Advertisement

9ನೇ ತರಗತಿಯಿಂದ ಉದ್ಯಮಶೀಲತೆ ಪಠ್ಯ ಕಡ್ಡಾಯ; ಸರಕಾರಕ್ಕೆ ಸ್ಟಾರ್ಟ್‌ ಅಪ್‌ ಕಾರ್ಯಪಡೆ ಶಿಫಾರಸು

11:27 PM Apr 12, 2022 | Team Udayavani |

ಬೆಂಗಳೂರು: ಉದ್ಯಮಶೀಲತೆ ಬೆಳವಣಿಗೆ ತಿಳಿಸುವ ಪಠ್ಯಕ್ರಮ ಒಂಬತ್ತನೇ ತರಗತಿಯಿಂದ ಕಡ್ಡಾಯಗೊಳಿಸಲು ಕೌಶಲ, ಉದ್ಯಮಶೀಲತೆ ಮತ್ತು ನವೋದ್ಯಮ ಕಾರ್ಯಪಡೆಯು ಸರಕಾರಕ್ಕೆ ಶಿಫಾರಸು ಮಾಡಿದೆ.

Advertisement

ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕಾರ್ಯಪಡೆ ಅಧ್ಯಕ್ಷರೂ ಆದ ಉದ್ಯಮಶೀಲತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ| ಎಸ್‌. ಸೆಲ್ವಕುಮಾರ್‌, ಶಿಫಾರಸು ಸರಕಾರಕ್ಕೆ ಸಲ್ಲಿಸಿದ್ದು, 9ನೇ ತರಗತಿಯಿಂದ ಪಿಯುಸಿವರೆಗೆ ಉದ್ಯಮ ಶೀಲತೆಯ ಬೆಳವಣಿಗೆಯನ್ನು ತಿಳಿಸುವ ಪಠ್ಯಕ್ರಮ ಮತ್ತು 8ನೇ ತರಗತಿಯಿಂದ ಪದವಿಯವರೆಗೂ ವೃತ್ತಿ ಮಾರ್ಗದರ್ಶನ ಕಡ್ಡಾಯಗೊಳಿಸಬೇಕು ಎನ್ನುವುದು ಸೇರಿದೆ.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಶಿಫಾರಸು ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯ, ನಿರುದ್ಯೋಗ ನಿವಾರಣೆ ಮತ್ತು ಗುಣಮಟ್ಟದ ಶಿಕ್ಷಣ ಸಾಧ್ಯವಾಗಬೇಕೆಂದರೆ ಕಲಿಕೆಯ ಹಂತದಿಂದಲೇ ಕೌಶಲವನ್ನು ಕಲಿಸುವುದರ ಜತೆಗೆ ಉದ್ಯಮಶೀಲ ಮನೋಭಾವವನ್ನು ಬೆಳೆಸಬೇಕಾಗಿದೆ.

ಹೀಗಾಗಿ, ಜಿಲ್ಲಾಮಟ್ಟದಲ್ಲಿ ಹಬ್‌ ಮತ್ತು ಸ್ಪೋಕ್‌ ಮಾದರಿಯಲ್ಲಿ ಉದ್ಯಮಶೀಲತಾ ವಿಕಸನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.

ಒಂದು ಕೋಟಿ ಉದ್ಯೋಗ ಗುರಿ
ಮುಂದಿನ 10 ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದು ಸರಕಾರದ ಗುರಿಯಾಗಿದೆ. ಕೃಷಿ ಸೇರಿದಂತೆ ಎಲ್ಲ ವಲಯಗಳಲ್ಲಿ ಗರಿಷ್ಠ ಉದ್ಯೋಗಾವಕಾಶದ ಸಾಧ್ಯತೆ ಇದೆ. ಇದನ್ನು ನನಸಾಗಿಸಲು ಪ್ರಮುಖ ಇಲಾಖೆಗಳ ಜತೆ ಸಮನ್ವಯತೆ ಸಾಧಿಸಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next