Advertisement
ಏನಿದು ಕಲಿಕಾ ಚೇತರಿಕೆ..?ಊಟ ಸಿಗದೆ ಸುಸ್ತಾದವನಿಗೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿಸಿ ಗ್ಲೂಕೋಸ್ ಏರಿಸಿ ಗೆಲುವಾಗುವಂತೆ ಮಾಡ್ತಾ ರಲ್ಲ, ಅದೇ ತರಹ ಇದು. ಮಕ್ಕಳಿಗೆ 2 ವರ್ಷದಿಂದ ಪಾಠಗಳು ಸರಿಯಾಗಿಲ್ಲ, ಕಲಿಕೆಯಲ್ಲಿ ಸೊರಗಿ ಹೋಗಿದ್ದಾರೆ. ಹಾಗಾಗಿ ಅವರ ಕಲಿಕೆ ಚೇತರಿಸಿಕೊಳ್ಳಲು ನೀಡು ತ್ತಿರುವ ಒಂದು ವಿಶೇಷ ಉಪಕ್ರಮ ಇದು.
ಕಲಿಯುವಿಕೆ ಮತ್ತು ಮೌಲ್ಯಮಾಪನ ಒಟ್ಟೊಟ್ಟಿಗೆ ಸಾಗುತ್ತದೆ. ಮಗು ತನ್ನದೇ ವೇಗದಲ್ಲಿ ಕಲಿಯಬಹುದು. ಮಗುವನ್ನು ಮುಂದಿನ ತರಗತಿಗೆ ಕಾಲಿಡುವ ಹೊತ್ತಿಗೆ ಅದ ನ್ನು ಆ ತರಗತಿಗೆ ಸಲ್ಲುವಂತೆ ಸಂಪೂರ್ಣವಾಗಿ ಸಿದ್ದ ಗೊಳಿಸುವ ಯೋಜನೆ ಇದು. 2 ಹಂತಗಳಲ್ಲಿ ನಡೆಯುತ್ತದೆ. ಸೆಪ್ಟಂಬರ್‌ವರೆಗೂ ಮೂಲ ಸಾಕ್ಷರತಾ ಕಲಿಕೆ ಮತ್ತು ಅನಂತರ ಕಲಿಕಾ ಫಲಗಳನ್ನು ಸಾಧಿಸುವುದು. ಯೋಜನೆ ಎಷ್ಟು ಪರಿಣಾಮಕಾರಿ ಅನ್ನುವುದಕ್ಕೆ ಮುಂದಿನ ವರ್ಷ ಒಂದು ಪ್ರಾಮಾಣಿಕ ಸರ್ವೇ ಆಗಬೇಕು. ಕಲಿಕಾ ಚೇತರಿಕೆ ಎತ್ತುವ ಪ್ರಶ್ನೆಗಳು..
ಕಲಿಕೆ ಎಂದರೆ ಕಲಿತು ಮರೆಯುವುದೊ ಅಥವಾ ಮರೆ ಯದಂತೆ ಕಲಿತಿದ್ದು ಕೊನೆಯವರೆಗೂ ಉಳಿಯು ವುದೊ? 3ನೇ ತರಗತಿಯಷ್ಟೆ ಓದಿದ ನನ್ನ ತಾತ ಬೆಳಗ್ಗಿನ ನ್ಯೂಸ್ ಪೇಪರನ್ನು ಸರಾಗವಾಗಿ ಓದುವಾಗ ಇದು ಮತ್ತೆ ಮತ್ತೆ ಕಾಡುತ್ತದೆ. ಅವರು ಯಾವುದೇ ಹೊಸ ಹೊಸ ವಿಧಾನಗಳಿಲ್ಲದೆ ಕಲಿತವರು. ಕೋವಿಡ್ ಕಾಲದಲ್ಲಿ ಹತ್ತಾರು ತಿಂಗಳು ತರಗತಿಯೊಳಗೆ ಇಲ್ಲದ ಕಾರಣಕ್ಕೆ ಮಕ್ಕಳು ಕಲಿತಿದ್ದನ್ನು ಮರೆತಿವೆ ಎನ್ನಲಾಗುತ್ತದೆ. ಅದಕ್ಕೂ ಮೊದಲು ಕಲಿತಿದ್ದು ಕಲಿಕೆಯೊ ಅಲ್ಲವೊ? ಮಗುವನ್ನು ಸಂಪರ್ಕಿಸಲು ಮಾಡಿದ ವಿದ್ಯಾ ಗಮ, ವಠಾರ ಶಾಲೆ, ಸಂವೇದ ತರಗತಿಗಳು, ಅಲ್ಲಲ್ಲಿ ಸಾಧ್ಯ ವಾದ ಆನ್‌ಲೈನ್‌ತರಗತಿಗಳು, ಮನೆ ಮನೆ ಭೇಟಿ ಗಳು ಕಿಂಚಿತ್ತೂ ಮಕ್ಕಳನ್ನು ತಲುಪಲಿಲ್ಲವೇ? ಮಕ್ಕಳ ಕಲಿಕೆ ಉಳಿಸುವ ಪ್ರಯತ್ನ ಮಾಡಲಿಲ್ಲವೆ? ಈ ಎಲ್ಲ ಕಾರ್ಯ ಕ್ರಮಗಳು ಯಶಸ್ವಿ ಯಾದವು ಎಂದೇ ಹೇಳಲಾಗುತ್ತಿತ್ತು.
Related Articles
Advertisement
ಮಗುವಿನ ಮನಸ್ಸು ಯಂತ್ರವಲ್ಲ. 3 ವರ್ಷದ್ದನ್ನು ವರ್ಷದಲ್ಲಿ ತುಂಬುವುದು ಹೇಗೆ? ಮುಖ್ಯವಾದ ಅಂಶ ಗಳನ್ನು ಮಾತ್ರ ಕಲಿಸಲಾಗುವುದು ಅಂತ ಹೇಳಲಾಗುತ್ತದೆ. ಯಾವುದು ಮುಖ್ಯವಾದದ್ದು? ಅದನ್ನು ನಿರ್ಧರಿಸುವುದು ಹೇಗೆ? ಮುಖ್ಯವಾದದ್ದೆಂಬುದು ಯಾರ ದೃಷ್ಟಿಯಲ್ಲಿ? ಮಗುವಿನ ದೃಷ್ಟಿಯಲ್ಲೊ? ತಜ್ಞರ ದೃಷ್ಟಿಯಲ್ಲೊ?ಇದು ಕೇವಲ ಸರಕಾರಿ ಶಾಲೆ ಮಕ್ಕಳಿಗೆ ಎಂಬುದು ನೆನಪಿಟ್ಟುಕೊಳ್ಳಬೇಕು. ಖಾಸಗಿ ಮತ್ತು ಅನುದಾನಿತ ಶಾಲೆ ಗಳಲ್ಲ ಯಥಾಪ್ರಕಾರ ಪಠ್ಯಬೋಧನೆ ಇರಲಿದೆ. ಸರಕಾರಿ ಶಾಲೆಯಲ್ಲಿ ಚೆನ್ನಾಗಿ ಓದುವ ಮಗುವಿಗೂ ಕಲಿಕಾ ಚೇತ ರಿಕೆಯು ಒಂದು ಹೇರಿಕೆ. ಅವನ ಜೀವನದಲ್ಲಿ ಆ ವರ್ಷ ಕಲಿಯಬೇಕಾದ ಇಡೀ ವರ್ಷದ ಕಲಿಕೆ ಕಸಿದರೆ ಅವರ ಪೋಷಕರು ಹೇಗೆ ಸ್ವೀಕರಿಸಬಹುದು? ಅವರು ಬಂದು ವರ್ಗಾವಣೆ ಪತ್ರ ಕೇಳಿದರೆ ಏನು ಮಾಡುವುದು?
ಒಂದು ಹೊಸ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಾಗ ಅದನ್ನು ಮೊದಲು ಪ್ರಾಯೋಗಿಕವಾಗಿ ಒಂದೆ ರಡು ಕಡೆ ಜಾರಿಗೊಳಿಸಿ ಅದರ ಪರಿಣಾಮವನ್ನು ಅಭ್ಯಸಿಸಿ ಎಲ್ಲ ಕಡೆ ಜಾರಿಗೊಳಿಸುವುದು ಸರಿಯಾದ ಮಾರ್ಗ. ಆದರೆ ಇಲ್ಲಿ ಹಾಗೆ ಆಗಿಲ್ಲ. ಕಾರ್ಯಕ್ರಮವನ್ನು ನೇರ ಅನುಷ್ಠಾನಗೊಳಿಸಲಾಗುತ್ತಿದೆ. ಅದು ಮಾಡುತ್ತದೆ ಎನ್ನಲಾದ ಮ್ಯಾಜಿಕ್ ಬಗ್ಗೆ ಕುತೂಹಲವಿದೆ. ಶಿಕ್ಷಣ ತಜ್ಞರು ವಿಮರ್ಶೆ ಮಾಡದಿರುವುದು ಆಶ್ಚರ್ಯ ತಂದಿದೆ.
ಪೋಷಕರು ಗಮನಿಸಬೇಕಾದದ್ದು.. ನಿಮ್ಮ ಮಗುವು ಒಂದರಿಂದ 9ನೇ ತರಗತಿ ಯೊಳಗೆ ಓದು ತ್ತಿದ್ದರೆ ಈ ವರ್ಷ ಮಗುವಿನ ಕಲಿಕಾ ಕ್ರಿಯೆ ಭಿನ್ನವಾಗಿ ರಲಿದೆ ಗಮನಿಸಿ. ಸಂಪೂರ್ಣ ಪಠ್ಯಪುಸ್ತಕ ಬೋಧನೆ ಇರು ವುದಿಲ್ಲ. ಯಾವ ಪಾಠ ಆಗಿದೆ? ನೋಟ್ಸ… ಬರೆದಿಲ್ಲವಾ ಅಂತ ಕೇಳುವಂತಿಲ್ಲ. ಈ ವರ್ಷ ಕೇವಲ ಕಲಿಕಾ ಫಲ ಗಳನ್ನು ಆಧರಿಸಿ ಮಗುವಿಗೆ ಕಲಿಕಾ ಹಾಳೆಗಳನ್ನು ನೀಡಲಾ ಗುತ್ತದೆ. ಮಗು ಅದರ ಮೂಲಕ ಕಲಿಯುತ್ತದೆ. ಖಾಸಗಿ ಮತ್ತು ಖಾಸಗಿ ಅನುದಾನಿತ ಶಾಲೆಯ ಬೋಧನೆ ಮತ್ತು ಸರಕಾರಿ ಶಾಲೆಯ ಬೋಧನೆಯನ್ನು ಈ ವರ್ಷ ನೀವು ಹೋಲಿಸಿ ನೋಡುವಂತಿಲ್ಲ. ಎರಡೂ ಭಿನ್ನವಾ ಗಿವೆ. ಖಾಸಗಿ ಶಾಲೆಯಲ್ಲಿ ಪಾಠಗಳಾಗುತ್ತಿವೆ. ಇಲ್ಲಿ ಮಗು ಬರೀ ಹಾಳೆ ತಿದ್ದುತ್ತಿದೆ ಎಂದು ಗಾಬರಿ ಬೀಳಬೇಡಿ. ಎರಡು ವರ್ಷದ ಕಲಿಕಾ ಅಂತರ ಸರಿಪಡಿಸಲು ಮಾಡಿರುವ ನೂತನ ಕ್ರಮವೆಂಬುದನ್ನು ತಿಳಿದುಕೊಳ್ಳಿ. ಆಗಾಗ್ಗೆ ಶಾಲೆಗೆ ಭೇಟಿ ನೀಡಿ ಈ ವಿಷಯದ ಬಗ್ಗೆ ನಿಮ್ಮ ಅನುಮಾನ ಪರಿಹರಿಸಿ ಕೊಳ್ಳಿ. ಕೆಲವು ಪ್ರಶ್ನೆಗಳ ಹೊರತಾಗಿ ಇದೊಂದು ಒಳ್ಳೆಯ ಯೋಜನೆ. ಕಲಿಕಾ ಉಪಕ್ರಮ. ನಾವು ಭಾರತೀಯರು ಒಳ್ಳೆ ಯೋಜನೆ ರೂಪಿಸುವುದರಲ್ಲಿ ನಿಸ್ಸೀಮರು. ಅದರ ಅನುಷ್ಠಾನದಲ್ಲಿ ನಮಗೆ ಶಿಸ್ತಿನ ಕೊರತೆ ಇದೆ. ಕಲಿಕಾ ಚೇತರಿಕೆ ಏನು ಮೋಡಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು. ಬಹುಶಃ ಈ ವರ್ಷದ ಕೊನೆಗೆ ಅದರ ಪರಿಣಾಮಗಳು ನಮಗೆ ಕಾಣಸಿಗಬಹುದು. – ಸದಾಶಿವ್ ಸೊರಟೂರು