ಬೆಂಗಳೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿ-2022ರ ಬೆಂಗಳೂರು ವಿಭಾಗದ 1:2 ಅನುಪಾತದ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.
ನೇಮಕಾತಿಗಾಗಿ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಮೂರು ಪತ್ರಿಕೆಗಳಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳು ಮತ್ತು ಶೈಕ್ಷಣಿಕ ಅರ್ಹತೆಯ ಅಂಕಗಳನ್ನು ನಿಯಮಾನುಸಾರ ಮೆರಿಟ್‌ಗೆ ಪರಿಗಣಿಸಿ, ಆಯ್ಕೆ ನಿಯಮಗಳು ಮತ್ತು ಮಾನದಡಂಗಳನ್ನು ಅನುಸರಿಸಿ 1:2 ಅನುಪಾತದ ಪರಿಶೀಲನಾ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಮಂಗಳವಾರ ಬೆಂಗಳೂರು ವಿಭಾಗದ ಜಿಲ್ಲೆಗಳ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಿದೆ. ಬುಧವಾರ ಬೆಳಗಾವಿ, ಗುರುವಾರ ಮೈಸೂರು ಮತ್ತು ಕಲಬುರಗಿ ವಿಭಾಗದ ಜಿಲ್ಲೆಗಳ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್. ವಿಶಾಲ್ ತಿಳಿಸಿದ್ದಾರೆ.
30ರಂದು ದಾಖಲಾತಿ ಪರಿಶೀಲನೆ ವೇಳಾಪಟ್ಟಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಗಳಿಸಿದ ವೈಯಕ್ತಿಕ ಅಂಕ, ಪದವಿ, ಬಿ.ಇಡಿ, ಟಿಇಟಿ ಮತ್ತು ಸಿಇಟಿ ಅಂಕಗಳನ್ನು ಪರಿಗಣಿಸಿ ಪಟ್ಟಿ ಪ್ರಕಟಿಸಲಾಗಿದೆ. 1:2 ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿನ ಅಭ್ಯರ್ಥಿಗಳು ಸಂಬಂಧಪಟ್ಟ ಜಿಲ್ಲೆಯ ಉಪ ನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ ಪ್ರಾಧಿಕಾರ ಕಚೇರಿಯಲ್ಲಿ ತಮ್ಮ ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಈ ಸಂಬಂಧ ಸೆ.30ರಂದು ದಾಖಲಾತಿ ಪರಿಶೀಲನೆ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ.
60 ಅಭ್ಯರ್ಥಿಗಳು ಅನರ್ಹ: ಉತ್ತರ ಪತ್ರಿಕೆಗಳಲ್ಲಿ ತಮ್ಮ ವೈಯಕ್ತಿಕ ಗುರುತುಗಳನ್ನು ಬಹಿರಂಗಪಡಿಸಿ ಪರೀಕ್ಷಾ ನಿಯಮಗಲನ್ನು ಉಲ್ಲಂಘಿಸಿದ ಹಾಗೂ ಇನ್ನಿತರ ಕಾರಣಗಳಿಗಾಗಿ 60 ಅಭ್ಯರ್ಥಿಗಳನ್ನು 1:2 ಅನುಪಾತದ ಪಟ್ಟಿಗೆ ಪರಿಗಣಿಸಿಲ್ಲ ಎಂದು ತಿಳಿಸಿದ್ದಾರೆ.