Advertisement

ಬದಲಾವಣೆಗೆ ಮತ ಪುರಸ್ಕಾರ

07:45 AM Mar 17, 2017 | Team Udayavani |

ಶಾಂತಿ ಮತ್ತು ಕಾನೂನು ಸುವ್ಯವಸ್ಥೆ, ಗೂಂಡಾ ರಾಜ್‌ ಅಂತ್ಯ, ಮಹಿಳೆಯರು ಮತ್ತು ಬಡವರ ಸುರಕ್ಷೆ, ಮುಸ್ಲಿಮರೂ ಅಭಿವೃದ್ಧಿಯ ವಾಹಿನಿಯಲ್ಲಿ ಸೇರಿಕೊಳ್ಳುವುದು, ಹಳ್ಳಿಗಳನ್ನು ನಗರ ಪ್ರದೇಶಕ್ಕೆ ಸಂಪರ್ಕಿಸುವ ಉತ್ತಮ ರಸ್ತೆ ಸೌಕರ್ಯ, ಪ್ರತೀ ಮನೆಗೂ ವಿದ್ಯುತ್‌, ಶುದ್ಧ ಕುಡಿಯುವ ನೀರು, ಶೌಚಾಲಯ, ಬಡವರಿಗೆ ಮನೆ… ಉತ್ತರಪ್ರದೇಶದಲ್ಲಿ ಹೊಸ ಸರಕಾರದ ಆದ್ಯತೆಗಳಿವು. ಅದೃಷ್ಟವಶಾತ್‌ ಎನ್‌ಡಿಎಯ ಯೋಜನೆಗಳಲ್ಲಿ ಇವೆಲ್ಲವೂ ಇವೆ; ಉತ್ತರಪ್ರದೇಶಕ್ಕೆ ಬೇಕಾದದ್ದೂ ಇದೇ!

Advertisement

ಉತ್ತರಪ್ರದೇಶದಲ್ಲಿ ಬಿಜೆಪಿಯ ಅಸಾಮಾನ್ಯ ವಿಜಯದಿಂದ ದೇಶದ ರಾಜಕೀಯ ಪಕ್ಷಗಳು ಕಲಿಯಬೇಕಾದ ಪಾಠಗಳು ಹಲವಾರಿವೆ. ದೇಶದಲ್ಲಿ ಈಗ ಯುವಜನಾಂಗ ತುಂಬಿ ತುಳುಕುತ್ತಿದೆ. ಜನಸಂಖ್ಯೆಯ ಗಮನಾರ್ಹ ಭಾಗ 40 ವರ್ಷ ವಯಸ್ಸಿಗಿಂತ ಕೆಳಗಿನವರದ್ದು. ಈ ಯುವ ಸಮೂಹ ಜಗತ್ತನ್ನು ನೋಡುವ  ದೃಷ್ಟಿಕೋನ ಕಳೆದ 25 ವರ್ಷಗಳಲ್ಲಿ ಭಾರತ ಸಾಧಿಸಿರುವ ಶೇ.8.4 ವಾರ್ಷಿಕ ಜಿಡಿಪಿಯ ಆಧಾರದಲ್ಲಿ ರೂಪುಗೊಂಡದ್ದು. ಅವರಿಗೆ ಪ್ರಗತಿ, ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳು ಬೇಕಾಗಿವೆ; ಜಾತಿ ಆಧಾರಿತ ರಾಜಕೀಯದ ಕೊಳಚೆ, ಮುಲಾಯಂ ಮತ್ತು ಲಾಲೂ ಪ್ರತಿನಿಧಿಸುವ ಸ್ವಜನಪಕ್ಷಪಾತಿ ಸಮಾಜವಾದ ಅಥವಾ ಕೋಮು ಕಲಹಗಳನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ರಕ್ಷಿಸಬಲ್ಲರು, ತಮ್ಮ ವ್ಯಕ್ತಿತ್ವದ ಘನತೆಯನ್ನು ಎತ್ತಿಹಿಡಿಯಬಲ್ಲರು, ಆರ್ಥಿಕ ಪ್ರಗತಿಯ ಅವಕಾಶಗಳನ್ನು ಒದಗಿಸಬಲ್ಲರು ಎಂಬುದಾಗಿ ಭಾವಿಸಿ ಮಹಿಳೆಯರು ಅವರನ್ನು ಬೆಂಬಲಿಸಿದ್ದಾರೆ. ಸಮಾಜವಾದಿ ಪಕ್ಷದ ಗೂಂಡಾರಾಜ್‌ ತಿರಸ್ಕಾರ ಕಂಡಿದೆ. 

ರೇಜಿಗೆ ತಂದ ಸೋಗಿನ ಜಾತ್ಯತೀತವಾದ
ಹಿಂದೂ ಮತಗಳು ಕೂಡ ಬಿಜೆಪಿಯತ್ತ ಕ್ರೋಢೀಕರಣಗೊಂಡಿವೆ. ಜಾತಿ ರಾಜಕಾರಣದಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳು ಮುಸ್ಲಿಂ ಮತ ವೋಟ್‌ ಬ್ಯಾಂಕ್‌ ಸೆಳೆಯುವ ಭರದಲ್ಲಿ ಬಹುಸಂಖ್ಯಾತ ಹಿಂದೂಗಳನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ನಡೆಸಿಕೊಂಡಿರುವುದು ಇದಕ್ಕೆ ಕಾರಣ. ಸೋಗಿನ ಜಾತ್ಯತೀತವಾದ ಭಾರತದಾದ್ಯಂತ ಇಂದು ಹಿಂದೂ ವಿರೋಧಿ ನಿಲುವೆಂಬಂತೆ ಪರಿಗಣಿತವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅನುಭವಿಸಿದ ಸೋಲಿನ ಬಗ್ಗೆ ಎ. ಕೆ. ಆ್ಯಂಟನಿ ತಯಾರಿಸಿರುವ ಆತ್ಮವಿಮರ್ಶಕ ವರದಿಯಲ್ಲಿ ಒಪ್ಪಿಕೊಂಡ ಸತ್ಯಾಂಶವಿದು. ಒಟ್ಟಾರೆಯಾಗಿ ಹಳಸಲು ಸಿದ್ಧಾಂತ, ತಣ್ತೀಗಳನ್ನು ಬದಿಗೆ ಸರಿಸಿ ಪ್ರಗತಿ ಮತ್ತು ಅಭಿವೃದ್ಧಿಯನ್ನಷ್ಟೇ ತಳಪಾಯವಾಗಿಟ್ಟುಕೊಂಡ ಬದಲಾವಣೆ ಜನರಿಗೆ ಬೇಕಾಗಿದೆ ಎಂಬುದನ್ನು ಬಿಜೆಪಿಯ ಮಹಾಗೆಲುವು ಶ್ರುತಪಡಿಸಿದೆ. 

ಜನರ ಆಶೋತ್ತರ ಅರ್ಥೈಸಿಕೊಳ್ಳಿ
ಉತ್ತರಪ್ರದೇಶ ಚುನಾವಣೆಯ ಫ‌ಲಿತಾಂಶ ರಾಜಕೀಯ ಪಕ್ಷಗಳಿಗೆ ನೀಡಿರುವ ಸಂದೇಶ ಬಹಳ ಸ್ಪಷ್ಟ: “ನೀವು ರಾಜಕೀಯವಾಗಿ ಪ್ರಸ್ತುತವಾಗಿರಬೇಕಾದರೆ ಯುವ ಸಮೂಹವೇ ದೊಡ್ಡ ಪ್ರಮಾಣದಲ್ಲಿರುವ ಇಂದಿನ ಭಾರತೀಯ ಸಮಾಜದಲ್ಲಿ ನಾಗರಿಕರ ಆಶೋತ್ತರಗಳನ್ನು ಆಧರಿಸಿದ ಹೊಸ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಿ.’ ಜಾತಿವಾದ, ಸಮಾಜವಾದ, ಬಡವರ ಓಲೈಕೆ, ಸೋಗಲಾಡಿ ಜಾತ್ಯತೀತವಾದ, ಹಿಂದೂವಿರೋಧಿ ನಿಲುವು, ಅಲ್ಪಸಂಖ್ಯಾಕರ ಓಲೈಕೆ ಹಾಗೂ ಸಾಮಾಜಿಕವಾಗಿ ಒಡೆದು ಆಳುವ ನೀತಿಗಳೆಲ್ಲ ಇವತ್ತು ಗ್ರಾಹಕರಿಲ್ಲದ ಸರಕುಗಳು. ಎಡಪಂಥೀಯ ಪಕ್ಷಗಳು ಈಗಾಗಲೇ ಇತಿಹಾಸದ ಕಸದ ಬುಟ್ಟಿ ಸೇರಿವೆ. ಕಾಂಗ್ರೆಸ್‌ ಕುಸಿಯುತ್ತಿದೆ, ಪ್ರಾದೇಶಿಕ ಪಕ್ಷಗಳು ಏದುಸಿರು ಬಿಡುತ್ತಿವೆ. ಯುವ ಮತದಾರರು ಪ್ರಗತಿ, ಅಭಿವೃದ್ಧಿ ಮತ್ತು ಔದ್ಯೋಗಿಕ ಅವಕಾಶ ಬಯಸುತ್ತಿದ್ದಾರೆ. 2019ರ ಚುನಾವಣೆ ಬಹಳ ದೂರದಲ್ಲಿಲ್ಲ; ರಾಜಕೀಯ ಪಕ್ಷಗಳು ಇನ್ನೂ ಬದಲಾಗದೆ ಇದ್ದರೆ ಭವಿಷ್ಯದಲ್ಲಿ ಬೆಳಕಿಲ್ಲ.

ಹಳಸಲು ತಣ್ತೀ: ಸೋತ ಎಸ್‌ಪಿ-ಕಾಂಗ್ರೆಸ್‌
ಉತ್ತರಪ್ರದೇಶದಲ್ಲಿ ಎಸ್‌ಪಿ – ಕಾಂಗ್ರೆಸ್‌ ಮೈತ್ರಿಕೂಟ ಜಾತಿ, ಮುಸ್ಲಿಮ್‌ ಮತಗಳು ಮತ್ತು ಜಾತ್ಯತೀತವಾದ ಎಂಬ ಅವೇ ಹಳೆಯ ತಣ್ತೀಗಳಿಗೆ ಜೋತುಬಿದ್ದು ಚುನಾವಣಾ ಪ್ರಚಾರ ನಡೆಸಿದವು. ಆದರೆ ಎಸ್‌ಪಿ ಸರಕಾರ ನೀಡಿದ ಕೆಟ್ಟ ಆಡಳಿತ, ಭ್ರಷ್ಟಾಚಾರ ಮತ್ತು ಓಲೈಕೆಯ ರಾಜಕಾರಣಗಳ ಬಗ್ಗೆ ಜಾಣಕುರುಡು ಪ್ರದರ್ಶಿಸಿದವು. ಅಖೀಲೇಶ್‌ ಮತ್ತು ರಾಹುಲ್‌ ಜತೆಯಲ್ಲಿ ಡಿಂಪಲ್‌ ಯಾದವ್‌ ಮತ್ತು ಪ್ರಿಯಾಂಕಾ ಗಾಂಧಿ ಈ ಮೈತ್ರಿಕೂಟದ ಯುವ ನಾಯಕರಾಗಿ ಮುಂಚೂಣಿಯಲ್ಲಿ ನಿಂತರಾದರೂ ಮತದಾರರು ಅವರ ಗಾಳಕ್ಕೆ ಬಲಿಬೀಳಲಿಲ್ಲ. ದಲಿತರನ್ನು ಸೆಳೆಯುವ ಆಟವಾಡಿದ ಮಾಯಾವತಿಗೆ ಹೊಸ ಮತಗಳು ಸಿಗಲಿಲ್ಲ. ಮತದಾರರು ಇತಿಹಾಸದಿಂದ ಪಾಠ ಕಲಿತಿದ್ದರು, ತಪ್ಪನ್ನು ಪುನರಾವರ್ತಿಸಲಿಲ್ಲ. ಬಿಜೆಪಿ ಭವ್ಯ ಭವಿಷ್ಯದ ಬೆಳಕಿಂಡಿಯನ್ನು ತೆರೆಯಿತು, ಆ ಆಶಾವಾದ ಗೆಲುವನ್ನು ತಂದುಕೊಟ್ಟಿತು.

Advertisement

ಪೂರ್ವಗ್ರಹ ಮತ್ತು ಪಕ್ಷಪಾತಿ ನಿಲುವನ್ನು ತೊರೆಯಲೊಲ್ಲದ ರಾಷ್ಟ್ರಮಟ್ಟದ ಮಾಧ್ಯಮಗಳು ಎಂದಿನಂತೆ ಋಣಾತ್ಮಕ ಚಿತ್ರಣವನ್ನು ಬಿತ್ತುವ ಕಾರ್ಯದಲ್ಲಿ ಮಗ್ನವಾಗಿದ್ದವು. ಎನ್‌ಡಿಎ ಮತ್ತು ಪ್ರಧಾನಿ ಮೋದಿಯವರ ಬಗ್ಗೆ ಬಹಿರಂಗವಾಗಿ ಕೆಂಡ ಕಾರಿದವು. ಉತ್ತರಪ್ರದೇಶದಲ್ಲಿ ಉಂಟಾಗಿರುವ ಪರಿವರ್ತನೆಯನ್ನು ವಸ್ತುನಿಷ್ಠವಾಗಿ, ವರದಿ ಮಾಡಬೇಕಾದ ಅವು ತಮ್ಮದೇ ಪೂರ್ವಗ್ರಹಗಳನ್ನು ಮತದಾರರ ಭಾವನೆಗಳು, ನಿಲುವು ಎಂದೆಲ್ಲ ಬಿಂಬಿಸಿದವು. ನೋಟು ರದ್ದತಿಯಿಂದ ಜನರು ಆಕ್ರೋಶಗೊಂಡಿದ್ದಾರೆ ಎಂಬುದಾಗಿ ಪ್ರಚಾರ ನಡೆಯಿತು; ಆದರೆ ಅಕ್ರಮ ಸಿರಿವಂತರು, ಕಾಳಧನಿಕರು, ವಂಚಕ ಮಧ್ಯವರ್ತಿಗಳು, ಭ್ರಷ್ಟ ಗುತ್ತಿಗೆದಾರರಿಗೆ ನೋಟು ರದ್ದತಿ ನಿರ್ಧಾರ ಹೊಡೆತ ನೀಡಿರುವುದು ಬಡವರಿಗೆ ಸಂತೋಷ ನೀಡಿದೆ ಎಂಬುದನ್ನು ಅವು ಮರೆತವು. ಬಡಜನರು ತಾವು ದೀರ್ಘ‌ಕಾಲ ಅನುಭವಿಸಿದ ಹತಾಶೆ ಮತ್ತು ನಿರಾಶೆಗಳನ್ನು ದೂರಮಾಡಬಲ್ಲ ನಾಯಕನನ್ನು ಪ್ರಧಾನಿ ಮೋದಿ ಅವರಲ್ಲಿ ಕಂಡರು. ಬಿಪಿಎಲ್‌ ಕಾರ್ಡುದಾರರಿಗೆ ಎಲ್‌ಪಿಜಿ ಒದಗಿಸುವ ಯೋಜನೆ ಬಡವರಿಗೆ ಬಹಳ ಪ್ರಿಯವಾದಂತೆ ತೋರುತ್ತದೆ. ಬಿಜೆಪಿಯನ್ನು ದ್ವೇಷಿಸುವ ತಮ್ಮ ಅಜೆಂಡಾದಲ್ಲಿ ಮುಳುಗಿದ  ದಿಲ್ಲಿ ಮಾಧ್ಯಮಗಳು ದೇಶದಲ್ಲಿ ಬದಲಾಗಿರುವ ರಾಜಕೀಯ ಆದ್ಯತೆಯ ಕಡೆಗೆ ಗಮನ ಹರಿಸಲೇ ಇಲ್ಲ.

ಮೋದಿ ನವಭಾರತದ ಕನಸು
ವಿಕಾಸ ಮತ್ತು ತನ್ನ ವೈಯಕ್ತಿಕ ಚರಿಶ್ಮಾದಿಂದ ಪ್ರಧಾನಿ ಮೋದಿ ಉತ್ತರಪ್ರದೇಶದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಭಾರೀ ಜನಸಮೂಹವನ್ನು ಆಕರ್ಷಿಸಿದ್ದಾರೆ. ಇದರ ಪರಿಣಾಮವಾಗಿ ಕಳೆದ 40 ವರ್ಷಗಳಲ್ಲಿಯೇ ಕಾಣದಂತಹ ಶೇ.42 ಮತಪಾಲಿನೊಂದಿಗೆ 312 ಸ್ಥಾನಗಳು ಬಿಜೆಪಿ ಪಾಲಾಗಿವೆ. 2014ರ ಲೋಕಸಭಾ ಚುನಾವಣೆ ಮತ್ತು 2017ರ ವಿಧಾನಸಭಾ ಚುನಾವಣೆಯ ಮತದಾನದಲ್ಲಿ ಕಾಣಿಸಿರುವ ಈ ಪರಿವರ್ತನೆ ಗಮನಾರ್ಹವಾದದ್ದು ಮತ್ತು ಸ್ಥಾಯಿಯಾದದ್ದು.

ವಿಜಯದ ಬಳಿಕ ಪ್ರಧಾನಿ ಮೋದಿ ಯುವ ಸಮುದಾಯ, ಮಹಿಳೆಯರು ಮತ್ತು ಬಡವರು ಬದಲಾವಣೆ, ಉದ್ಯೋಗ, ಪ್ರಗತಿ ಮತ್ತು ಅಭಿವೃದ್ಧಿಯ ಆಶಾಕಿರಣಗಳನ್ನು ಕಾಣುವ “ನವಭಾರತ’ ನಿರ್ಮಾಣದ ಮಾತನ್ನಾಡಿದ್ದಾರೆ. 21 ಕೋಟಿಗೂ ಹೆಚ್ಚು ಜನರಿರುವ ಉತ್ತರಪ್ರದೇಶವು ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.17 ಪಾಲು ಹೊಂದಿದೆ, ಹಾಗಾಗಿ ದೇಶದ ಆರ್ಥಿಕತೆ ಮತ್ತು ರಾಜಕೀಯದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನೂ ಪಡೆದಿದೆ. ಕೇಂದ್ರ ಹಾಗೂ ಈಗ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ಉತ್ತರಪ್ರದೇಶದ ಜನರು ತಮ್ಮ ಬಲವನ್ನು ಪ್ರದರ್ಶಿಸಿದ್ದಾರೆ.  ಕಳೆದ 10 ವರ್ಷಗಳ ಅವಧಿಯಲ್ಲಿ ಇಡಿಯ ಭಾರತದ ಅಭಿವೃದ್ಧಿ ದರಕ್ಕೆ ಹೋಲಿಸಿದರೆ ಉತ್ತರಪ್ರದೇಶದ ಅಭಿವೃದ್ಧಿ ನಗಣ್ಯ. ದೇಶದ ಅಭಿವೃದ್ಧಿ ವಾಹನಕ್ಕೆ ಎಂಜಿನ್‌ ಆಗಿ ಉತ್ತರಪ್ರದೇಶ ರೂಪುಗೊಳ್ಳುವುದಕ್ಕಾಗಿ ಅಲ್ಲಿಗೆ ಹೊಸ ಆರ್ಥಿಕ ಅಜೆಂಡಾ, ವಿಶಾಲ ಕಾಣೆಯುಳ್ಳ ಧೀರ ನಾಯಕತ್ವ ಅಲ್ಲಿಗೆ ಬೇಕು. ಪ್ರಧಾನಿ ಮೋದಿ ಪಾಲಿಗೆ ಈ ವಿಜಯ ಆತ್ಮವಿಶ್ವಾಸವನ್ನು ತಂದುಕೊಟ್ಟು ದೇಶಕ್ಕಾಗಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ನೆರವಾಗಲಿದೆ. 

ಆದ್ಯತೆಗಳೇನು?
ಉತ್ತರಪ್ರದೇಶ ಜಲಸಂಪನ್ಮೂಲಸಮೃದ್ಧ ಫ‌ಲವತ್ತಾದ ನೆಲ. ಇಡಿಯ ದೇಶಕ್ಕೆ ಆಹಾರದ ತೊಟ್ಟಿಲಾಗಬಲ್ಲ ರಾಜ್ಯ ಅದು. ಮೂಲಸೌಕರ್ಯಗಳು, ನಗರ-ಪಟ್ಟಣ ಕೇಂದ್ರಗಳು, ಉದ್ದಿಮೆಗಳು ಮತ್ತು ಉತ್ತಮ ವಿಶ್ವವಿದ್ಯಾನಿಲಯಗಳು ಅಲ್ಲಿ ಇಲ್ಲ. ಹೊಸ ಸರಕಾರ ಉತ್ತರಪ್ರದೇಶಕ್ಕೆ ಅಭಿವೃದ್ಧಿ ಮತ್ತು ಉದ್ಯೋಗ ನಿರ್ಮಾಣದ ಬೆಳಕನ್ನು ಹರಿಸಬೇಕಾಗಿದೆ. ಬಿಜೆಪಿ 2019ರಲ್ಲೂ ಚುನಾವಣೆ ಗೆದ್ದು ಅಧಿಕಾರಕ್ಕೆ ಬರಬೇಕಾದರೆ ಅಭಿವೃದ್ಧಿಯ ಈ ವೇಗವನ್ನು ಕಾಯ್ದುಕೊಳ್ಳಬೇಕಾದುದು ಮುಖ್ಯ. 

ಹೊಸ ಸರಕಾರದ ಆದ್ಯತೆಗಳು ಸ್ಪಷ್ಟ- ಶಾಂತಿ ಮತ್ತು ಕಾನೂನು ಸುವ್ಯವಸ್ಥೆ, ನ್ಯಾಯ ಅದರ ಅಜೆಂಡಾದ ಮುಂಚೂಣಿಯಲ್ಲಿರಬೇಕು. ಮುಸ್ಲಿಮರೂ ಹೊಸ ಆರ್ಥಿಕ ಮತ್ತು ಅಭಿವೃದ್ಧಿಯ ಅವಕಾಶಗಳನ್ನು ಪಡೆದು ಕೊಳ್ಳುವಂತೆ ಮಾಡಬೇಕು. ಉತ್ತರಪ್ರದೇಶ ಮತ್ತು ಬಿಹಾರಗಳು ಹೆಚ್ಚು ವೇಗದಿಂದ ಅಭಿವೃದ್ಧಿ ಹೊಂದಿದರಷ್ಟೇ ಭಾರತ ಪ್ರಗತಿಯ ಮೆಟ್ಟಿಲುಗಳನ್ನೇರಲು ಸಾಧ್ಯ.

ಟಿ. ವಿ. ಮೋಹನದಾಸ ಪೈ  ಚಿಂತಕ, ಆಡಳಿತ ತಜ್ಞ 

Advertisement

Udayavani is now on Telegram. Click here to join our channel and stay updated with the latest news.

Next