ಭಾರತದ ಕಿರಾಣಿ ಮಳಿಗೆಗಳು, ಅಥವಾ ಸ್ಥಳೀಯ ಡಬ್ಬಿ ಅಂಗಡಿಗಳು ದೇಶದ ಕಿರಾಣಿ ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ. 90ರಷ್ಟು ಪಾಲನ್ನು ಹೊಂದಿವೆ. ಜಾಗತಿಕ ರೀಟೇಲ್ ಮಾರಾಟಗಾರರು ಮತ್ತು ದೇಶೀಯ ಕಿರಾಣಿ ವ್ಯಾಪಾರಸ್ಥರ ನಡುವೆ ಸ್ಪರ್ಧೆ ಇಲ್ಲಿಯತನಕವೂ ನಡೆದೇ ಇದೆ.
ಕಳೆದ ಎರಡು ದಶಕಗಳಿಂದ, 58 ವರ್ಷದ ಶೆಟ್ಟರು ಮುಂಜಾನೆ ಜನರು ಏಳುವ ಮೊದಲೇ ತಮ್ಮ ಕಿರಾಣಿ ಅಂಗಡಿಯನ್ನು ತೆರೆಯುತ್ತಾರೆ. ತಮ್ಮ ಪ್ರತಿಯೊಬ್ಬ ಗ್ರಾಹಕರ ಬಗ್ಗೆ ಮತ್ತು ಅವರ ಬಳಕೆಯ ಅಭ್ಯಾಸದ ಸಂಕೀರ್ಣ ವಿವರಗಳೂ ಅವರಿಗೆ ಗೊತ್ತು! ಯಾರಿಗೆ ಏನು ಇಷ್ಟ, ಯಾವ ಯಾವ ಬ್ರ್ಯಾಂಡಿನ ಪದಾರ್ಥಗಳನ್ನು ಆಯಾ ಗ್ರಾಹಕರು ಖರೀದಿಸುತ್ತಾರೆ ಎಲ್ಲವನ್ನೂ ಗ್ರಾಹಕರು ಹೇಳದೆಯೂ ತಾವಾಗಿಯೇ ಕಳುಹಿಸಿ ಕೊಡುತ್ತಾರೆ.
ಇನ್ನೂ ಹೇಳಬೇಕೆಂದರೆ ಶೆಟ್ಟರ ಅಂಗಡಿ ಕಿರಾಣಿ ಅಂಗಡಿ ಮಾತ್ರವೇ ಅಲ್ಲ. ಸುತ್ತಮುತ್ತಲ ನಾಗರಿಕರಿಗೆ ಒಟ್ಟು ಸೇರಲು, ಪಾರ್ಸೆಲ್ ಮತ್ತು ಅಂಚೆಯ ಕಾಗದ ಪತ್ರಗಳನ್ನು ಕಲೆಕ್ಟ್ ಮಾಡಲು ಕೇಂದ್ರವೂ ಹೌದು. ಅಷ್ಟಕ್ಕೇ ನಿಲ್ಲದೆ ಶೆಟ್ಟರು ರಿಯಲ್ ಎಸ್ಟೇಟ್ ಏಜೆಂಟರ ಪಾತ್ರವನ್ನೂ ನಿರ್ವಹಿಸುವುದುಂಟು. ಸುತ್ತಮುತ್ತಲ ಮನೆಗಳ ಪರಿಚಯ ಅವರಿಗಿರುವುದರಿಂದ ಯಾವ ಮನೆ ಖಾಲಿ ಇದೆ, ಬಾಡಿಗೆ ಎಷ್ಟು ಎಂಬಿತ್ಯಾದಿ ಮಾಹಿತಿ ಅವರ ನಾಲಗೆ ತುದಿಯಲ್ಲೇ ಇರುತ್ತದೆ. ಇದು ಕಿರಾಣಿ ಅಂಗಡಿ ಮತ್ತು ಸ್ಥಳೀಯರ ನಡುವಿನ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ.
ಬಿ2ಬಿ ಮಾದರಿಯಿಂದ ಪುನಶ್ಚೇತನ: ಆದರೆ ಶೆಟ್ಟರ ಅಂಗಡಿ ಆಗಲೇ ಜನಮಾನಸದಿಂದ ದೂರವಾಗಿರುವುದು ಸುಳ್ಳಲ್ಲ. ಅದಕ್ಕೆ ಕಾರಣವಾಗಿರುವುದು ರೀಟೇಲ್ ಮಳಿಗೆಗಳು, ಇ ಕಾಮರ್ಸ್ ಕ್ಷೇತ್ರ. ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವ ರೀಟೇಲ್ ಮಳಿಗೆಗಳಿಗೆ ಕೋಟ್ಯಂತರ ರೂಪಾಯಿ ಮೊತ್ತದ ಬಂಡವಾಳ ಹೂಡಿರುವ, ಜಾಗತಿಕ ಮಟ್ಟದಲ್ಲೇ ಹೆಸರು ಮಾಡಿರುವ ದೊಡ್ಡ ದೊಡ್ಡ ಸಂಸ್ಥೆಗಳ ಬೆಂಬಲವಿದೆ.
ಆದ್ದರಿಂದಲೇ ಹೆಚ್ಚು ಹೆಚ್ಚು ದರ ಕಡಿತ ಘೋಷಣೆ, ಹೋಮ್ ಡೆಲಿವರಿ ಮುಂತಾದ ಅತ್ಯಾಕರ್ಷಕ ಸವಲತ್ತುಗಳನ್ನು ನೀಡಲು ಸಾಧ್ಯವಾಗಿರುವುದು. ಅದರ ಹೊರತಾಗಿಯೂ ಕಿರಾಣಿ ಅಂಗಡಿಗಳು ಉಳಿದುಕೊಳ್ಳುವುದಕ್ಕೆ ಶೆಟ್ಟರು ತಮ್ಮ ಗ್ರಾಹಕರಿಗೆ ಒದಗಿಸುವ ವಿನೂತನ ಅನುಭವವೇ ಕಾರಣ. ಅಚ್ಚರಿಯೆಂದರೆ ದೊಡ್ಡ ಮಟ್ಟದ ರೀಟೇಲ್ ಸರಣಿಗಳಿಂದ ಕಿರಾಣಿ ಅಂಗಡಿಗಳಿಗೆ ಹೊಡೆತ ಬೀಳುತ್ತದೆ ಎಂದೇ ನಂಬಲಾಗಿತ್ತು.
ಒಂದೋ ಕಿರಾಣಿ ಅಂಗಡಿ ಇರುತ್ತದೆ ಇಲ್ಲವೇ ರೀಟೇಲ್ ಮಾಲ್‌ಗಳು ಇರುತ್ತವೆ ಎಂಬ ಅಭಿಪ್ರಾಯ ಎಲ್ಲರಲ್ಲಿತ್ತು. ಆದರೀಗ ರೀಟೇಲ್ ಮಳಿಗೆಗಳು ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಕಿರಾಣಿ ಅಂಗಡಿಗಳ ಸಹಕಾರವನ್ನು ಪಡೆದುಕೊಳ್ಳುತ್ತಿವೆ. ಇದರಿಂದಾಗಿ ಶೆಟ್ಟರ ಅಂಗಡಿಗಳಿಗೂ ಬೆಳೆಯುವ ಅವಕಾಶ ಸಿಕ್ಕಂತಾಗಿದೆ. ಇದಕ್ಕೆ ಉದಾಹರಣೆಯೆಂದರೆ ಮೆಟ್ರೊ ಕ್ಯಾಶ್ ಅ್ಯಂಡ್ ಕ್ಯಾರಿ.
ಅದು ಬಿ2ಬಿ (ಬಿಝಿನೆಸ್ ಟು ಬಿಝಿನೆಸ್) ಮಾದರಿಯಲ್ಲಿ ಕಾರ್ಯಚರಿಸುತ್ತದೆ. ಆನ್‌ಲೈನ್ ಇ ಕಾಮರ್ಸ್ ತಾಣಗಳು ಈಗಾಗಲೇ ಈ ಮಾದರಿಯನ್ನು ಅಳವಡಿಸಿಕೊಂಡಿವೆ. ಕಿರಾಣಿ ಅಂಗಡಿಗಳು ತಮ್ಮಲ್ಲಿನ ಉತ್ಪನ್ನಗಳನ್ನು ಮಾರಲು ಮೆಟ್ರೋ ವೇದಿಕೆ ಕಲ್ಪಿಸಿಕೊಡುತ್ತದೆ. ಈ ರೀತಿಯ ಯೋಜನೆಗಳು, ಕಿರಾಣಿ ಅಂಗಡಿಗಳು ಅಳಿವಿನಂಚಿಗೆ ತಲುಪುವುದನ್ನು ತಡೆಯಬಲ್ಲವು.
* ವಿಜಯಕುಮಾರ್ ಎಸ್. ಅಂಟೀನ