ಬೆಂಗಳೂರು: ಪಠ್ಯ ಪುಸ್ತಕ ರಚನೆ ಕಾರ್ಯವನ್ನು ಹಂಪಿಯ ಕನ್ನಡ ವಿಶ್ವ ವಿದ್ಯಾಲಯಕ್ಕೆ ವಹಿಸಿಕೊಡಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡ ಭಾಷಾ ಅಭಿವೃದ್ಧಿ ಕುರಿತು ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕಗಳಲ್ಲಿ ಬದುಕಿಗೆ ಹತ್ತಿರವಾಗಿರುವ ವಿಷಯ ಸೇರ್ಪಡೆಗಿಂತ ಜೀವ ವಿರೋಧಿ ವಿಷಯಗಳೆ ಹೆಚ್ಚಿನ ಪ್ರಮಾಣದಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ವಿಜ್ಞಾನವನ್ನು ಕನ್ನಡ ಭಾಷೆಗೆ ಭಾಷಾಂತರಿಸುವ ಕೆಲಸ ಆಗಬೇಕಿದೆ. ಇದರಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಹೊಂದಲು ಅನುಕೂಲ ಆಗುತ್ತದೆ ಎಂದು ತಿಳಿಸಿದರು.
ಪಠ್ಯ ಪುಸ್ತಕದಲ್ಲಿ ಶುದ್ಧ ಕನ್ನಡ ಭಾಷೆ ಹಾಗೂ ನಮ್ಮ ಪರಿಸರಕ್ಕೆ ಹೊಂದುವ ಪಠ್ಯಗಳನ್ನು ಸೇರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಾಲಾ ಸಬಲೀಕರಣ ಸಮಿತಿ ರಚಿಸಿದೆ. ಆ ಸಮಿತಿಯಲ್ಲಿ ಶುದ್ಧ ಭಾಷಾ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ, ಸೂಕ್ತ ತೀರ್ಮಾಣ ಕೈಗೊಳ್ಳಲಾಗುವುದು ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗುವುದು ಎಂದರು.
ವಿಶ್ವ ವಿದ್ಯಾಲಯಗಳಲ್ಲಿಯೇ ಪ್ರಾಧ್ಯಾಪಕರ ಹಳೆಗನ್ನಡ ಪಾಠ ಮಾಡುವುದನ್ನು ನಿಲ್ಲಿಸಿದ್ದಾರೆ. ಕೋರ್ಟ್, ಪತ್ರಿಕೋದ್ಯಮ ಹಾಗೂ ಐಟಿ ಕ್ಷೇತ್ರದಲ್ಲಿ ಕನ್ನಡ ಕಡಿಮೆಯಾಗಿದೆ. ಈ ಕ್ಷೇತ್ರದಲ್ಲಿಯೂ ಕನ್ನಡ ಬೆಳವಣಿಗೆ ಪೂರಕ ವಾತಾವರಣ ನಿರ್ಮಿಸಲು ಶ್ರಮಿಸಲಾಗುವುದು. ಐಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪೂರಕವಾದ ಪ್ರಯತ್ನ ನಡೆಸಿದ್ದಾರೆ. ರಾಜ್ಯ ಸರ್ಕಾರ ಐಟಿ ಕಂಪನಿಗಳ ಬೆದರಿಕೆಗೆ ಮಣಿಯದೇ ದಿಟ್ಟ ನಿಲುವು ತೆಗೆದುಕೊಳ್ಳಬೇಕೆಂದು ಅವರು ಹೇಳಿದರು.
.