ಕಡೆಗೂ ಕೇಂದ್ರ ಸರಕಾರ ಲೋಕಪಾಲ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಆದರೆ ಆರಂಭದಲ್ಲೇ ಇದಕ್ಕೆ ಅಡಚಣೆಯೂ ಎದುರಾಗಿದೆ. ಸದನದಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ತನ್ನನ್ನು ವಿಶೇಷ ಆಹ್ವಾನಿತ ಎಂಬ ನೆಲೆಯಲ್ಲಿ ಲೋಕಪಾಲ ನೇಮಕಾತಿ ಸಭೆಗೆ ಆಹ್ವಾನಿಸಿರುವುದನ್ನು ಪ್ರತಿಭಟಿಸಿ ಭಾಗವಹಿಸದೆ ಇರುವುದರಿಂದ ಸಭೆ ಅಪೂರ್ಣವಾಗಿದೆ. ವಿಶೇಷ ಆಹ್ವಾನಿತನಾಗಿ ಹೋದರೆ ಸಭೆಯಲ್ಲಿ ಸುಮ್ಮನೆ ಕುಳಿತುಕೊಳ್ಳಬೇಕಾಗುತ್ತದೆ. ಮತದಾನದಲ್ಲಿ ಭಾಗವಹಿಸುವ ಮತ್ತು ಅಭಿಪ್ರಾಯ ತಿಳಿಸಲು ಸಾಧ್ಯವಾಗುವುದಿಲ್ಲ. ಬರೀ ಮೂಕಪ್ರೇಕ್ಷಕನಾಗಿ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಖರ್ಗೆ ಹೇಳಿರುವುದರಲ್ಲೂ ಸತ್ಯವಿದೆ. 2013ರಲ್ಲಿ ರಚಿಸಲಾದ ಲೋಕಪಾಲ ಕಾಯಿದೆ ಪ್ರಕಾರ ಲೋಕಪಾಲರ ನೇಮಕಾತಿಗೆ ಪ್ರಧಾನಿ, ಲೋಕಸಭಾ ಸ್ಪೀಕರ್, ಸುಪ್ರೀಂ ಕೋರ್ಟಿನ ಮುಖ್ಯ ನಾಯ್ನಾಧೀಶರು ಇರಬೇಕು. ಆದರೆ ಪ್ರಸ್ತುತ ಲೋಕಸಭೆಯಲ್ಲಿ ಅಧಿಕೃತ ವಿಪಕ್ಷವೇ ಇಲ್ಲದಿರುವುದರಿಂದ ಲೋಕಪಾಲ ನೇಮಕ ಸಮಿತಿಯೇ ಅಪೂರ್ಣವಾಗಿದೆ. ಹೀಗಾಗಿ ಸರಕಾರ ಲೋಕಸಭೆಯಲ್ಲಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ನ ಸಂಸದೀಯ ನಾಯಕನನ್ನು ಆಹ್ವಾನಿಸಿತ್ತು.
ಹಾಗೆಂದು ಇದೇನೂ ಬಗೆಹರಿಸಲಾಗದ ಸಮಸ್ಯೆಯಲ್ಲ. ಲೋಕಸಭೆಯ ಅಧಿಕೃತ ವಿಪಕ್ಷ ನಾಯಕ ಎಂಬುದನ್ನು ಲೋಕಸಭೆಯ ವಿಪಕ್ಷಗಳ ಪೈಕಿ ಅತಿ ದೊಡ್ಡ ಪಕ್ಷದ ನಾಯಕ ಎಂದು ತಿದ್ದುಪಡಿ ಮಾಡಿಕೊಂಡರೆ ಸಾಕು. ಈ ಮೂಲಕ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬಹುದು. ಸುಪ್ರೀಂ ಕೋರ್ಟ್ ಕೂಡಾ ವಿಪಕ್ಷ ನಾಯಕನಿಲ್ಲದೆಯೂ ಲೋಕಪಾಲರನ್ನು ನೇಮಿಸಬಹುದು ಎಂದು ಹೇಳುವ ಮೂಲಕ ಹಸಿರು ನಿಶಾನೆ ತೋರಿಸಿದೆ. ಆದರೆ ಸರಕಾರವೇಕೋ ಇನ್ನೂ ಲೋಕಪಾಲ ವಿಚಾರದಲ್ಲಿ ಉದಾಸೀನ ಧೋರಣೆ ಅನುಸರಿಸುತ್ತಿರುವಂತೆ ಕಾಣಿಸುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಲೋಕಪಾಲ ಮತ್ತೆ ನನೆಗುದಿಗೆ ಬೀಳುವ ಸಾಧ್ಯತೆ ಗೋಚರಿಸುತ್ತದೆ. ಹೀಗಾದರೆ ವಿಪಕ್ಷಕ್ಕಿಂತಲೂ ಹೆಚ್ಚು ನಷ್ಟವಾಗುವುದು ಸರಕಾರಕ್ಕೆ ಎನ್ನುವುದನ್ನು ನರೇಂದ್ರ ಮೋದಿ ನೇತೃತ್ವದ ಆಡಳಿತ ತಿಳಿದುಕೊಳ್ಳಬೇಕು. ಕಾಯಿದೆಗೆ ತಿದ್ದುಪಡಿ ಮಾಡಿ ಕಾಂಗ್ರೆಸ್ ಸಂಸದೀಯ ನಾಯಕನನ್ನು ಆಯ್ಕೆ ಸಮಿತಿಯಲ್ಲಿ ಸೇರಿಸಿಕೊಳ್ಳಲು ಅನುವು ಮಾಡಿಕೊಡುತ್ತೇವೆ ಎಂದು ಸ್ವತಹ ಪ್ರಧಾನಿ ಮೋದಿಯೇ ಹಿಂದೊಮ್ಮೆ ಹೇಳಿದ್ದರು. ಅಲ್ಲದೆ 2014ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಲೋಕಪಾಲ ರಚನೆ ವಿಚಾರವನ್ನು ಪ್ರಸ್ತಾವಿಸಿತ್ತು. ಇದೀಗ ಮುಂದಿನ ಚುನಾವಣೆಗೆ ಬರುವಷ್ಟರಲ್ಲಾದರೂ ಲೋಕಾಯುಕ್ತ ನೇಮಕವಾಗದಿದ್ದರೆ ಎದುರಾಳಿಗಳಿಗೆ ಅದೇ ಒಂದು ಅಸ್ತ್ರವಾಗಲಿದೆ ಎನ್ನುವುದು ಬಿಜೆಪಿಗೆ ತಿಳಿದಿಲ್ಲ ಎಂದಲ್ಲ, ಆದರೂ ಏಕೋ ಲೋಕಾಯುಕ್ತ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ.
ಲೋಕಾಯುಕ್ತ ನೇಮಕಾತಿಗೆ ಚಾಲನೆ ದೊರಕಿರುವುದು ಕೂಡ ಸರಕಾರದ ಮುತುವರ್ಜಿ ಅಥವಾ ಇಚ್ಛಾಶಕ್ತಿಯಿಂದ ಅಲ್ಲ. ಬದಲಾಗಿ ಮಾ.1ರೊಳಗಾಗಿ ನೇಮಕಾತಿ ಸಭೆ ಕರೆಯುತ್ತೇವೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದ ವಾಗ್ಧಾನವನ್ನು ಈಡೇರಿಸುವ ಸಲುವಾಗಿ ಗುರುವಾರ ಸಭೆ ಕರೆದಿತ್ತು. ಅಲ್ಲದೆ ಇನ್ನೊಂದೆಡೆಯಿಂದ ಅಣ್ಣಾ ಹಜಾರೆಯವರು ಮಾ. 23ರಿಂದ ದಿಲ್ಲಿಯಲ್ಲಿ ಇನ್ನೊಂದು ಸುತ್ತಿನ ಲೋಕಾಯುಕ್ತ ಹೋರಾಟ ಪ್ರಾರಂಭಿಸುವುದಾಗಿ ಗುಟುರು ಹಾಕುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಸರಕಾರಕ್ಕೆ ಕನಿಷ್ಠ ತಾನು ಪ್ರಕ್ರಿಯೆ ಪ್ರಾರಂಭಿಸಿದ್ದೇನೆ ಎಂದು ತೋರಿಸಿಕೊಳ್ಳುವ ದರ್ದು ಇದೆ. ಹಾಗೆಂದು ಲೋಕಪಾಲರ ನೇಮಕಾತಿಯಾದ ಕೂಡಲೇ ದೇಶ ಭ್ರಷ್ಟಾಚಾರ ಮುಕ್ತವಾಗುತ್ತದೆ ಎಂದಲ್ಲ.
ಆದರೆ ಕನಿಷ್ಠ ಸರಕಾರವನ್ನೂ ಒಳಗೊಂಡಂತೆ ಎಲ್ಲರ ಮೇಲೆ ನಿಗಾ ಇಡುವ ಸ್ವತಂತ್ರ ವ್ಯವಸ್ಥೆಯೊಂದು ಇದೆ ಎಂದಾದರೆ ಅದರ ಭಯವಾದರೂ ಇರುತ್ತದೆ. ಸಿಬಿಐ, ಆದಾಯ ಕರ ಇಲಾಖೆಯಂತೆ ಲೋಕಪಾಲ ಸರಕಾರದ ಆಧೀನ ಸಂಸ್ಥೆಯಲ್ಲ.ಹೀಗಾಗಿ ಇದನ್ನು ಸರಕಾರ ತನ್ನ ಕೈಗೊಂಬೆ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ.
2014ರಲ್ಲಿ ನಿಚ್ಚಳ ಬಹುಮತ ಪಡೆಯುವಲ್ಲಿ ಹಜಾರೆ ನಡೆಸಿದ ಹೋರಾಟದ ಪಾತ್ರವೂ ಇತ್ತು ಎನ್ನುವುದನ್ನು ಬಿಜೆಪಿ ಇಷ್ಟು ಬೇಗ ಮರೆತಿರುವುದು ಮಾತ್ರ ದುರದೃಷ್ಟಕರ. ಈ ಹೋರಾಟದ ಫಲವಾಗಿಯೇ 2013ರಲ್ಲಿ ಯುಪಿಎ ಸರಕಾರ ಲೋಕಪಾಲ ಕಾಯಿದೆಯನ್ನು ರಚಿಸಿದೆ. ಆದರೆ ಲೋಕಪಾಲರ ನೇಮಕವಾಗದೆ ಈ ಕಾಯಿದೆ ಜಾರಿಗೆ ಬರುವಂತಿಲ್ಲ. ಮೋದಿ ಸರಕಾರ ಈಗಾಗಲೇ ಲೋಕಪಾಲ ಕಾಯಿದೆಯನ್ನು ದುರ್ಬಲಗೊಳಿಸಿದ ಆರೋಪಕ್ಕೀಡಾಗಿದೆ.ಸರಕಾರಿ ನೌಕರರು ಮತ್ತು ಎನ್‌ಜಿಒಗಳು ತಮ್ಮ ಆಸ್ತಿ ವಿವರ ಬಹಿರಂಗಪಡಿಸುವುದಕ್ಕಿದ್ದ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ದುರ್ಬಲಗೊಂಡಿದ್ದರೂ ಪರವಾಗಿಲ್ಲ ಒಟ್ಟಾರೆಯಾಗಿ ಲೋಕಪಾಲರ ನೇಮಕವಾಗಲಿ ಎನ್ನುವ ಅಪೇಕ್ಷೆ ನಾಡಿನ ಜನತೆಯದ್ದು. ಆದರೆ ಸರಕಾರದ ಸದ್ಯದ ನಡೆಯನ್ನು ನೋಡಿದರೆ ಈಡೇರುವಂತೆ ಕಾಣಿಸುತ್ತಿಲ್ಲ. ಹೀಗಾದರೆ 2019ರಲ್ಲಿ ಇದಕ್ಕೆ ಭಾರೀ ಬೆಲೆ ತೆರಬೇಕಾದೀತು.