ಹುಬ್ಬಳ್ಳಿ: ಶಾಸ್ತ್ರೀಯ ನೃತ್ಯ ಪ್ರಕಾರಗಳಿಗೆ ವಿದೇಶಗಳಲ್ಲಿ ಸಾಕಷ್ಟು ಮನ್ನಣೆ ಸಿಗುತ್ತಿದ್ದು, ನಮ್ಮ ದೇಶದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗುವುದು ಅವಶ್ಯವಾಗಿದೆ ಎಂದು ನಾಟ್ಯಶ್ರೀ ಸಾಗರ ಟಿ.ಎಸ್.ಹೇಳಿದರು.
ಭರತನಾಟ್ಯ ಕ್ಷೇತ್ರದಲ್ಲಿ ಒಳ್ಳೆ ಗುರುಗಳು ಸಿಗುವುದು ಕಷ್ಟ. ಅದೇ ರೀತಿ ಒಳ್ಳೆಯ ಶಿಷ್ಯರು ಸಿಗುವುದೂ ಕಷ್ಟ. ಗುರುಗಳು ಕಠಿಣ ತರಬೇತಿ ನೀಡಿದರೆ ವಿದ್ಯಾರ್ಥಿಗಳು ಅಮೋಘ ಪಟುಗಳಾಗಿ ರೂಪಗೊಳ್ಳುತ್ತಾರೆ ಎಂದರು.
ವಿದ್ವಾನ್ ರವಿಂದ್ರ ಶರ್ಮಾ ಮಾತನಾಡಿ, ಇಬ್ಬರು ನೃತ್ಯಪಟುಗಳು ಏಕಕಾಲಕ್ಕೆ ರಂಗ ಪ್ರವೇಶ ಮಾಡುತ್ತಿರುವುದು ಶ್ಲಾಘನೀಯ. ರಂಗ ಪ್ರವೇಶ ಸಂದರ್ಭದಲ್ಲಿ ಪಟುಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಉಭಯ ನೃತ್ಯಪಟುಗಳು ಇನ್ನಷ್ಟು ಪ್ರತಿಭೆ ತೋರಬೇಕಿತ್ತು. ಕೆಲ ಸಂದರ್ಭದಲ್ಲಿ ತಾಳಕ್ಕೆ ತಕ್ಕಂತೆ ನೃತ್ಯ ಸಾಗಲಿಲ್ಲ. ಹಿರಿಯ ಕಲಾವಿದೆ ಸುಜಾತಾ ರಾಜಗೋಪಾಲ್ ಅವರಿಂದ ತರಬೇತಿ ಪಡೆದುಕೊಂಡಿರುವುದು ಕಲಾವಿದರ ಅದೃಷ್ಟ ಎಂದು ಹೇಳಿದರು. ನೃತ್ಯ ಗುರು ಸುಜಾತಾ ರಾಜಗೋಪಾಲ್, ರಾಘವೇಂದ್ರ ರಾಮದುರ್ಗ ಇದ್ದರು. ಕಲಾವಿದೆಯರಾದ ಡಾ| ಸಹನಾ ಭಟ್ ಹಾಗೂ ವಿದುಷಿ ಶೈಲಾ ಹುಟಗಿ ಅವರನ್ನು ಸನ್ಮಾನಿಸಲಾಯಿತು. ರಂಗಪ್ರವೇಶ ಪಡೆದ ಉಭಯ ಕಲಾವಿದೆಯರು ಪುಷ್ಪಾಂಜಲಿ, ಅಲ್ಲರಿಪ್ಪು, ಜತಿಶ್ವರಂ, ವರ್ಣಂ, ವಚನ, ತಿಲ್ಲಾನ ಪ್ರಸ್ತುತಪಡಿಸಿದರು.
Advertisement
ಸವಾಯಿ ಗಂಧರ್ವ ಕಲಾಮಂದಿರದಲ್ಲಿ ರವಿವಾರ ನಡೆದ ಸುಜಾತಾ ಸ್ಕೂಲ್ ಆಫ್ ಭರತನಾಟ್ಯಂ ವಿದ್ಯಾರ್ಥಿನಿಯರಾದ ಅನಘಾ ಶಿರಹಟ್ಟಿ ಹಾಗೂ ವಿಶಾರದಾ ಮುಳಗುಂದ ಅವರ ರಂಗಪ್ರವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಸ್ತ್ರೀಯ ನೃತ್ಯಕ್ಕೆ ಮನ್ನಣೆ ಸಿಕ್ಕರೆ ನೃತ್ಯ ಕಲಿಯಲು ಮುಂದೆ ಬರುವವರ ಸಂಖ್ಯೆ ಹೆಚ್ಚುತ್ತದೆ. ನಮ್ಮ ನೃತ್ಯ ಪರಂಪರೆ ನಿರಂತರ ನಡೆಯುತ್ತಿರಬೇಕು. ನಮ್ಮ ನೃತ್ಯವನ್ನು ಉಳಿಸಿ ಬೆಳೆಸಬೇಕು ಎಂದರು.