ಬೆಂಗಳೂರು: ನಿಜಾಮುದ್ದೀನ್‍ಗೆ ಹೋಗಿ ಬಂದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಿ. ಇದಕ್ಕೆ ನಮ್ಮ ತಕರಾರು ಇಲ್ಲ. ಆದರೆ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಕೆಲವರು ಮಾತನಾಡುತ್ತಿದ್ದಾರೆ ಎಂದು ವಿಧಾನಸಭೆಯ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಒಂದು ವೇಳೆ ನಿಜಾಮುದ್ದೀನ್‍ಗೆ ಹೋಗಿ ಬಂದವರ ಪೈಕಿ ಯಾರಾದರೂ ದುರುದ್ದೇಶಪೂರ್ವಕವಾಗಿ ಮಾಹಿತಿ ನೀಡದ್ದೇ ಇದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಿ. ಆದರೆ, ಆ ವರ್ಗದವರನ್ನೇ ಗುರಿಯಾಗಿಟ್ಟುಕೊಂಡು ಆರೋಪ ಮಾಡುವುದು ಸರಿಯಲ್ಲ ಎಂದರು.
ಇಡೀ ಸಮುದಾಯದವರನ್ನು ತಪ್ಪಿತಸ್ತರಂತೆ ಕಾಣವುದುದು ದುರುದ್ದೇಶಪೂರ್ವಕವಾದ ನಡವಳಿಕೆ. ಈ ಸಂಬಂಧ ಶಾಸಕರಾದ ರೇಣುಕಾಚಾರ್ಯ ಮತ್ತು ಯತ್ನಾಳ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ನಿಜಾಮುದ್ದೀನ್‍ಗೆ ಹೋಗಿ ಬಂದವರನ್ನು ಗುಂಡಿಟ್ಟು ಕೊಲ್ಲಿ ಎಂದಿದ್ದಾರೆ. ಈ ಇಬ್ಬರ ಮೇಲೂ ಕ್ರಿಮಿನಲ್ ಕೇಸು ದಾಖಲಿಸಬೇಕು. ಬಂಧಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ಧಾರೆ.
ರೇಣುಕಾಚಾರ್ಯ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಬೇಕು. ಅವರು ಏನೇ ಹೇಳಿಕೆ ಕೊಟ್ಟರೂ ಮುಖ್ಯಮಂತ್ರಿಗಳೇ ಹೇಳಿಕೆ ಕೊಟ್ಟಂತೆ ಆಗುತ್ತದೆ. ಹೀಗಾಗಿ ಅವರು ಆ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ ಎಂದಿದ್ದಾರೆ.
ಶಾಸಕರಾದವರು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಗುಂಡಿಟ್ಟು ಕೊಲ್ಲಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಗುಂಡಿಟ್ಟು ಕೊಲ್ಲಲು ಯಾವ ಕಾನೂನಿನಲ್ಲಿ ಅವಕಾಶವಿದೆ. ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಾನು ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.