Advertisement
ಕಳೆದ ಬಾರಿ ಎಲ್ಲಾ ಕ್ಷೇತ್ರಗಳಿಂದ 5 ಲಕ್ಷ ಮಂದಿ ಮೈಸೂರಿಗೆ ಭೇಟಿ ನೀಡಿದ್ದರು. ಆದರೆ, ಈ ಬಾರಿ ಈಗಾಗಲೇ ಅ.3ರಿಂದ 10ರವರೆಗೆ 4 ಲಕ್ಷದಷ್ಟು ಮಂದಿ ಭೇಟಿ ನೀಡಿದ್ದು, ಅ.11, 12ರಂದು ಈ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಈ ಎರಡು ದಿನದಂದೆ ಅಂದಾಜು 2 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಅದೇ ರೀತಿ, ಹೋಟೆಲ್ ಉದ್ಯಮದಿಂದ ಈ ಬಾರಿ 100 ಕೋಟಿ ರೂ. ಹೆಚ್ಚು ವಹಿವಾಟು ನಿರೀಕ್ಷಿಸಲಾಗಿದ್ದು, ಉಳಿದ ಕ್ಷೇತ್ರಗಳಾದ ಪ್ರವಾಸೋದ್ಯಮ, ಸಾರಿಗೆ ಮತ್ತು ಸಂಪರ್ಕ ಸೇರಿದಂತೆ ಇತರೆ ಕ್ಷೇತ್ರಗಳಿಂದ 120 ಕೋಟಿ ರೂ.ಗೂ ಹೆಚ್ಚು ವಹಿವಾಟು ನಿರೀಕ್ಷಿಸಲಾಗಿದೆ.
Related Articles
Advertisement
ನಿತ್ಯವೂ 50ರಿಂದ 60 ಸಾವಿರ ಮಂದಿ ಭೇಟಿ: ದಸರಾ ಆರಂಭವಾದಾಗಿನಿಂದ ಸಾರಿಗೆ ಬಸ್, ರೈಲ್ವೆ ಹಾಗೂ ಖಾಸಗಿ ವಾಹನಗಳ ಮೂಲಕ ಮೈಸೂರಿಗೆ ನಿತ್ಯವೂ 50ರಿಂದ 60 ಸಾವಿರ ಮಂದಿ ಭೇಟಿ ನೀಡು ತ್ತಿದ್ದು, ದಸರಾ ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ, ಯುವ ದಸರಾ, ಯುವ ಸಂಭ್ರಮದಂತ ಹತ್ತಾರು ಕಾರ್ಯಕ್ರಮ ವೀಕ್ಷಿಸಿದ್ದಾರೆ.
ಬೆಂಗಳೂರು, ಮಂಗಳೂರು, ಕೇರಳ, ಹಾಸನ ಹೆದ್ದಾರಿಗಳ ಮೂಲಕ ನಿತ್ಯವೂ 8 ಸಾವಿರ ಖಾಸಗಿ ವಾಹನ ಮೈಸೂರಿಗೆ ಆಗಮಿಸಿದ್ದರೆ, ರೈಲುಗಳಲ್ಲಿ ಎಂದಿಗಿಂತ ಶೇ.20 ಹೆಚ್ಚು ಪ್ರಯಾಣಿಕರು ಆಗಮಿಸುತ್ತಿದ್ದು, 45ರಿಂದ 50 ಸಾವಿರ ಮಂದಿ ಬಂದು ಹೋಗುತ್ತಿದ್ದಾರೆ. ಹಾಗೆಯೇ ಸಾರಿಗೆ ಬಸ್‌ಗಳ ಮೂಲಕ ರಾಜ್ಯದ ವಿವಿಧ ಮೂಲೆಗಳಿಂದ 15ರಿಂದ 20 ಸಾವಿರ ಮಂದಿ ಆಗಮಿಸುತ್ತಿದ್ದಾರೆ. ಅ.11 ಮತ್ತು 12 ರಂದು ನಡೆಯುವ ಆಯುಧಪೂಜೆ ಮತ್ತು ವಿಜಯದಶಮಿಗೆ ಈ ಪ್ರಮಾಣ ಶೇ.30ರಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ.
200 ಕೋಟಿಗೂ ಅಧಿಕ ವಹಿವಾಟು: ನಗರದಲ್ಲಿರುವ ವಿವಿಧ ಪ್ರವಾಸಿ ತಾಣಗಳು, ಹೋಟೆಲ್ ಉದ್ಯಮ, ಸಾರಿಗೆ ಮತ್ತು ಸಂಪರ್ಕ ಹಾಗೂ ಇತರೆ ವಲಯದಿಂದ ಈ ಬಾರಿ 200 ಕೋಟಿ ರೂ.ಗೂ ಅಧಿಕ ವ್ಯಾಪಾರ ವಹಿ ವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ. ಈವರೆಗಿನ ದಸರೆಗಳಿಗೆ ಇದು ದಾಖಲೆಯಾಗಿದೆ ಎಂದು ಹೇಳಲಾಗುತ್ತಿದೆ.
ಶೇ.98 ಹೋಟೆಲ್ ಭರ್ತಿ: ಹೊರ ಜಿಲ್ಲೆ, ಹೊರರಾಜ್ಯಗಳಿಂದ ಪ್ರವಾಸಿಗರು ಮೈಸೂರಿನತ್ತ ದಾಂಗುಡಿ ಇಡುತ್ತಿರುವುದರಿಂದಾಗಿ ಪಂಚತಾರಾ ಹೋಟೆಲ್‌ಗಳು ಸೇರಿದಂತೆ ಮೈಸೂರಿನ ವಸತಿಗೃಹಗಳಲ್ಲಿ ಕೊಠಡಿಗಳು ಶೇ.98 ಭರ್ತಿಯಾಗಿವೆ. ನವರಾತ್ರಿ ಆರಂಭದ ದಿನಗಳಿಂದ ಈತನಕ ತ್ರಿತಾರಾ, ಪಂಚತಾರಾ ಹೋಟೆಲ್‌ಗಳು, ಐಷಾರಾಮಿ ವಸತಿ ಗೃಹಗಳು, ಸಾಮಾನ್ಯ ಹೋಟೆಲ್‌ಗಳು ಸೇರಿ 10,500 ಕೊಠಡಿಗಳು ಲಭ್ಯವಿದ್ದು, ಈವರೆಗೆ 9500 ಕೊಠಡಿಗಳು ಬುಕ್ ಆಗಿವೆ. ಶುಕ್ರವಾರ ಭರ್ತಿಯಾಗುವ ಸಾಧ್ಯತೆಗಳಿವೆ. ದರದಷ್ಟೇ ಹೆಚ್ಚಿದ ಬೇಡಿಕೆ ಈ ಬಾರಿಯ ದಸರೆಗೆ ದಸರಾ ಗೋಲ್ಡ್ ಕಾರ್ಡ್, ಅರಮನೆಯಲ್ಲಿ ಜಂಬೂ ಸವಾರಿ ವೀಕ್ಷಣೆ, ಪಂಜಿನ ಕವಾಯತು ವೀಕ್ಷಣೆಗಿರುವ ಟಿಕೆಟ್‌ದರ ದುಪ್ಪಟ್ಟು ಹೆಚ್ಚಾಗಿದ್ದರೆ, ಹೋಟೆಲ್, ಸಾರಿಗೆ ಕ್ಷೇತ್ರದಲ್ಲೂ ದರ ಹೆಚ್ಚಾಗಿದೆ. ಹೀಗಿದ್ದರೂ ಪ್ರವಾಸಿಗರಿಂದ ಬೇಡಿಕೆ ಹೆಚ್ಚಾಗಿದೆ. ಇದರಿಂದ ಸಹಜವಾಗಿ ಆದಾಯವೂ ವೃದ್ಧಿಸಿದೆ.
ಪ್ರವಾಸಿಗರು ಹೆಚ್ಚಳ
4 ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನ
ಆಯುಧಪೂಜೆ, ವಿಜಯದಶಮಿಗೆ ಈ ಪ್ರಮಾಣ ಶೇ.30ರಷ್ಟು ಹೆಚ್ಚಾಗುವ ಸಾಧ್ಯತೆ
ನಿತ್ಯವೂ ಮೈಸೂರಿಗೆ 45ರಿಂದ 50 ಸಾವಿರ ಮಂದಿ ಬಂದು ಹೋಗುತ್ತಿದ್ದಾರೆ
ಹೊಟೇಲ್‌ಗಳು ಬುಕ್ಕಿಂಗ್, ಮೈಸೂರು ನಗರದಲ್ಲಿ ಪ್ರವಾಸಿಗರ ಕಲರವ
■ ಸತೀಶ್ ದೇಪುರ