Advertisement

ದಾಖಲೆಯ ಆಸ್ತಿ ತೆರಿಗೆ ಸಂಗ್ರಹ

12:40 PM Aug 13, 2018 | Team Udayavani |

ಬೆಂಗಳೂರು: ಬಿಬಿಎಂಪಿ ಆನ್‌ಲೈನ್‌ ಆಸ್ತಿ ತೆರಿಗೆ ಪಾವತಿಯಲ್ಲಿನ ಗೊಂದಲಗಳು ನಿವಾರಣೆಯಾದ ಬೆನ್ನಲ್ಲೇ  ಆಗಸ್ಟ್‌ ತಿಂಗಳ ವೇಳೆ ದಾಖಲೆಯ 1,731 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. 

Advertisement

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಕೇವಲ 139 ಕೋಟಿ ರೂ. ಮಾತ್ರ ಸಂಗ್ರವಾಗಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಾಗಿದ್ದು, ಕಳೆದ ಎರಡು ತಿಂಗಳಲ್ಲಿ 592 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. 

ಬಿಬಿಎಂಪಿ ವತಿಯಿಂದ ಶೇ.5ರಷ್ಟು ತೆರಿಗೆ ವಿನಾಯಿತಿಯನ್ನು ಕೇವಲ ಏಪ್ರಿಲ್‌ ತಿಂಗಳಿಗೆ ಮಾತ್ರ ಸೀಮಿತಗೊಳಿಸಿದರಿಂದ ಒಂದೇ ತಿಂಗಳಲ್ಲಿ 1 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. ಅದಾದ ನಂತರ ತೆರಿಗೆ ಸಂಗ್ರಹಕ್ಕೆ ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹೆಚ್ಚಿನ ಆಸಕ್ತಿ ತೋರದ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹದಲ್ಲಿ ಕುಂಠಿತವಾಗಿತ್ತು. 

ಮಹದೇವಪುರದಲ್ಲಿ ಹೆಚ್ಚಿನ ತೆರಿಗೆ ಸಂಗ್ರಹ: ಬಿಬಿಎಂಪಿಯ 8 ವಲಯಗಳ ಪೈಕಿ ಮಹದೇವಪುರ ವಲಯದಲ್ಲಿ ಹೆಚ್ಚು ತೆರಿಗೆ ಸಂಗ್ರಹವಾಗಿದ್ದು, ಮಹದೇವಪುರ ವಲಯವೊಂದರಲ್ಲೇ 394.89 ಕೋಟಿ ರೂ. ಆದಾಯ ಪಾಲಿಕೆಗೆ ಬಂದಿದೆ. ಉಳಿದ 7 ವಲಯಗಳಲ್ಲಿ ದಾಸರಹಳ್ಳಿಯಲ್ಲಿ ಅತಿ ಕಡಿಮೆ, ಅಂದರೆ ಕೇವಲ 48.37 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಉಳಿದಂತೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 100 ಕೋಟಿ ರೂ. ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಿರುವುದು ಕಂಡುಬಂದಿದೆ. 

1,369 ಕೋಟಿ ರೂ. ಸಂಗ್ರಹವಾಗಬೇಕಿದೆ: 2018-19ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು 3,100 ಕೋಟಿ ರೂ.ಗೆ ನಿಗದಿ ಮಾಡಲಾಗಿದೆ. ಅದರಂತೆ ಈವರೆಗೆ 1,731.34 ಕೋಟಿ ರೂ. ಸಂಗ್ರಹಿಸಲಾಗಿದ್ದು, ಮುಂದಿನ ಏಳು ತಿಂಗಳಲ್ಲಿ 1,369 ಕೋಟಿ ರೂ. ತೆರಿಗೆ ಸಂಗ್ರಹಿಸಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next