿವಾರ್ಯ. ಕನ್ನಡ ಬಾರದವ ರನ್ನು ಆರಿಸಿದ್ದರಿಂದ ಸಂತ್ರಸ್ತ ಮಕ್ಕಳ ಪೋಷಕರು ಆತಂಕಕ್ಕೀಡಾಗಿದ್ದಾರೆ. ಸರಕಾರ ತತ್‌ಕ್ಷಣ ಮಧ್ಯ ಪ್ರವೇಶಿಸಿ ಕನ್ನಡ ಪ್ರದೇಶದ ಬಡ್ಸ್‌ ಶಾಲೆಗಳಲ್ಲಿ ಕನ್ನಡ ತಿಳಿದ ಶಿಕ್ಷಕಿಯರು ಹಾಗೂ ಶುಶ್ರೂಷಕಿ ಯರನ್ನೇ ನೇಮಿಸ ಬೇಕೆಂದು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next