ನವದೆಹಲಿ: ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ನೀಡುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಹಿಂದಿ, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕು ಎಂದು ಅಧಿಕೃತ ಭಾಷೆಗೆ ಸಂಬಂಧಿಸಿದ ಸಾಂವಿಧಾನಿಕ ಸಮಿತಿಯು ಶಿಫಾರಸು ಮಾಡಿದೆ.
ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಮತ್ತು ಹಿಂದಿಯೇತರ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಪ್ರಾದೇಶಿಕ ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗೆ ಸಂಬಂಧಿಸಿದ ಸಾಂವಿಧಾನಿಕ ಸಮಿತಿಯು ಕಳೆದ ತಿಂಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದ ತನ್ನ 11ನೇ ವರದಿಯಲ್ಲಿ ಈ ಶಿಫಾರಸುಗಳನ್ನು ಮಾಡಿದೆ.
ಎಲ್ಲ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಿಗೆ ಇಂಗ್ಲಿಷ್‌ಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಗಳಲ್ಲಿ ಒಂದು ಎಂದು ಪರಿಗಣಿಸಬೇಕಿದೆ ಎಂದು ಸಮಿತಿ ಶಿಫಾರಸು ಮಾಡಿದೆ.
ಐಐಟಿ, ಐಐಎಂ, ವಿಶ್ವವಿದ್ಯಾಲಯಗಳು, ಕೇಂದ್ರೀಯ ವಿದ್ಯಾಲಯಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳು ಹಿಂದಿ ಪ್ರಾಧಾನ್ಯ ರಾಜ್ಯಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಮತ್ತು ಹಿಂದಿಯೇತರ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಪ್ರಾದೇಶಿಕ ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕು ಎಂದು ಹೇಳಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರವಾಗಿ ಈ ಶಿಫಾರಸುಗಳನ್ನು ಮಾಡಲಾಗಿದೆ. ಉತ್ತರ ಭಾರತದ ಬಹುತೇಕ ವಿಶ್ವವಿದ್ಯಾಲಯಗಳು ಹಿಂದಿಯನ್ನು ಕೇವಲ ಶೇ.20ರಿಂದ 30ರಷ್ಟು ಮಾತ್ರ ಬಳಸುತ್ತಿದೆ. ಇದು ಶೇ.100ಕ್ಕೆ ಏರಬೇಕಿದೆ. ಇಂಗ್ಲಿಷ್ ಒಂದು ಪರಕೀಯ ಭಾಷೆ. ವಸಾಹತುಶಾಹಿ ಪದ್ಧತಿಯನ್ನು ನಾವು ತೊಡೆದುಹಾಕಬೇಕಿದೆ ಎಂದು ಸಮಿತಿಯ ಉಪಾಧ್ಯಕ್ಷ ಭತೃಹರಿ ಮಹತಾಬ್ ಪ್ರತಿಪಾದಿಸಿದರು.