Advertisement

ಮೇ ತಿಂಗಳಲ್ಲಿ ದಾಖಲೆ ಮಳೆ

11:52 AM May 26, 2018 | |

ಬೆಂಗಳೂರು: ನಿರ್ಗಮನ ಹಂತದಲ್ಲಿರುವ ಪೂರ್ವ ಮುಂಗಾರು ಶುಕ್ರವಾರ ಅಕ್ಷರಶಃ ಆಟಾಟೋಪ ಮೆರೆಯಿತು. ಇದರಿಂದ ಇಡೀ ಮೇ ತಿಂಗಳಲ್ಲಿನ ದಶಕದ ಮಳೆಗೆ ನಗರ ಸಾಕ್ಷಿಯಾಯಿತು.

Advertisement

ನಗರದಲ್ಲಿ ಮೇ ತಿಂಗಳಲ್ಲಿನ ವಾಡಿಕೆ ಮಳೆ 115.9 ಮಿ.ಮೀ. ಆದರೆ, ಇದುವರೆಗೆ ದುಪ್ಪಟ್ಟು ಅಂದರೆ 267.4 ಮಿ.ಮೀ.  ದಾಖಲಾಗಿದ್ದು, ಇದು ಕಳೆದ ಹತ್ತು ವರ್ಷಗಳಲ್ಲಿ ಮೇನಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ಅಷ್ಟೇ ಅಲ್ಲ, ಶತಮಾನದಲ್ಲೇ ಎರಡನೇ ಅತಿ ಹೆಚ್ಚು ಮಳೆ ಕೂಡ ಇದಾಗಿದೆ. ಇನ್ನೂ ನಾಲ್ಕು ದಿನ ಬಾಕಿ ಇರುವುದರಿಂದ ಶತಮಾನದ ಮಳೆಗೆ ಸಾಕ್ಷಿಯಾದರೂ ಅಚ್ಚರಿ ಇಲ್ಲ ಎಂದು ಹವಾಮಾನ ತಜ್ಞರು ಹೇಳುತ್ತಾರೆ. 

1957ರ ಮೇನಲ್ಲಿ 287.1 ಮಿ.ಮೀ. ಮಳೆಯಾಗಿದ್ದು, ಇದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ. ಇನ್ನು 2017ರ ಮೇನಲ್ಲಿ 241.9 ಮಿ.ಮೀ. ಮಳೆಯಾಗಿತ್ತು. ಪ್ರಸಕ್ತ ಸಾಲಿನ ಮಳೆ ಈ ದಶಮಾನದ ದಾಖಲೆಯನ್ನು ಸರಿಗಟ್ಟಿದೆ. ಇಡೀ ತಿಂಗಳಲ್ಲಿ 11ರಂದು ಅತಿ ಹೆಚ್ಚು 49.5 ಮಿ.ಮೀ. ಹಾಗೂ ಶುಕ್ರವಾರ (ಮೇ 25) ರಾತ್ರಿ 8.30ರವರೆಗೆ 30.2 ಮಿ.ಮೀ. ಮಳೆಯಾಗಿದೆ.

ಒಟ್ಟಾರೆ 267.4 ಮಿ.ಮೀ. ಸುರಿದಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ. ಇನ್ನು ಕಳೆದ 25 ದಿನಗಳಲ್ಲಿ 12 ದಿನಗಳು ನಗರದಲ್ಲಿ ಮಳೆ ಸುರಿದಿದ್ದು, ಇದರಿಂದ 25 ದಿನಗಳಲ್ಲಿ 19 ದಿನಗಳು ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರುವುದು ಕಂಡುಬಂದಿದೆ. ಅದರಲ್ಲೂ ನಾಲ್ಕೈದು ದಿನಗಳು ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶದಲ್ಲಿ ಕುಸಿತ ಕಂಡುಬಂದಿದೆ ಎಂದೂ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಪೂರ್ವಮುಂಗಾರು ನಿರ್ಗಮನದ ವೇಳೆ ಈ ರೀತಿ ಮಳೆಯಾಗುವುದು ಸಾಮಾನ್ಯ. ತಮಿಳುನಾಡಿನ ಕರಾವಳಿ ಸಮೀಪ ಮೇಲ್ಮೆ„ಸುಳಿಗಾಳಿ ಇದ್ದು, ಇದರಿಂದ ಕರ್ನಾಟಕದ ಒಳನಾಡಿನಲ್ಲಿ “ಕಡಿಮೆ ಒತ್ತಡದ ತಗ್ಗು’ (ಟ್ರಫ್) ಉಂಟಾಗಿದೆ. ಹಾಗಾಗಿ, ಇನ್ನೂ ಎರಡು-ಮೂರು ದಿನಗಳು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಎಲ್ಲೆಲ್ಲಿ ಎಷ್ಟು ಮಳೆ?: ಈ ಮಧ್ಯೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನಗರದ ವಿವಿಧೆಡೆ ಅಳವಡಿಸಿದ ಮಳೆ ಮಾಪನ ಕೇಂದ್ರಗಳಲ್ಲಿ ಶುಕ್ರವಾರ ಗರಿಷ್ಠ 59 ಮಿ.ಮೀ. ಮಳೆ ದಾಖಲಾಗಿದೆ. ದಾಸನಪುರದಲ್ಲಿ 50.5 ಮಿ.ಮೀ., ಯಲಹಂಕದಲ್ಲಿ 30.5, ಚಿಕ್ಕಬಾಣಾವರ 41, ಹೊಸಕೋಟೆ 53, ಕೊಡತಿ 29.5, ಎಚ್‌ಎಸ್‌ಆರ್‌ ಲೇಔಟ್‌ 11.5, ಹುಸ್ಕೂರು 37.5, ಹೆಸರಘಟ್ಟ 27.5, ನಾಗರಬಾವಿ 22.5, ಕೂಡಿಗೇಹಳ್ಳಿ 17, ಮಾದಾವರ 30.5, ಯಶವಂತಪುರ 12, ಲಾಲ್‌ಬಾಗ್‌ 19.5, ಬಸವನಗುಡಿ 18 ಮಿ.ಮೀ. ಮಳೆಯಾಗಿದೆ. 

ಕಳೆದ ಹತ್ತು ವರ್ಷಗಳಲ್ಲಿ ಮೇನಲ್ಲಿ ನಗರದಲ್ಲಿ ಬಿದ್ದ ಮಳೆ (ಹವಾಮಾನ ಇಲಾಖೆ ಪ್ರಕಾರ).
ವರ್ಷ    ಮಳೆ (ಮಿ.ಮೀ)

2018 (ಮೇ 25ಕ್ಕೆ)    267.4
2017    241.9
2016    140.6
2015    178.4
2014    74.6
2013    151
2012    143.6
2011    150.5
2010    108.2
2009    150
2008    84.8
1957    287.1

Advertisement

Udayavani is now on Telegram. Click here to join our channel and stay updated with the latest news.

Next