Advertisement

ಕಲ್ಯಾಣ ಕರ್ನಾಟಕ ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಲು ಶಿಫಾರಸ್ಸು:ಸಚಿವ ಅಶೋಕ್

04:15 PM Oct 16, 2020 | keerthan |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದೆಂದೂ ಕಂಡರಿಯದ ಮಳೆಯಿಂದಾಗಿರುವ ಅತಿವೃಷ್ಟಿ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸುವಂತೆ ಕೇಂದ್ರಕ್ಕೆ ಪತ್ರ ಬರೆದು ಶಿಫಾರಸ್ಸು ಸಲ್ಲಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

Advertisement

ಶುಕ್ರವಾರ ಜಿಲ್ಲೆಯ ಪ್ರವಾಹ ಹಾಗೂ ಅತಿವೃಷ್ಟಿ ಹಾನಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಭಾಗದಲ್ಲಿ ಹಿಂದೆಂದೂ ಆಗದಿರುವಷ್ಟು ಮಳೆಯಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಹೀಗಾಗಿ ಸೂಕ್ತ ಪರಿಹಾರೋಪಾಯ ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ಘೋಷಿಸುವಂತೆ ಕೇಂದ್ರಕ್ಕೆ ಒತ್ತಾಯಿಸುವುದರ ಜತೆಗೆ ಕಳೆದ ವರ್ಷ ಬೆಳಗಾವಿಯಲ್ಲಿ ಆದ ಅತಿವೃಷ್ಟಿಯನ್ನು ವಿಶೇಷ ಎಂಬುದಾಗಿ ಪರಿಗಣಿಸಲಾಗುವುದು ಎಂದು ವಿವರಣೆ ನೀಡಿದರು.

ಅತಿವೃಷ್ಟಿ ಹಾಗೂ ಪ್ರವಾಹ ಹಾನಿ ವೀಕ್ಷಿಸಿದ ನಂತರ ಹಾನಿಯ ಸಮಗ್ರ ವರದಿಯನ್ನು ಮುಖ್ಯ ಮಂತ್ರಿಗಳಿಗೆ ಸಲ್ಲಿಸಿ ಸೂಕ್ತ ಪರಿಹಾರ ಕ್ರಮಕ್ಕೆ ಮುಂದಾಗಲಾಗುವುದು. ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಗಳ ಬಳಿ ಪಿಡಿ ಖಾತೆ ಯಲ್ಲಿ ಹಣವಿದೆ. ಪರಿಹಾರ ಕ್ರಮಗಳಿಗೆ ಹಣದ ಕೊರತೆಯಿಲ್ಲ ಎಂದರು.

ಇದನ್ನೂ ಓದಿ:ಐತಿಹಾಸಿಕ ಬೌದ್ಧ ಸ್ತೂಪ ನೆಲೆ, ಚಂದ್ರಲಾ ಪರಮೇಶ್ವರಿ ದೇವಾಲಯ ಸಂಪೂರ್ಣ ಜಲಾವೃತ

Advertisement

ಸಮೀಕ್ಷೆಗೆ ಸೂಚನೆ: ಪ್ರವಾಹ ಹಾನಿ ಜತೆಗೆ ಅತಿವೃಷ್ಟಿಯಿಂದಾಗಿರುವ ಬೆಳೆ ಹಾನಿ ಸಮೀಕ್ಷೆ ಗೈಯುವಂತೆ ಸೂಚನೆ ನೀಡಲಾಗಿದೆ. ಬಹು ಮುಖ್ಯವಾಗಿ ಕೇಂದ್ರದ ನೆರವಿಗೆ ಕಾಯದೇ ರಾಜ್ಯ ಸರ್ಕಾರದಿಂದ ನೆರವು ಕಲ್ಪಿಸಲಾಗುವುದು. ಈಗಾಗಲೇ ರಾಜ್ಯದ 173 ತಾಲೂಕುಗಳನ್ನು ಅತಿವೃಷ್ಟಿ ಎಂಬುದಾಗಿ ಘೋಷಿಸಲಾಗಿದೆ. 11000 ಮನೆಗಳು ಬಿದ್ದಿವೆ, 360 ಕೆರೆಗಳು ಒಡೆದಿವೆ. 3158 ಸರ್ಕಾರಿ ಕಟ್ಟಡಗಳಿಗೆ ಹಾಗೂ 1268 ಸೇತುವೆಗಳು ಹಾನಿಯಾಗಿವೆ ಎಂದು ಕಂದಾಯ ಸಚಿವರು ತಿಳಿಸಿದರು.

ಸೋಮಾರಿ ಅಧಿಕಾರಿಗಳಿಗೆ ಎತ್ತಂಗಡಿ: ಅತಿವೃಷ್ಟಿ ಹಾನಿಯ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ಸೋಮಾರಿ ತೋರುವ ಅಧಿಕಾರಿಗಳಿಗೆ ಎತ್ತಂಗಡಿ ಶಿಕ್ಷೆ ನೀಡಲಾಗುವುದು ಎಂದರು.

ಬೆಳೆವಿಮೆ: ಕಳೆದ ವರ್ಷದ ಬೆಳೆಹಾನಿಗೆ ಬೆಳೆವಿಮೆ ಪರಿಹಾರ ವಾರದೊಳಗೆ ರೈತರ ಖಾತೆಗೆ ಆರ್ ಟಿಜಿಎಸ್ ಮೂಲಕ ಜಮಾ ಆಗಲಿದೆ. ಈಗಾಗಲೇ ಸಭೆ ನಡೆಸಿ ವಿಮಾ ಕಂಪನಿಗಳಿಗೆ ಕೋರಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ ತಿಳಿಸಿದರು.

ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಚ ರಾಜುಗೌಡ, ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಡಾ. ಅವಿನಾಶ ಜಾಧವ್, ಸಹಾಯಕ ಆಯುಕ್ತ ರಾಮಚಂದ್ರ ಗಡದ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next