Advertisement

Mantri Mall: ತೆರಿಗೆ ಬಾಕಿ; ಮಂತ್ರಿ ಮಾಲ್‌ಗೆ ಬೀಗ ಮುದ್ರೆ

11:37 AM May 11, 2024 | Team Udayavani |

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಿದ್ದಾರೆ. 50 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಪೊಲೀಸ್‌ ಬಿಗಿ ಭದ್ರತೆಯಲ್ಲಿ ಬೀಗ ಮುದ್ರೆ ಹಾಕಿದ್ದಾರೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಾರಣ ಬಂದ್‌ ಮಾಡಲಾಗಿದೆ ಎಂದು ನೋಟಿಸ್‌ ಬ್ಯಾನರ್‌ ಅಂಟಿಸಲಾಗಿದೆ.

Advertisement

ಹಲವು ವರ್ಷಗಳಿಂದ ಮಲ್ಲೇಶ್ವರದ ಮಂತ್ರಿ ಮಾಲ್‌ ಮಾಲೀಕರು ತೆರಿಗೆ ಪಾವತಿ ಮಾಡಿಲ್ಲ. ಹಲವು ಬಾರಿ ನೋಟಿಸ್‌ ನೀಡಿದ್ದರೂ ಹಣ ಪಾವತಿಸದ ಕಾರಣಕ್ಕೆ ಮತ್ತೆ ಬೀಗ ಮುದ್ರೆ ಹಾಕಲಾಗಿದೆ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾಲ್‌ನ ಮುಖ್ಯ ದ್ವಾರಕ್ಕೆ ಬೀಗ ಹಾಕುವುದರೊಂದಿಗೆ ನೋಟಿಸ್‌ ಕೂಡ ಅಂಟಿಸಲಾಗಿದ್ದು, ಬಿಬಿಎಂಪಿ ಕಾಯ್ದೆ 2020ರ ಕಲಂ 156 ಹಾಗೂ ದಿನಾಂಕ 2023ರ ಡಿಸೆಂಬರ್‌ 6ರ ಸುತ್ತೂಲೆಯಂತೆ ನಿಮ್ಮ ವ್ಯಾಪಾರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.

ಬಿಬಿಎಂಪಿ ಆದೇಶ ಮೇರೆಗೆ ಬಾಕಿ ಆಸ್ತಿ ತೆರಿಗೆಗಳನ್ನು ಪಾವತಿಸದ ಕಾರಣಕ್ಕಾಗಿ ಆಸ್ತಿಯನ್ನು ಸೀಲ್‌ ಮಾಡಲಾಗಿದೆ ಎಂದು ಬ್ಯಾನರ್‌ ಅಳವಡಿಸಲಾಗಿದ್ದು, ಮಾರ್ಷಲ್‌ಗ‌ಳನ್ನು ಕಾವಲಿರಿಸಲಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯೆ ಬೆಳಗ್ಗೆ ಕೆಲಸಕ್ಕೆ ಆಗಮಿಸಿದ ಮಾಲ್‌ ಸಿಬ್ಬಂದಿ ಹಲವು ಹೊತ್ತು ಮಾಲ್‌ ಎದುರು ನಿಂತಿದ್ದರು. ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಸುತ್ತುವರಿದಿರುವುದನ್ನು ಗಮನಿಸಿ ಹಲವು ಹೊತ್ತುಗಳ ಬಳಿಕ ಮನೆಯತ್ತ ಮುಖ ಮಾಡಿದರು. ಈ ಹಿಂದೆ ಮಂತ್ರಿ ಮಾಲ್‌ ಸುಮಾರು 42.63 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಆ ವೇಳೆ ಮಾಲ್‌ ಕಚೇರಿಯ ಕುರ್ಚಿ, ಟೇಬಲ್‌, ಕಂಪ್ಯೂಟರ್‌ ಹಾಗೂ ಇತರೆ ವಸ್ತುಗಳನ್ನು ಬಿಬಿಎಂಪಿ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಮಾಲ್‌ ಮಾಲೀಕರು ಕೋರ್ಟ್‌ ಮೂಲಕ ಬೀಗ ತೆಗೆಸಿ ವ್ಯಾಪಾರ ಆರಂಭಿಸಿದ್ದರು. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಾರಣ ಪಾಲಿಕೆ ಅಧಿಕಾರಿಗಳು ಬೀಗ ಜಡಿದು ಸೀಜ್‌ ಮಾಡಿ ಯಾರನ್ನೂ ಒಳಗೆ ಹೋಗದಂತೆ ನಿರ್ಬಂಧಿಸಲಾಗಿದೆ.

ಪ್ರತಿ ಬಾರಿ ಬೀಗ ಹಾಕಿದಾಗ ಕೋರ್ಟ್‌ಗೆ ಹೋಗುವ ಮಂತ್ರಿ ಮಾಲ್‌ ಮಾಲೀಕರು, ಪಾಲಿಕೆಯಿಂದ ಕೈಗೊಳ್ಳುವ ಕ್ರಮದ ವಿರುದ್ಧ ತಡೆಯಾಜ್ಞೆ ತಂದು ಮತ್ತೆ ಮಾಲ್‌ ತೆರೆಸಿದ್ದರು.

Advertisement

ಶಾಪಿಂಗ್‌ಗೆ ಬಂದು ವಾಪಸ್‌ : ಅಕ್ಷಯ ತೃತೀಯ ಜತೆಗೆ ಬಸವ ಜಯಂತಿ ಹಿನ್ನೆಲೆಯಲ್ಲಿ ಶುಕ್ರವಾರ ಸರ್ಕಾರಿ ರಜೆ ಇದೆ. ಹೀಗಾಗಿ ಹಲವು ಕುಟುಂಬಗಳು ಶಾಪಿಂಗ್‌ ಮಾಡಲು ಕಾರು ಸೇರಿದಂತೆ ಮತ್ತಿತರ ವಾಹನಗಳಲ್ಲಿ ಬಂದಿದ್ದರು. ಮಾಲ್‌ಗೆ ಬೀಗ ಮುದ್ರೆ ಹಾಕಿರುವುದನ್ನು ನೋಡಿ ನಿರಾಸೆಯಿಂದ ವಾಪಸ್‌ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next