Advertisement

ವಿ.ವಿ.ಗಳಿಗೆ ಬೋಧಕರ ನೇಮಕಾತಿ: ಕೆಇಎ ಮೂಲಕ ಪರೀಕ್ಷೆ ; ಮೆರಿಟ್ ಪಟ್ಟಿಯಲ್ಲೇ ಆಯ್ಕೆ

09:08 PM Jul 04, 2022 | Team Udayavani |

ಬೆಂಗಳೂರು: ವಿಶ್ವವಿದ್ಯಾಲಯಗಳಿಗೆ ಬೋಧಕ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಲಿಖಿತ ಪರೀಕ್ಷೆ ನಡೆಸಿ, ಅರ್ಹರ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

Advertisement

ಈ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳನ್ನೇ 1:5ರ ಅನುಪಾತದಲ್ಲಿ ವಿಶ್ವವಿದ್ಯಾಲಯಗಳು ಸಂದರ್ಶನಕ್ಕೆ ಆಹ್ವಾನಿಸಿ, ನೇಮಕಾತಿಯನ್ನು ಮಾಡಿಕೊಳ್ಳಬಹುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಇದೊಂದು‌ ಹೊಸ ವ್ಯವಸ್ಥೆ ಆಗಿದ್ದು ನೇಮಕಾತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

11 ರಿಂದ ಪ್ರವೇಶ

ಪದವಿ ಕಾಲೇಜುಗಳಿಗೆ ಜುಲೈ 11ರಿಂದ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ. ಇದೇ ಮೊದಲ ಬಾರಿಗೆ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ. ಎಲ್ಲವೂ ಆನ್ ಲೈನ್ ನಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಸಿಂಗಲ್ ಲಾಗಿನ್ ನಿಂದಲೇ ಯಾವ ಕಾಲೇಜಿಗೆ ಬೇಕಾದರೂ ಅರ್ಜಿ ಹಾಕಬಹುದು. ಅರ್ಜಿ ಹಾಕಲು ಬೇರೆ ಬೇರೆ ಸಂಸ್ಥೆಗಳಿಗೆ ಓಡಾಡುವ ಅಗತ್ಯ ಇಲ್ಲ. ಪಿಯುಸಿ ನಂಬರ್ ಹಾಕಿದರೆ ಆಂಕಪಟ್ಟಿಗೆ ಸಂಬಂಧಿಸಿದ ಮಾಹಿತಿ ಸಿಗಲಿದೆ. ಉಳಿದಂತೆ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಇತ್ಯಾದಿಗಳು ಕೂಡ ಆಧಾರ್ ದೃಢೀಕರಣದಿಂದ ಸಿಗಲಿವೆ ಎಂದು ಸಚಿವರು ವಿವರಿಸಿದರು.

Advertisement

ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರದಲ್ಲಿ ಎರಡನೇ ವರ್ಷಕ್ಕೆ ಬೇಕಾದ ಪಠ್ಯಕ್ರಮದ ಬಗ್ಗೆ ಇತ್ತೀಚೆಗೆ ಕುಲಪತಿಗಳ ಸಭೆ ನಡೆಸಲಾಗಿದೆ. ಹಾಗೆಯೇ ಮೊದಲನೇ ವರ್ಷದಲ್ಲಿ ಎನ್ ಇ ಪಿ 2020 ಅನುಷ್ಠಾನವನ್ನು ಪರಿಣಾಮಕಾರಿಯಾಗಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ರಾಜ್ಯದ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 100 ಸರ್ಕಾರಿ ಪಾಲಿಟೆಕ್ನಿಕ್ ಹಾಗೂ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಂಗ್ರಹವಾಗುವ ಶುಲ್ಕವನ್ನು ಇನ್ನು ಮುಂದೆ ಕಾಲೇಜುಗಳಲ್ಲೇ ಬಳಸಲು ಅವಕಾಶ ನೀಡಲಾಗಿದೆ. ಸ್ವಾತಂತ್ರ್ಯ ಬಂದ ಮೇಲೆ ಇದೇ ಮೊದಲು ಈ ರೀತಿಯ ತೀರ್ಮಾನ ಮಾಡಲಾಗಿದೆ. ವರ್ಷಕ್ಕೆ ಕನಿಷ್ಠ 50 ಕೋಟಿ ರೂಪಾಯಿ ಹಣ ಕಾಲೇಜುಗಳಲ್ಲೇ ಉಳಿಯಲಿದ್ದು ಅದರಿಂದ ಕಾಲೇಜುಗಳಲ್ಲಿನ ಸಣ್ಣಪುಟ್ಟ ಖರ್ಚುಗಳಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.

ಈಗ ವಿ.ವಿ.ಗಳ ಮೂಲಕ ಸರ್ಕಾರಕ್ಕೆ ಭೌತಿಕ ಕಡತ ಸಲ್ಲಿಸಲು ಅವಕಾಶ ನಿರಾಕರಿಸಲಾಗಿದೆ. ಎಲ್ಲಾ ಕಡತಗಳು ಇ-ಆಫೀಸ್ ಮೂಲಕವೇ ಬರುತ್ತಿದ್ದು, 32,000 ಇ- ಕಡತಗಳು ಸೃಜನೆಗೊಂಡಿವೆ. ಜೊತೆಗೆ, 11 ಲಕ್ಷ ವಿದ್ಯಾರ್ಥಿಗಳಿಗೆ 1600 ಕೋಟಿ ರೂಪಾಯಿಗಳನ್ನು ಪೋರ್ಟಲ್ ಮೂಲಕ ಅವರವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಎಲ್ಲಾ ವಿ.ವಿ.ಗಳಲ್ಲೂ ಎಚ್.ಆರ್.ಎಂ.ಎಸ್. ಪ್ಲ್ಯಾಟ್ ಫಾರ್ಮ್ ಮೂಲಕವೇ ವೇತನ ಪಾವತಿ ಆಗುತ್ತಿದೆ ಎಂದು ಹೇಳಿದರು.

ಐಐಎಂ ಮಾದರಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಡಾ.ವಾಸುದೇವ ಅತ್ರೆ ಸಮಿತಿ ವರದಿ ಕೊಟ್ಟಿದೆ. ಇದರ ಪ್ರಕಾರ ಹೊಸ‌ ಕಾಯ್ದೆ ರಚಿಸಲು ಉದ್ದೇಶಿಸಿದ್ದು ಅದನ್ನು ಸಾರ್ವಜನಿಕರ ಅವಗಹನೆಗೆ ಉನ್ನತ ಶಿಕ್ಷಣ ಇಲಾಖೆ ವೆಬ್ ಸೈಟ್ ನಲ್ಲಿ ಹಾಕಲಾಗಿದೆ. ಸಾರ್ವಜನಿಕರು‌ ಹೊಸ ಕಾಯ್ದೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಎಂದರು.

ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next