ಬೆಂಗಳೂರು: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅನಗತ್ಯ ಕಾರಣಗಳಿಂದ ಸಚಿವ ಸಂಪುಟ ಸಭೆಗೆ ಹಾಜರಾಗದಿರುವುದರಿಂದ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಸಾಮಾಜಿಕ ಹೋರಾಟಗಾರ ಭೀಮ್ಮಪ್ಪ ಗಡಾದ್ ನೀಡಿದ್ದ ದೂರಿನ ಮೇರೆಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಶಿಫಾರಸು ಮಾಡಿದ್ದಾರೆಂದು ತಿಳಿದು ಬಂದಿದೆ. ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ನಡವಳಿಕೆ ಹಾಗೂ ನಿಯಮಾವಳಿ ಪ್ರಕಾರ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯ ವಿಧಾನ ಪರಿಷತ್ತಿನ ಕಾರ್ಯವಿಧಾನ ನಡವಳಿಕೆ ಮತ್ತು 196 ನೇ ನಿಯಮಾವಳಿಯ ಪ್ರಕಾರ ಸಮಿತಿಯ ಅಧ್ಯಕ್ಷರ ಅಪ್ಪಣೆಯಿಲ್ಲದೇ ಎರಡು ಅಥವಾ ಅದಕ್ಕಿಂತ ಹೆಚ್ಚು ಸಮಿತಿ ಸಭೆಗಳಿಗೆ ಗೈರು ಹಾಜರಾದರೂ ಅಂತಹ ಸದಸ್ಯರನ್ನು ಸಮಿತಿ ಸದಸ್ಯತ್ವದಿಂದ ತೆಗೆದು ಹಾಕಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಅವರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡುವಂತೆ ಭೀಮಪ್ಪ ಗಡಾದ್ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು. ಅವರ ದೂರಿನ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ತಮ್ಮ ಆಪ್ತ ಕಾರ್ಯದರ್ಶಿಯ ಮೂಲಕ ಡಿಪಿಎಆರ್ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಬೆಂಗಳೂರಿನಿಂದ ಪತ್ರ ಬಂದಿದೆ
ಈ ಮಧ್ಯೆ, ಬೆಳಗಾವಿಯಲ್ಲಿ “ಉದಯವಾಣಿ’ ಜತೆ ಮಾತನಾಡಿದ ಭೀಮಪ್ಪ ಗಡಾದ, ಸಚಿವರು ಐದು ಸಲ ಸಂಪುಟ ಸಭೆಗೆ ಹಾಜರಾಗಿಲ್ಲ. ಅವರಿಗೆ ಸಚಿವ ಸ್ಥಾನದಲ್ಲಿ ಆಸಕ್ತಿ ಇಲ್ಲ. ನನಗೆ ಧರ್ಮ ಮುಖ್ಯ, ಸಚಿವ ಸ್ಥಾನ ಅಲ್ಲ ಎಂದು ಸ್ವತಃ ಅವರೇ ಹೇಳಿರುವುದರಿಂದ ಕೂಡಲೇ ಅವರನ್ನು ವಜಾ ಮಾಡಬೇಕೆಂದು ಮನವಿ ಮಾಡಲಾಗಿತ್ತು. ಈಗ ನನ್ನ ಮನವಿ ಪತ್ರ ಮುಖ್ಯಮಂತ್ರಿಗಳ ಬಳಿಗೆ ಹೋಗಿದೆ. ಬೆಂಗಳೂರಿನಿಂದ ನನಗೆ ಪತ್ರ ಬಂದಿದ್ದು, ವಿಧಾನಸೌಧದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಶಿಷ್ಟಾಚಾರ ಶಾಖೆಯ ಅಧೀನ ಕಾರ್ಯದರ್ಶಿ ಶಿವಕುಮಾರ ಈ ಪತ್ರ ಕಳಿಸಿದ್ದಾರೆ. ನಿಮ್ಮ ಮನವಿಗೆ ಅನುಗುಣವಾಗಿ ಮುಂದಿನ ಸೂಕ್ತ ಕ್ರಮಕ್ಕಾಗಿ ಮುಖ್ಯಮಂತ್ರಿಗೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದರು.