Advertisement

ಜಾತ್ರೆಗಳಿಂದ ಜನರಲ್ಲಿ ಸಾಮರಸ್ಯ: ಕರಡಿ

01:57 PM May 11, 2019 | Suhan S |

ಯಲಬುರ್ಗಾ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳಿಂದ ಎಲ್ಲ ಸಮುದಾಯದ ಜನರಲ್ಲಿ ಸಾಮರಸ್ಯ ಮೂಡುತ್ತದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

Advertisement

ಪಟ್ಟಣದ ಮೊಗಿಬಸವೇಶ್ವರ ಜಾತ್ರೆ ಅಂಗವಾಗಿ ನಡೆದ ಉಪನ್ಯಾಸ ಹಾಗೂ ಜನಪದ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ನಾವೆಲ್ಲರು ವಿವಿಧ ಕಾರಣಗಳಿಂದ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದೇವೆ. ನಮ್ಮ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗಬೇಕಾದರೆ ಧಾರ್ಮಿಕ ಚಟುವಟಿಕೆಗಳಲ್ಲಿ ಏಕಾಗ್ರತೆಯಿಂದ ಪಾಲ್ಗೊಂಡಾಗ ಮಾತ್ರ ಸಾಧ್ಯ. ಇದರಿಂದ ರಚನಾತ್ಮಕ ಚಿಂತನೆಗಳು ಮೂಡುವುದರ ಜತೆಗೆ ಬದಲಾವಣೆಗೆ ಪ್ರೇರಣೆಯಾಗುತ್ತದೆ ಎಂದು ಹೇಳಿದರು.

ಸಮಾಜ ಧರ್ಮದ ತಳಹದಿ ಮೇಲೆ ನಿಂತಿದೆ. ಧರ್ಮ ಜಾಗೃತಗೊಳಿಸಿದ ವಿಶ್ವಗುರು ಬಸವಣ್ಣನವರು ಜಗತ್ತು ಕಂಡ ಮಹಾನ್‌ ಮಾನವತವಾದಿಗಳಾಗಿದ್ದಾರೆ. ಮನುಷ್ಯರ ನಡುವೆ ಸಮಾನತೆ, ಸ್ವಾಮರಸ್ಯ ನೆಲೆಸುವಲ್ಲಿ ಶ್ರಮಿಸಿರುವ ಜಗಜ್ಯೋತಿ ಬಸವಣ್ಣನವರು ಇಡೀ ಮನುಕುಲಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ಸಿ.ಎಚ್. ಪಾಟೀಲ ಮಾತನಾಡಿ, ಇಂದಿನ ಯಾಂತ್ರಿಕ ಬದುಕಿನ ಮಧ್ಯೆಯೂ ಹಿರಿಯರು ಹಿಂದಿನಿಂದ ಆಚರಿಸುತ್ತ ಬಂದಿರುವ ಭಾವೈಕ್ಯತೆ ಜಾತ್ರಾ ಮಹೋತ್ಸವಗಳು ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಹಿಂದಿನಿಂದಲೂ ನಮ್ಮ ಹಿರಿಯರು ಸಮಿತಿ ನೇಮಕ ಮಾಡಿಕೊಂಡು ಸುಮಾರು ನೂರು ವ‌ರ್ಷಗಳಿಂದ ಜಾತ್ರೆ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

Advertisement

ಸಾನ್ನಿಧ್ಯ ವಹಿಸಿ ಮಾತನಾಡಿದ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ, ಇಂದಿನ ಜಗತ್ತಿಗೆ ಬಸವಣ್ಣನವರ ವಚನಗಳು ಅರ್ಥಪೂರ್ಣವಾಗಿವೆ. ಜಾತಿ, ಮತ, ಮೇಲು ಕೀಳು ಎಲ್ಲವನ್ನು ಹೊಡೆದು ಹಾಕಿ ಸಮಾಜದಲ್ಲಿ ಸಮಾನತೆ ತರುವಲ್ಲಿ ಅವರ ಪಾತ್ರ ಹಿರಿಯದಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ ಮಾತನಾಡಿ, ಜಾತ್ರಾ ಸಮಿತಿಯವರು ವರ್ಷದಿಂದ ವರ್ಷಕ್ಕೆ ಹೊಸ ಪ್ರತಿಭೆಗಳನ್ನು ಹೊರತರುವ ಜತೆಗೆ ವಿಭಿನ್ನ ಕಾರ್ಯಕ್ರಮ ಆಯೋಜಿಸಿ ಜನರ ಮನಸ್ಸು ತಣಿಸುವ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಕೊಪ್ಪಳದ ಸದಾಶಿವ ಪಾಟೀಲ ಹಾಗೂ ಸಂಗಡಿಗರು ಜನಪದ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.

ಜಾತ್ರಾ ಸಮಿತಿ ಅಧ್ಯಕ್ಷ ಅಮರಪ್ಪ ಕಲಬುರ್ಗಿ, ಸಾಹಿತಿ ಮುನಿಯಪ್ಪ ಹುಬ್ಬಳ್ಳಿ, ಪ್ರಭುರಾಜ ಕಲಬುರ್ಗಿ, ವೀರಣ್ಣ ಹುಬ್ಬಳ್ಳಿ, ದೊಡ್ಡನಗೌಡ ಓಜನಹಳ್ಳಿ, ಸುರೇಶಗೌಡ ಶಿವನಗೌಡ, ಷಣ್ಮಖಪ್ಪ ರಾಂಪುರ, ಬಸವರಾಜ ಅಧಿಕಾರಿ, ಎಸ್‌.ಎನ್‌. ಶ್ಯಾಗೋಟಿ, ಕೆ.ಜಿ. ಪಲ್ಲೇದ, ಎಚ್.ಎಚ್. ಕುರಿ, ಮಲ್ಲಿಕಾರ್ಜುನ ನರೇಗಲ್ಲ, ಸುರೇಶ ಮಾಟೂರ, ವಸಂತ ಭಾವಿಮನಿ, ಈರಪ್ಪ ಬಣಕಾರ, ಕಳಕಪ್ಪ ತಳವಾರ, ಸಿದ್ದರಾಮೇಶ್ವರ ಬೇಲೇರಿ, ಬಸವಲಿಂಗಪ್ಪ ಕೊತ್ತಲ, ಅಮರೇಶ ಹುಬ್ಬಳ್ಳಿ, ಅಶೋಕ ಅರಕೇರಿ ಇದ್ದರು.

ಕಳಕೇಶ ಅರಕೇರಿ ಸ್ವಾಗತಿಸಿದರು. ಶಿಕ್ಷಕ ದೇವಪ್ಪ ವಾಲ್ಮೀಕಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next