Advertisement

Government ಗೆಜೆಟೆಡ್‌ ಹುದ್ದೆಗಳ ನೇಮಕ ಆಮೆ ನಡಿಗೆಯಲ್ಲಿ

10:08 PM Sep 18, 2023 | Team Udayavani |

ಬೆಂಗಳೂರು: ಕೆಎಎಸ್‌ ಸಹಿತ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಸರಕಾರದ “ಆಮೆ ನಡಿಗೆ’ ಮುಂದುವರಿದಿದ್ದು, ಖಾಲಿ ಹುದ್ದೆಗಳ ಸಂಖ್ಯೆ “ಗಜ ಗಾತ್ರ’ಕ್ಕೇರುತ್ತಿದೆ. ಸದ್ಯ ಅಂದಾಜು 500 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳು ಖಾಲಿಯಿದ್ದು, ಸರಕಾರದಿಂದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೇಮಕಾತಿ ಪ್ರಸ್ತಾವನೆ ಹೋಗಿದ್ದು ಶೂನ್ಯ!

Advertisement

ರಾಜ್ಯದಲ್ಲಿ ಖಾಲಿ ಇರುವ ಗೆಜೆಟೆಡ್‌ ಪ್ರೊಬೆಷನರಿ ಗ್ರೂಪ್‌ “ಎ’ ಮತ್ತು ಗ್ರೂಪ್‌ “ಬಿ’ ವೃಂದದ ಹುದ್ದೆಗಳು ದೊಡ್ಡ ಸಂಖ್ಯೆಯಲ್ಲಿ ಖಾಲಿ ಇದ್ದರೂ, ಅವುಗಳ ನೇಮಕಾತಿ ಪ್ರಕ್ರಿಯೆ ಬಗ್ಗೆ ಸರಕಾರ ಗಂಭೀರವಾಗಿಲ್ಲ. ಇದರ ನೇರ ಪರಿಣಾಮ ರಾಜ್ಯದ ಆಡಳಿತ ಮತ್ತು ಅಭಿವೃದ್ಧಿ ಮೇಲೆ ಬೀಳುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕಳೆದ 12 ವರ್ಷಗಳಲ್ಲಿ 2011, 2014, 2015 ಮತ್ತು 2017ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಮಾತ್ರ ನಡೆದಿದೆ. ಅದರಲ್ಲೂ 2011ರಲ್ಲಿ ಆಯ್ಕೆ ಆದವರಲ್ಲಿ 180ಕ್ಕೂ ಹೆಚ್ಚು ಅಭ್ಯರ್ಥಿಗಳು ಹುದ್ದೆಗೆ ವರದಿ ಮಾಡಿಕೊಂಡಿಲ್ಲ.

ಕಳುಹಿಸಿದ್ದ ಪ್ರಸ್ತಾವನೆ ನನೆಗುದಿಗೆ
2017ನೇ ಸಾಲಿನ ಬಳಿಕ ನೇಮಕಾತಿ ನಡೆದಿಲ್ಲ. ಈ ಮಧ್ಯೆ ವಿವಿಧ ಇಲಾಖೆಗಳಿಂದ ಸ್ವೀಕೃತವಾಗಿದ್ದ 43 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪ್ರಸ್ತಾವನೆ ಆಯೋಗಕ್ಕೆ ಸಲ್ಲಿಸಲಾಗಿತ್ತು. ಆದರೆ, ಸರಕಾರದ ಪರಿಷ್ಕೃತ ರೋಸ್ಟರ್‌ ವರ್ಗೀಕರಣದ ಪ್ರಕಾರ ಹುದ್ದೆಗಳನ್ನು ಗುರುತಿಸುವಂತೆ ಪ್ರಸ್ತಾವನೆ ಸಲ್ಲಿಸಲು ಆಯೋಗವು ಸರಕಾರದ ಪ್ರಸ್ತಾವನೆ ವಾಪಸ್‌ ಕಳಿಸಿದೆ. ಈಗ ಅದೂ ನನೆಗುದಿಗೆ ಬಿದ್ದಿದೆ.

ಪತ್ರ ಬರೆದರೂ ಉತ್ತರವಿಲ್ಲ
ಈ ನಡುವೆ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯನ್ನು ಪ್ರತಿ ವರ್ಷ ನಿಯಮಿತವಾಗಿ ನಡೆಸಲು ಸಂಬಂಧಪಟ್ಟ ಎಲ್ಲ ಇಲಾಖೆಗಳು ತಮ್ಮ ಇಲಾಖೆಯ ನೇಮಕಾತಿ ಪ್ರಸ್ತಾವನೆಗಳನ್ನು ಮುಂದಿನ 5 ವರ್ಷಗಳ ಅವಧಿಯಲ್ಲಿ ನಿವೃತ್ತಿ-ಮುಂಭಡ್ತಿ ಮತ್ತಿತರ ಕಾರಣಗಳಿಗೆ ಹುದ್ದೆಗಳು ಖಾಲಿ ಆಗುವ ಆಧಾರದಲ್ಲಿ ಆಯೋಗಕ್ಕೆ ಸಲ್ಲಿಸಬೇಕು ಎಂದು ಮಾರ್ಚ್‌ನಲ್ಲಿ ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆದಿದ್ದರೂ ಈವರೆಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಆಯೋಗದ ಕೈ ಕಟ್ಟಿ ಹಾಕಿದಂತಾಗಿದೆ. ಇಲಾಖೆಗಳಿಂದ ಸಕಾಲಕ್ಕೆ ನೇಮಕಾತಿ ಪ್ರಸ್ತಾವನೆಗಳು ಬರದಿದ್ದರೆ ಕಾಲಮಿತಿಯೊಳಗೆ ನೇಮಕಾತಿ ಪೂರ್ಣ ಗೊಳಿಸಲು ಸಾಧ್ಯವಿಲ್ಲ. ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಗಳ ವಿಳಂಬದಿಂದಾಗಿ ಆಯೋಗ ಸಾರ್ವಜನಿಕರ “ಕೆಂಗಣ್ಣಿ’ಗೆ ಗುರಿಯಾಗಬೇಕಿದೆ ಎಂದು ಆಯೋಗದ ಅಧಿಕಾರಿಗಳು ಹೇಳುತ್ತಾರೆ.

Advertisement

ನೇಮಕಾತಿ ವಿಳಂಬಕ್ಕೆ ಕಾರಣಗಳೇನು?
ಖಾಲಿ ಹುದ್ದೆಗಳ ನೇಮಕಾತಿ ಪ್ರಸ್ತಾವನೆಗಳನ್ನು ಕಾಲಬದ್ಧವಾಗಿ ಪ್ರತಿ ವರ್ಷ ಆಯೋಗಕ್ಕೆ ಸಲ್ಲಿಸುವ ವಿಚಾರದಲ್ಲಿ ಸರ್ಕಾರ ಮತ್ತು ಸಂಬಂಧಿಸಿದ ಆಡಳಿತ ಇಲಾಖೆಗಳು ಗಂಭೀರತೆ ತೋರದಿರುವುದು. ಜತೆಗೆ ಖಾಲಿ ಹುದ್ದೆಗಳ ನೇಮಕಾತಿ ಪ್ರತಿ ಇಲಾಖೆಯು ತನ್ನದೇ ಆದ ಪ್ರತ್ಯೇಕ ವ್ಯವಸ್ಥೆ ಅನುಸರಿಸುತ್ತಿದೆ. ಮುಖ್ಯವಾಗಿ ಆರ್ಥಿಕ ಇಲಾಖೆಯಿಂದ ಅನುಮೋದನೆಯನ್ನೂ ಆಯಾ ಇಲಾಖೆಗಳು ಪ್ರತ್ಯೇಕವಾಗಿ ಪಡೆದುಕೊಳ್ಳುತ್ತಿವೆ. ನೇಮಕಾತಿ ನಿಯಮಗಳು ಮತ್ತು ಲೋಕಸೇವಾ ಆಯೋಗದ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಇವೆಲ್ಲ ನೇಮಕಾತಿ ವಿಳಂಬಕ್ಕೆ ಕಾರಣವಾಗಿದೆ ಎಂದು ಆಯೋಗದ ಮೂಲಗಳು ಹೇಳುತ್ತವೆ.

ಪರಿಹಾರವೇನು: ಖಾಲಿ ಹುದ್ದೆಗಳನ್ನು ಇಲಾಖಾವಾರು ಗುರುತಿಸಿ ಏಕೀಕೃತ ವ್ಯವಸ್ಥೆಯಲ್ಲಿ ನೇಮಕಾತಿ ಪ್ರಸ್ತಾವನೆಗಳು ಪ್ರತಿ ವರ್ಷ ಸಲ್ಲಿಕೆ ಆಗಬೇಕು. ಸರಕಾರದ ಎಚ್‌ಆರ್‌ಎಂಎಸ್‌ ದತ್ತಾಂಶ ಆಧರಿಸಿ ಮುಂದಿನ 5 ವರ್ಷಗಳಲ್ಲಿ ಖಾಲಿ ಆಗುವ ಹುದ್ದೆಗಳನ್ನು ಗುರುತಿಸಬೇಕು. ಅದರಂತೆ ಪ್ರತಿ ವರ್ಷಕ್ಕೆ ನೇಮಕಾತಿ ಪ್ರಸ್ತಾವನೆ ಸಲ್ಲಿಸಬೇಕು. ಎಲ್ಲ ಇಲಾಖೆಗಳನ್ನೂ ಸೇರಿಸಿ ಪ್ರತ್ಯೇಕವಾಗಿ “ನೇಮಕಾತಿ ಕಾರ್ಯದರ್ಶಿ’ ನೇಮಕವಾಗಬೇಕು. ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳು ಇರುವುದು 21 ಇಲಾಖೆಗಳಲ್ಲಿ ಮಾತ್ರ. ಕ್ರಮಬದ್ಧ ವ್ಯವಸ್ಥೆಯನ್ನು ಜಾರಿಗೆ ತಂದರೆ ಕಾಲಬದ್ಧವಾಗಿ ನೇಮಕಾತಿ ಪ್ರಸ್ತಾವನೆ ಸಲ್ಲಿಸುವುದು ಕಷ್ಟವೇನಲ್ಲ. ಇಲಾಖೆಗಳಿಂದ ಪ್ರತಿ ವರ್ಷ ಮಾರ್ಚ್‌ನಲ್ಲಿ ನೇಮಕಾತಿ ಪ್ರಸ್ತಾವನೆಗಳು ಬಂದಲ್ಲಿ ಮುಂದಿನ ಮಾರ್ಚ್‌ ವೇಳೆಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಆಯೋಗದ ಅಧಿಕಾರಿಗಳು ಹೇಳುತ್ತಾರೆ.

ಖಾಲಿ ಹುದ್ದೆಗಳ ಭರ್ತಿಗೆ ಪ್ರತಿ ವರ್ಷ ಆಯಾ ಇಲಾಖೆಗಳು ಏಕೀಕೃತ ವ್ಯವಸ್ಥೆಯಲ್ಲಿ ನೇಮಕಾತಿ ಪ್ರಸ್ತಾವನೆ ಸಲ್ಲಿಸುವಂತಾಗಬೇಕು. ಹಾಗೆ ಪ್ರತಿ ವರ್ಷ ಎಪ್ರಿಲ್‌ಗೆ ಪ್ರಸ್ತಾವನೆ ಆಯೋಗಕ್ಕೆ ಸಲ್ಲಿಕೆಯಾದಲ್ಲಿ ಒಂದೇ ಹಂತದ ನೇಮಕಾತಿ ಇದ್ದರೆ 4 ತಿಂಗಳಲ್ಲಿ, ಎರಡು ಹಂತದ ನೇಮಕಾತಿ ಪ್ರಕ್ರಿಯೆ ಇದ್ದರೆ 6ರಿಂದ 8 ತಿಂಗಳು, ಮೂರು ಹಂತದ ನೇಮಕಾತಿ ಪ್ರಕ್ರಿಯೆ ಇದ್ದರೆ ಗರಿಷ್ಠ 10 ರಿಂದ 12 ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
– ಸುರಳ್ಕರ್‌ ವಿಕಾಸ್‌ ಕಿಶೋರ್‌, ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next