Advertisement

ಬೆಳ್ಳಂದೂರು ಕೆರೆ ಹೊಣೆ ಹಂಚಿಕೆಗೆ ಶಿಫಾರಸು

11:58 AM Jun 18, 2017 | |

ಬೆಂಗಳೂರು: ಬೆಳ್ಳಂದೂರು ಕೆರೆ ಸಂರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಕೆರೆ ಕಾಯಕಲ್ಪಕ್ಕೆ ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯದ ಬಗ್ಗೆ ಸಮಿತಿ ಶಿಫಾರಸು ಮಾಡಿದೆ. 

Advertisement

ಬೆಳ್ಳಂದೂರು ಕೆರೆ ಕಲುಷಿತವಾಗುವುದನ್ನು ತಡೆಯುವ ಜತೆಗೆ ಸಂರಕ್ಷಣೆಗಾಗಿ ಸರ್ಕಾರದ ನಾನಾ ಇಲಾಖೆಗಳ ಸಹಕಾರ ಹಾಗೂ ಸಹಭಾಗಿತ್ವದ ಬಗ್ಗೆಯೂ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಪ್ರಮುಖವಾಗಿ ಬಿಡಿಎ, ಜಲಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ, ಕಂದಾಯ ಇಲಾಖೆ, ಕೆರೆ ಮೇಲ್ವಿಚಾರಣಾ ಸಮಿತಿ ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ಅಲ್ಪಾವಧಿ ಪರಿಹಾರ ಕ್ರಮಗಳನ್ನು ಆರು ತಿಂಗಳಲ್ಲಿ ಜಾರಿಗೊಳಿಸಬೇಕೆಂದೂ ಹೇಳಿರುವ ಸಮಿತಿ, ದೀರ್ಘಾವಧಿ ಪರಿಹಾರ ಕ್ರಮಗಳನ್ನು ಕಾಲಮಿತಿಯೊಳಗೆ ಕೈಗೊಳ್ಳಬೇಕೆಂದು ಸಲಹೆ ನೀಡಿದೆ. ಸಮಿತಿಯು ವರದಿಯಲ್ಲಿ ಶಿಫಾರಸು ಮಾಡಿರುವ ಇಲಾಖಾವಾರು ಜವಾಬ್ದಾರಿಗಳ ವಿವರ ಹೀಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಏನು ಮಾಡಬೇಕು?:  ಕೆರೆ ಸುತ್ತಲ ಅಪಾರ್ಟ್‌ಮೆಂಟ್‌ಗಳು ಕೊಳಚೆ ನೀರು ಸಂಸ್ಕರಣಾ ಘಟಕ ಅಳವಡಿಸಿಕೊಳ್ಳುವಂತೆ ಮಾಡಬೇಕು. ಸಂಸ್ಕರಿಸಿದ ನೀರನ್ನಷ್ಟೇ ಕೆರೆಗೆ ಬಿಡುವಂತೆ ಕ್ರಮ ಕೈಗೊಳ್ಳಬೇಕು, ಜಲಮಂಡಳಿ ಸಹಯೋಗದಲ್ಲಿ ಪ್ರತ್ಯೇಕ ಎಲೆಕ್ಟ್ರಿಕ್ಟ್ ಮೀಟರ್‌ ಅಳವಡಿಸಿ ವಿವರಗಳನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು,

ಅಪಾರ್ಟ್‌ಮೆಂಟ್‌ಗಳು ಕೆರೆಗೆ ಬಿಡುವ ನೀರಿನ ಗುಣಮಟ್ಟದ ವರದಿಯನ್ನು ಜಲಮಂಡಳಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಮಾಡಬೇಕು,  ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆಯ ನೀರು ಸಂಸ್ಕರಣಾ ಘಟಕದ ಬಳಿ (ನಿತ್ಯ 250 ಎಂಎಲ್‌ಡಿ) ಆನ್‌ಲೈನ್‌ ನೀರು ಗುಣಮಟ್ಟ ನಿರ್ವಹಣಾ ಸಾಧನ ಅಳವಡಿಸಿ ವಿವರಗಳು ಸಾರ್ವಜನಿಕರಿಗೆ ವೆಬ್‌ಸೈಟ್‌ನಲ್ಲಿ ಸಿಗುವಂತೆ ಮಾಡಬೇಕು,  

Advertisement

ಹಾಗೆಯೇ ಜಲಮಂಡಳಿಯ ಕೊಳಚೆ ನೀರು ಸಂಸ್ಕರಣಾ ಘಟಕಗಳ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು,  ಕೆರೆ ಸುತ್ತಮುತ್ತಲಿನ ಕೈಗಾರಿಕೆಗಳು ವಿಷಯುಕ್ತ ನೀರನ್ನು ಸಂಸ್ಕರಿಸಿ ನಂತರ ಕೆರೆಗೆ ಹರಿಸಲು ಮೇಲ್ವಿಚಾರಣೆ ನಡೆಸಬೇಕು, ಪಾಸ್ಫರಸ್‌ ಬಳಸಿದ ಮಾರ್ಜಕ ಬಳಕೆಯನ್ನು ನಿಷೇಧಿಸಲು ಕೇಂದ್ರ ಪರಿಸರ, ಅರಣ್ಯ ಸಂರಕ್ಷಣಾ ಇಲಾಖೆಗೆ ಮನವಿ ಮಾಡಬೇಕು. 

ಬಿಡಿಎ ಏನು ಮಾಡಬೇಕಿದೆ?: ಕೆರೆಯ ಕೋಡಿಗಳ ಬಳಿ ನೀರು ಧುಮ್ಮಿಕ್ಕುವುದನ್ನು ತಡೆಯಲು ಸೂಕ್ತ ರ್‍ಯಾಂಪ್‌ಗ್ಳನ್ನು ನಿರ್ಮಿಸಬೇಕು (ಈಗಾಗಲೇ ಒಂದು ರ್‍ಯಾಂಪ್‌ ನಿರ್ಮಾಣವಾಗಿದೆ), ಕೆರೆಯಲ್ಲಿ ಕಾರಂಜಿಗಳನ್ನು ಅಳವಡಿಸಿ ನೀರಿನಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸಲು ಗಮನ ಹರಿಸಬೇಕು 

ಬಿಬಿಎಂಪಿ ಕೈಗೊಳ್ಳಬೇಕಾದ ಕ್ರಮಗಳು: ಕೆರೆ ಹಾಗೂ ಕೆರೆಗೆ ಸಂಪರ್ಕಿಸುವ ಕಾಲುವೆಗಳಿಗೆ ಘನ ತ್ಯಾಜ್ಯ ಸೇರದಂತೆ ಕ್ರಮ ಕೈಗೊಳ್ಳಬೇಕು, ಕಾಲುವೆಗಳಿಂದ ಕೆರೆಗೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಕಲ್ಪಿಸಬೇಕು. 

ನಗರಾಭಿವೃದ್ಧಿ ಇಲಾಖೆ ಜವಾಬ್ದಾರಿ ಇದು: ರಾಜಕಾಲುವೆ, ಕಣಿವೆಗಳು ಹಾಗೂ ಕೆರೆ ಅಂಗಳದಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿಯದಂತೆ ಕ್ರಮ ಕೈಗೊಳ್ಳಬೇಕು. 

ಕಂದಾಯ ಕರ್ತವ್ಯಗಳು: ಕೆರೆ ದಂಡೆಯಲ್ಲಿರುವ ಎಲ್ಲ ಬಗೆಯ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ತೆರವುಗೊಳಿಸಬೇಕು, ನೀರಿನ ಸೆಲೆ ಹಾಗೂ ಬಫ‌ರ್‌ ಜೋನ್‌ ಸರ್ವೇ ನಡೆಸಿ ಮ್ಯಾಪಿಂಗ್‌ ಮಾಡಬೇಕು,  ಕಾಲುವೆ ಪ್ರದೇಶದ ಸರ್ವೇ ನಡೆಸಿ ಮ್ಯಾಪಿಂಗ್‌ ಮಾಡಬೇಕು,  

ಎಲ್ಲ ಬಗೆಯ ಒತ್ತುವರಿ ತೆರವುಗೊಳಿಸುವ ಮೂಲಕ ಮಳೆಗಾಲದಲ್ಲಿ ಪ್ರವಾಹ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು,  ಈ ಭಾಗದಲ್ಲಿರುವ ಸರ್ಕಾರಿ ಭೂಮಿ, ಖರಾಬು ಭೂಮಿ, ನಾಲೆ ಪ್ರದೇಶ, ಕಾಲುವೆ ಜಾಗಗಳನ್ನು ಗುರುತಿಸಬೇಕು, ಹೀಗೆ ಗುರುತಿಸಿದ ಭೂಮಿಯನ್ನು ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಬಳಸಬಹುದು.

ದೀರ್ಘಾವಧಿ ಕ್ರಮಗಳುಗಳಿವು 
ಜಲಮಂಡಳಿ:
ಕೋರಮಂಗಲ ಮತ್ತು ಈಜಿಪುರ ಬಳಿಯ ನಾಲೆ ನೀರಿನ ಸಂಸ್ಕರಣೆಗಾಗಿ 150 ಎಂಎಲ್‌ಡಿ ಸಾಮರ್ಥಯದ ಎಸ್‌ಟಿಪಿ ನಿರ್ಮಾಣ ಕಾರ್ಯ 2020ರ ಮಾರ್ಚ್‌ಗೆ ಪೂರ್ಣಗೊಳ್ಳಲಿದೆ. ಹಲಸೂರು ಕೆರೆ ಬಳಿ 2 ಎಂಎಲ್‌ಡಿ ಸಾಮರ್ಥಯದ ಕೊಳಚೆ ನೀರು ಸಂಸ್ಕರಣಾ ಘಟಕ ಹಾಗೂ ಹುಳಿಮಾವು, ಚಿಕ್ಕಬೇಗೂರು, ಸಾರಕ್ಕಿ, ಅಗರ ಕೆರೆಗಳ ಬಳಿ ನಾಲ್ಕು ಕಡೆ 55 ಎಂಎಲ್‌ಡಿ ಸಾಮರ್ಥಯದ ಎಸ್‌ಟಿಪಿ ನಿರ್ಮಾಣ ಕಾರ್ಯ 2018ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಜಲಮಂಡಳಿ ಖಾತರಿ ನೀಡಿದೆ.

ಕೊಳೆಗೇರಿಗಳು ಸೇರಿದಂತೆ ಇತರೆ ವಸತಿ ಕಟ್ಟಡಗಳಿಂದ ಕೊಳಚೆ ನೀರು ಮಳೆ ನೀರು ಕಾಲುವೆ ಸೇರದಂತೆ ಸೂಕ್ತ ಒಳಚರಂಡಿ ವ್ಯವಸ್ಥೆ ನಿರ್ಮಿಸುವುದು. ಬೆಳ್ಳಂದೂರು, ವರ್ತೂರು ಕೆರೆಗಳನ್ನು ನಗರದ ಎರಡನೇ ಹಂತದ ನೀರಿನ ಮೂಲವಾಗಿ ಅಭಿವೃದ್ಧಿಪಡಿಸುವುದು. 

ನಗರಾಭಿವೃದ್ಧಿ ಇಲಾಖೆ: ಅಗರ ಮತ್ತು ಬೆಳ್ಳಂದೂರು ಕೆರೆ ನಡುವೆ ಕೆಐಎಡಿಬಿ ಹಂಚಿಕೆ ಮಾಡಿರುವ 40 ಎಕರೆ ಜಾಗವನ್ನು ಕಾನೂನು ಪ್ರಕಾರ ವಶಕ್ಕೆ ಪಡೆದು 210 ಎಂಎಲ್‌ಡಿ ಸಾಮರ್ಥಯದ ಎಸ್‌ಟಿಪಿ ಆರಂಭಿಸುವುದು. 

ಬಿಡಿಎ: ಕೆರೆಯಲ್ಲಿ ಸಂಗ್ರಹವಾಗಿರುವ ಹೂಳು ತೆರವಿಗೆ ಕ್ರಮ.

ಸಮಿತಿ ರಚನೆಗೆ ಶಿಫಾರಸು: ಪ್ರತಿ ಕೆರೆಗೆ ಸಂಬಂಧಪಟ್ಟಂತೆ ನಾಗರಿಕ ಕೆರೆ ಮೇಲ್ವಿಚಾರಣಾ ಸಮಿತಿಯನ್ನು ನಿವೃತ್ತ ನ್ಯಾಯಾಧೀಶರು ಇಲ್ಲವೇ ಪರಿಸರತಜ್ಞರ ನೇತೃತ್ವದಲ್ಲಿ ರಚಿಸಬೇಕು. ಐದು ಮಂದಿ ಸ್ಥಳೀಯರು, ಒಬ್ಬ  ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿ, ಇಬ್ಬರು ವಿಜ್ಞಾನ ತಜ್ಞರು, ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ,

-ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್‌ (ಮಳೆ ನೀರು ಕಾಲುವೆ) ಹಾಗೂ ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರು ಸಮಿತಿಯಲ್ಲಿರಬೇಕು ಎಂದು ಸಮಿತಿ ವರದಿ ನೀಡಿದೆ. ಹಾಗೆಯೇ ನಿರಂತರ ಮೇಲ್ವಿಚಾರಣೆ, ಕೆರೆ ನೀರಿನ ಗುಣಮಟ್ಟ ತಪಾಸಣೆ ವ್ಯವಸ್ಥೆ ಸೇರಿದಂತೆ ಅಗತ್ಯವಿರುವ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ಸಲಹೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next