Advertisement

ಕುವೆಂಪು ಸಂದೇಶದ ಪುನರ್‌ ಮನನ ಅಗತ್ಯ :ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

01:30 PM Dec 30, 2021 | Team Udayavani |

ದಾವಣಗೆರೆ: ರಾಷ್ಟ್ರಕವಿ ಕುವೆಂಪುರವರು ನೀಡಿರುವ ಮಾನವೀಯ ಮೌಲ್ಯಗಳು ಮತ್ತು ಬದುಕಿನ ಸಂದೇಶಗಳನ್ನು ಪುನರ್‌ ಮನನ ಮಾಡಿಕೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಕುವೆಂಪುರವರ ಮಾನವೀಯ ಮೌಲ್ಯಗಳು, ಬದುಕಿನ ಸಂದೇಶಗಳ ಪುನರ್‌ ಮನನ ಮಾಡುವ ಮೂಲಕ ನಮ್ಮನ್ನು ನಾವು ಯಾವುದೇ ಧರ್ಮ, ಜಾತಿಗೂ ಕಟ್ಟಿ ಹಾಕಿಕೊಳ್ಳದೆ ನಿಜ ಮನುಷ್ಯರಾಗಿ ಬದುಕೋಣ ಎಂದರು. ಹಿರಿಯ ಪತ್ರಕರ್ತ ಬಿ.ಎನ್‌. ಮಲ್ಲೇಶ್‌ ಮಾತನಾಡಿ, ಕುವೆಂಪುರವರು ನಾವುಗಳು ಕೇವಲ ಮನುಷ್ಯ ಅಥವಾ ಮಾನವರಾಗದೇ ವಿಶ್ವ ಮಾನವರಾಗೋಣ ಎಂದಿದ್ದಾರೆ. ಅಂತಹ ಮಹನೀಯರನ್ನು ಫೋಟೋಗಷ್ಟೇ ಸೀಮಿತಗೊಳಿಸದೆ ಅವರ ವಿಚಾರಧಾರೆ, ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ, ನಮ್ಮ ನಡವಳಿಕೆಗಳಲ್ಲೂ ಬದಲಾವಣೆ ಮಾಡಿಕೊಳ್ಳೋಣ ಎಂದು ತಿಳಿಸಿದರು.

ರಾಷ್ಟ್ರಕವಿ ಕುವೆಂಪುರವರು ಕನ್ನಡ ನಾಡು ನುಡಿಯ ಬಗೆಗೆ ಅಪಾರ ಅಭಿಮಾನ ಹೊಂದಿದ್ದರು. ಕನ್ನಡ ಹೆಸರಷ್ಟೇ ಅಲ್ಲ, ಅದೊಂದು ಮಂತ್ರ, ಶಕ್ತಿ, ಮೈಮನಗಳನ್ನ ರೋಮಾಂಚನಗೊಳಿಸುವ ದಿವ್ಯ ಶಕ್ತಿ ಎಂದು ನಂಬಿದ್ದರು. ಮಹಿಳೆಯರ ಬಗೆಗೂ ಅಪಾರ ಗೌರವ ಹೊಂದಿದ್ದರು ಎಂದು ಸ್ಮರಿಸಿದರು. ಕುವೆಂಪುರವರು ಹಾಸ್ಯ ಪ್ರಜ್ಞೆಯ ಮೂಲಕ ಪ್ರಸಂಗವೊಂದನ್ನು ಹೇಳುತ್ತಿದ್ದರು. ಕಾಲ್ಪನಿಕವಾಗಿ ತಾವು ಮರಣ ಹೊಂದಿ ಸ್ವರ್ಗದ ಬಾಗಿಲಿಗೆ ಹೋದಾಗ ನಾನು ರಾಷ್ಟ್ರ ಕವಿ ಎಂದರೂ ಸ್ವರ್ಗದ ಬಾಗಿಲು ತೆರೆಯಲಿಲ್ಲ. ನಾನು “ರಾಮಾಯಣ ದರ್ಶನಂ’ಪುಸ್ತಕ ಬರೆದಿದ್ದೇನೆಂದರೂ ಬಾಗಿಲು ತೆರೆಯಲಿಲ್ಲ. ಕೊನೆಗೆ ನಾನು ಹೇಮಾವತಿಯ ಗಂಡ ಎಂದಾಗ ಸ್ವರ್ಗದ ಬಾಗಿಲು ತೆರೆಯಿತು ಎಂದು ಹೇಳುತ್ತಿದ್ದರು.

ನಾವು ಮಹಿಳೆಯರಿಗೆ ಗೌರವ ಕೊಡಬೇಕು, ಅದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದನ್ನು ಈ ಮೂಲಕ ಹೇಳಿದ್ದಾರೆ ಎಂದರು. ಅಪರ ಜಿಲ್ಲಾಧಿ ಕಾರಿ ಸದಾಶಿವ ಪ್ರಭು, ಒಕ್ಕಲಿಗ ಸಮಾಜದ ಮುಖಂಡರಾದ ಅಶೋಕ್‌, ಕೆ.ಟಿ. ಗೋಪಾಲಗೌಡ, ಯೋಗೇಶ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಜಿ. ನಜ್ಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇತರರು ಇದ್ದರು. ಕಾರ್ಯಕ್ರಮದ ಅಂಗವಾಗಿ ಕುವೆಂಪುರವರ ವಿಶ್ವ ಮಾನವ ಗೀತೆಗಳನ್ನು ಕಲಾವಿದರು ಪ್ರಸ್ತುತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next