ಬೆಂಗಳೂರು: ಅಪ್ರಾಪ್ತರಿಗೆ ಉದ್ಯೋಗ ನೀಡುವುದು “ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ನಿಯಮ 2017ಕ್ಕೆ ವಿರುದ್ಧವಾಗಲಿದೆ’ ಎಂದು ಹೇಳಿರುವ ಹೈಕೋರ್ಟ್, ಅಪ್ರಾಪ್ತನೊಬ್ಬನಿಗೆ ನೀಡಲಾಗಿದ್ದ ನೇಮಕಾತಿ ಪತ್ರವನ್ನು ಹಿಂಪಡೆದ ಕೇಂದ್ರ ಸಾಹಿತ್ಯ ಅಕಾಡಮಿಯ ನಿರ್ಧಾರವನ್ನು ಎತ್ತಿ ಹಿಡಿದಿದೆ.
ಈ ಸಂಬಂದ ವಿವೇಕ್ ಹೆಬ್ಟಾಲೆ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಇ.ಎಸ್. ಇಂದಿರೇಷ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರು ಅಪ್ರಾಪ್ತರು ಹಾಗಾಗಿ ಪ್ರತಿವಾದಿ ಸಂಸ್ಥೆಯಲ್ಲಿ ಅವರಿಗೆ ಹುದ್ದೆಯನ್ನು ನೀಡಲಾಗದು. ಹಾಗೊಂದು ವೇಳೆ ನೀಡಿದರೆ ಅದು ಬಾಲ ಕಾರ್ಮಿಕ ಕಾಯಿದೆಯ ಉಲ್ಲಂಘನೆಯಾಗಲಿದೆ. ಹಾಗಾಗಿ ಸಾಹಿತ್ಯ ಅಕಾಡೆಮಿ ಅರ್ಜಿದಾರರಿಗೆ ನೀಡಿದ ಉದ್ಯೊçಗ ಪತ್ರ ವಾಪಸ್ ಪಡೆದಿರುವ ಕ್ರಮ ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರಿಗೆ ಅನುಭವ ಸೇರಿದಂತೆ ಎಲ್ಲಾ ರೀತಿಯಲ್ಲೂ ಅರ್ಹರಾಗಿದ್ದಾರೆ. ಆದರೂ ನೇಮಕ ರದ್ದುಗೊಳಿಸಿರುವುದು ಕಾನೂನು ಬಾಹಿರ ಕ್ರಮ ಎಂದು ವಾದಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಪ್ರತಿವಾದಿ ಪರ ವಕೀಲರು, ಅರ್ಜಿದಾರರು ದಾಖಲೆಗಳನ್ನು ನಕಲು ಮಾಡಿದ್ದಾರೆ. ತಮ್ಮ ತಾಯಿ ನಡೆಸುತ್ತಿದ್ದ ಬುಕ್ ಹೌಸ್‌ನಿಂದ ಅನುಭವ ಪ್ರಮಾಣಪತ್ರ ಪಡೆದಿದ್ದಾರೆ. ಅವರಿಗೆ 15 ವರ್ಷ 6 ತಿಂಗಳು ಆಗಿದೆ. ಹಾಗಾಗಿ ಅವರು ಅರ್ಹರಲ್ಲ. ಹಾಗಾಗಿ ಅವರ ನೇಮಕ ರದ್ದುಗೊಳಿಸಲಾಗಿದೆ ಎಂದು ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ ಏನು? ಕೇಂದ್ರ ಸಂಸ್ಕೃತಿ ಸಚಿವಾಲಯದಡಿ ಬರುವ ಸಾಹಿತ್ಯ ಅಕಾಡೆಮಿ 2022ರಲ್ಲಿ ಸೇಲ್ಸ್ ಕಮ್ ಎಕ್ಸಿಬಿಷನ್ ಅಸಿಸ್ಟೆಂಟ್ ಹುದ್ದೆಗೆ ಅರ್ಹರ ನೇಮಕಕ್ಕೆ ಅರ್ಜಿಗಳನ್ನು ಆಹ್ವಾನಿಸಿತ್ತು. ಅದರಂತೆ ಅರ್ಜಿದಾರರು ಅರ್ಜಿ ಸಲ್ಲಿಸಿ ಆಯ್ಕೆಯಾಗಿ ದಾಖಲೆಗಳನ್ನೂ ಸಹ ಸಲ್ಲಿಸಿದ್ದರು. ಆಗ ದಾಖಲೆಗಳನ್ನು ಪರಿಶೀಲಿಸಿದಾಗ ಅರ್ಜಿದಾರರು ಇನ್ನೂ 15 ವರ್ಷ 6 ತಿಂಗಳು ಪೂರೈಸಿದ್ದಾರೆ. ಹಾಗಾಗಿ ನೇಮಕಕ್ಕೆ ಅರ್ಹರಲ್ಲ ಎಂದು 2022ರ ಜ.24ರಂದು ನೇಮಕವನ್ನು ವಾಪಸ್ ಪಡೆದು ಅರ್ಜಿದಾರರಿಗೆ ಮಾಹಿತಿ ನೀಡಿತ್ತು. ಅದನ್ನು ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.