ಮೂಡುಬಿದಿರೆ: ಅವಧಿ ಮೀರಿದ, ಸೂಕ್ತ ದಾಖಲೆಗಳಿಲ್ಲದೆ ಮೂಡುಬಿದಿರೆಯಲ್ಲಿ 60 ವಾಹನಗಳೂ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು 800 ವಾಹನಗಳ ಪರವಾನಿಗೆ, ಚಾಲಕರ ಚಾಲನ ಪರವಾನಿಗೆ ರದ್ದತಿಗೆ ರಸ್ತೆ ಸಾರಿಗೆ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ರವಿಶಂಕರ್ ಪಿ. ತಿಳಿಸಿದರು.
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರ ನೇತೃತ್ವದಲ್ಲಿ ಸೋಮವಾರ ಸಮಾಜ ಮಂದಿರದಲ್ಲಿ ಏರ್ಪಡಿಸಲಾಗಿದ್ದ “ಪರಿಷ್ಕೃತ ಮೋಟಾರು ವಾಹನ ಕಾಯ್ದೆಯ ಕುರಿತು ಸಾರ್ವಜನಿಕರಿಗೆ ಕಾನೂನು ಮಾಹಿತಿ ಶಿಬಿರ’ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಗ್ರಾಮಾಂತರ ಪರವಾನಿಗೆಯ ರಿûಾಗಳು ನಗರದೊಳಗೆ ಬಾಡಿಗೆ ಮಾಡುವಂತಿಲ್ಲ. ನಗರ ರಿûಾಗಳನ್ನು ವಲಯ 1 ಮತ್ತು ಗ್ರಾಮಾಂತರ ರಿûಾಗಳನ್ನು ವಲಯ 2 ಎಂದು ಗುರುತಿಸಿದ್ದಲ್ಲಿ ಸಮಸ್ಯೆ ಗಳು ಕಡಿಮೆಯಾಗಬಹುದು ಎಂದರು.
ಗೂಡ್ಸ್ ವಾಹನಗಳಲ್ಲಿ ಪೈಪ್, ಕಬ್ಬಿಣದ ಸರಳು ಸಾಗಿಸುವಾಗ ಸರಕುಗಳು ಹೊರಚಾಚಿದ್ದಲ್ಲಿ ಅಂಥ ವಾಹನಗಳ ವಿರುದ್ಧ ದಂಡ ವಿಧಿಸಿ ಸಾಮಗ್ರಿಗಳನ್ನು ಇನ್ನೊಂದು ವಾಹನಕ್ಕೆ ವರ್ಗಾಯಿಸವರೆಗೂ ವಾಹನವನ್ನು ಇಲಾಖೆ ಸುಪರ್ದಿಯಲ್ಲಿಟ್ಟುಕೊಳ್ಳಲು ಅವಕಾಶವಿದೆ ಎಂದರು.
ಡಿಜಿ ಲಾಕರ್ ಆ್ಯಪ್
ಸರಕಾರದ ಡಿಜಿ ಲಾಕರ್ ಆ್ಯಪ್‌ನಲ್ಲಿ ವಾಹನಗಳ ದಾಖಲೆಗಳನ್ನು ಅಪ್‌ಲೋಡ್ ಮಾಡಿದ್ದಲ್ಲಿ ಚಾಲಕರು ಪ್ರತ್ಯೇಕ ದಾಖಲೆಗಳನ್ನು ತಮ್ಮಲ್ಲಿ ಇಟ್ಟುಕೊಳ್ಳಬೇಕಾಗಿಲ್ಲ. ತಪಾಸಣೆ ವೇಳೆ ಝೆರಾಕ್ಸ್ ದಾಖಲೆಗಳಿದ್ದಲ್ಲಿ ಮೂಲ ದಾಖಲೆಗಳನ್ನು ಪೊಲೀಸ್ ಠಾಣೆಗೆ ಹಾಜರುಪಡಿಸಲು ಅವಕಾಶವಿದೆ; ಆ ಪ್ರಕ್ರಿಯೆ ವಿಳಂಬವಾದರೆ ಪೊಲೀಸರು ಕ್ರಮಕೈಗೊಳ್ಳಬಹುದು ಎಂದು ಶ್ರೀನಿವಾಸ ಗೌಡ ಹೇಳಿದರು.