Advertisement

ಸೋಂಕು ಮುಕ್ತರು ತವರಿಗೆ; ಪಾಲಿಕೆ ಸಿದ್ಧತೆ

10:01 AM May 10, 2020 | Suhan S |

ಬೆಂಗಳೂರು: ಹೊಂಗಸಂದ್ರದಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಳ್ಳದ 186 ಜನ ಹಾಗೂ ಗುಣಮುಖರಾದ 5 ಜನ ಸೇರಿ ಎಲ್ಲರನ್ನೂ ಅವರ ಮನೆಗೆ ಕಳುಹಿಸಲು ಪಾಲಿಕೆ ಮುಂದಾಗಿದೆ.

Advertisement

ಈ ಭಾಗದಲ್ಲಿ ವಲಸೆ ಕಾರ್ಮಿಕರಿಂದ ಕೋವಿಡ್ 19 ಸೋಂಕು ಕಾಣಿಸಿಕೊಂಡ ಮೇಲೆ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು. ಕ್ವಾರಂಟೈನ್‌ ಮುಗಿಸಿ ಹಿಂದಿರುಗಿದ ವೇಳೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ, ಮರಳಿ ಊರಿಗೆ ಹೋಗುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ, ಪಾಲಿಕೆ ಇವರ ಕ್ವಾರಂಟೈನ್‌ ಅವಧಿ ಮುಂದುವರಿಸಿತ್ತು.

ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಅನ್ಬು ಕುಮಾರ್‌, ನಿಯಮಗಳ ಪ್ರಕಾರ ಕೋವಿಡ್ 19 ಸೋಂಕು ಕಾಣಿಸಿಕೊಳ್ಳದ, ಸೋಂಕು ಮುಕ್ತರಾದವರ ಕ್ವಾರಂಟೈನ್‌ ಅವಧಿ ವಿಸ್ತರಿಸುವಂತಿಲ್ಲ. ಆದರೆ, ಇವರಲ್ಲಿ ಬಹುತೇಕರಿಗೆ ವಸತಿ ಸಮಸ್ಯೆ ಇದೆ. ಅಲ್ಲದೆ, ಸ್ಥಳಿಯರ ವಿರೋಧವೂ ಇರುವ ಹಿನ್ನೆಲೆಯಲ್ಲಿ ಇವರನ್ನು ಸುರಕ್ಷಿತವಾಗಿ ಇವರ ಊರುಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಇದರಲ್ಲಿ ತಮಿಳುನಾಡು, ಬಿಹಾರ, ಒಡಿಶಾ ಹಾಗೂ ಕರ್ನಾಟಕ ಸೇರಿ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು ಇದ್ದಾರೆ. ಈಗಾಗಲೇ ಕರ್ನಾಟಕದ 20ಜನ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ಕಳುಹಿಸಲಾಗಿದೆ. ಇನ್ನುಳಿದ ಕಾರ್ಮಿಕರನ್ನು ಅವರ ಮನೆಗಳಿಗೆ ಕಳುಹಿಸುವ ಸಂಬಂಧ ಕಂದಾಯ, ಪೊಲೀಸ್‌ ಇಲಾಖೆಯೊಂದಿಗೆ ಮಾತನಾಡಲಾಗಿದ್ದು, ರೈಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಇನ್ನು 2 ದಿನಗಳಲ್ಲಿ ಇವರನ್ನೆಲ್ಲಾ ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಸೋಂಕಿತರ ಸಂಖ್ಯೆ 35ಕ್ಕೆ: ಹೊಂಗಸಂದ್ರದಲ್ಲಿ ಕೋವಿಡ್ 19 ದೃಢಪಟ್ಟ ಕಾರ್ಮಿಕನ ಸಂಪರ್ಕದಲ್ಲಿದ್ದ 5 ಮಂದಿಗೆ ಕೊರೊನಾ ಸೋಂಕು ಇರುವುದು ಶುಕ್ರವಾರ ರಾತ್ರಿ ದೃಢಪಟ್ಟಿದ್ದು, ಹೊಂಗಸಂದ್ರದಲ್ಲಿ ಒಟ್ಟು 35ಜನರಿಗೆ ಕೋವಿಡ್ 19 ಸೋಂಕು ಪ್ರಕರಣ ದಾಖಲಾದಂತಾಗಿದೆ. ಹೊಂಗಸಂದ್ರದಲ್ಲಿ ಬಿಹಾರಿ ಮೂಲದ ಕಾರ್ಮಿಕನ ಸಂಪರ್ಕದಲ್ಲಿದ್ದ ಒಟ್ಟು 191 ಜನರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಸೋಂಕು ದೃಢಪಟ್ಟ ಐವರು ಕ್ವಾರಂಟೈನ್‌ನಲ್ಲಿದ್ದ ಕಾರಣದಿಂದ ಅಪಾಯ ತಪ್ಪಿದೆ.

Advertisement

ಈ ಭಾಗದಲ್ಲಿ ಬಿಹಾರ, ಒಡಿಶಾ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸೇರಿ ವಿವಿಧ ರಾಜ್ಯಗಳಿಂದ ಬಂದವರು ಇದ್ದಾರೆ. ಸದ್ಯ ಐವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಉಳಿದವರ ವರದಿ ನೆಗೆಟಿವ್‌ ಬಂದಿದೆ. ಕ್ವಾರಂಟೈನ್‌ ಅವಧಿ ಮುಗಿದ ಹಿನ್ನೆಲೆಯಲ್ಲಿ 191 ಜನರನ್ನು ಕೋವಿಡ್ 19 ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಐವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ ಎಂದು ಬೊಮ್ಮನಹಳ್ಳಿ ಆರೋಗ್ಯಾಧಿಕಾರಿ ಡಾ.ಸುರೇಶ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಬಿಹಾರ ಮೂಲದ ಒಬ್ಬ ಕಾರ್ಮಿಕನಿಂದ ಪ್ರಾರಂಭವಾಗಿದ್ದ ಕೋವಿಡ್ 19ಸೋಂಕಿನ ಸರಪಳಿ 35ಜನರಿಗೆ ಏರಿಕೆಯಾಗಿದ್ದು, ಐವರು ಸೋಂಕು ಮುಕ್ತರಾಗಿದ್ದಾರೆ. ಈ ಮಧ್ಯೆ ಸೋಂಕು ಮುಕ್ತರಾಗಿರುವವರನ್ನು ಸ್ಥಳೀಯರು ಸೇರಿಸಿಕೊಳ್ಳಲು ಒಪ್ಪುತ್ತಿಲ್ಲ. ಹೀಗಾಗಿ, ಇವರೆಲ್ಲ ಕ್ವಾರಂಟೈನ್‌ ಅವಧಿ ಮುಗಿದರೂ, ಬಿಬಿಎಂಪಿಯೇ ಇವರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next