Advertisement

ಮರು ನಿರ್ಮಾಣವಾಗದ ಟ್ಯಾಂಕ್‌ 

02:33 PM Nov 09, 2017 | Team Udayavani |

ಪಡುಪಣಂಬೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು, ರಸ್ತೆ ಪಕ್ಕ ಅಪಾಯಕಾರಿ ಸ್ಥಿತಿಯಲ್ಲಿದ್ದ ಎರಡು ನೀರಿನ ಟ್ಯಾಂಕ್‌ಗಳನ್ನು ಕೆಡವಿ ಮೂರು ತಿಂಗಳಾದರೂ ಮತ್ತೆ ನಿರ್ಮಿಸದಿರುವ ಕಾರಣ ಕುಡಿಯುವ ನೀರು ಸರಬರಾಜಿನಲ್ಲಿ ಭಾರೀ ವ್ಯತ್ಯಯ ಕಂಡುಬಂದಿದೆ.

Advertisement

ದಿನಕ್ಕೆ ಒಂದು ಲಕ್ಷ ಲೀಟರ್‌ ಕುಡಿಯುವ ನೀರನ್ನು ಮನೆ ಮನೆಗೆ ಸರಬರಾಜು ಮಾಡುತ್ತಿದ್ದ ಎರಡೂ ಟ್ಯಾಂಕ್‌ಗಳನ್ನು ನೆಲಸಮ ಮಾಡಲಾಗಿದ್ದು, ಈಗ ನೀರಿನ ಸಮಸ್ಯೆ ಹೆಚ್ಚಾಗಿದೆ. ತಾತ್ಕಾಲಿಕವಾಗಿ ಪಂಪ್‌ ಗಳಿಂದ ನೇರವಾಗಿ ಪೈಪ್‌ಲೈನ್‌ನಲ್ಲಿಯೇ ನೀರು ಸರಬರಾಜು ಮಾಡುವ ಪ್ರಯತ್ನ ನಡೆಸಿರುವುದರಿಂದ ಆಗಾಗ ಒತ್ತಡದಿಂದ ಪೈಪ್‌ಗ್ಳು ಒಡೆದು ಸರಬರಾಜಿನಲ್ಲಿ ಕೊರತೆ ಕಂಡುಬರುತ್ತಿದೆ. ಇದು ತಾಂತ್ರಿಕವಾಗಿ ಸರಿಯಲ್ಲದಿದ್ದರೂ ಪಂಚಾಯತ್‌ಗೆ ಅನಿವಾರ್ಯ.

ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಲು ಪಂಚಾಯತ್‌ಗೆ ಅನುದಾನದ ಕೊರತೆ ಇರುವುದರಿಂದ ತುರ್ತಾಗಿ ಯಾವುದೇ
ಕ್ರಮ ಜರುಗಿಸಿಲ್ಲ. 

ಪರಿಹಾರ ಮೊತ್ತ ಅತ್ಯಲ್ಪ
ಶಾಲೆ ಕೊಠಡಿ ಹಾಗೂ ನೀರಿನ ಟ್ಯಾಂಕ್‌ಗಳನ್ನು ಕೆಡವಿದಾಗ ಅದಕ್ಕೆ ಹೆದ್ದಾರಿ ಇಲಾಖೆ ಪರಿಹಾರ ಧನ ನೀಡಿದೆ. ಅದರಲ್ಲಿ ಎರಡೂ ಟ್ಯಾಂಕ್‌ಗಳ ಪರಿಹಾರ ರೂಪವಾಗಿ 2,32,650 ರೂ.ಗಳನ್ನು ಶಾಲೆಯ ಖಾತೆಗೆ ಜಮೆ ಮಾಡಲಾಗಿದೆ. ಈ ಅತ್ಯಲ್ಪ ಮೊತ್ತದಲ್ಲಿ ಟ್ಯಾಂಕ್‌ಗಳನ್ನು ನಿರ್ಮಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಬಂದಿದೆ.

ಜಿಲ್ಲಾಡಳಿತದಿಂದ ಎಂಆರ್‌ಪಿಎಲ್‌ ವರೆಗೆ
ಪಡುಪಣಂಬೂರು ಗ್ರಾ.ಪಂ.ನ ಆಡಳಿತವು ಅನಿರೀಕ್ಷಿತವಾಗಿ ಕೆಡವಿದ ಟ್ಯಾಂಕ್‌ಗಳನ್ನು ನಿರ್ಮಿಸಲು ಸ್ವಂತ ಅನುದಾನದ ಬಲವಿಲ್ಲ. ಹೀಗಾಗಿ ಜಿಲ್ಲಾಡಳಿತ, ಶಾಸಕ, ಸಂಸದರಿಂದ ಹಿಡಿದು ಕರಾವಳಿಯ ಬಹುತೇಕ ಎಲ್ಲ ಜನಪ್ರತಿನಿಧಿಗಳಲ್ಲೂ ಮನವಿ ಮಾಡಿಕೊಂಡಿದ್ದರೂ ಈವರೆಗೆ ಯಾರಿಂದಲೂ ಸ್ಪಂದನೆ ಇಲ್ಲ. ಇದರ ಜತೆಗೆ ಎಂಆರ್‌ಪಿಎಲ್‌ ಕಂಪೆನಿಗೂ ತನ್ನ ಅಹವಾಲನ್ನು ಸಲ್ಲಿಸಿದೆ.

Advertisement

ಪಡುಬಿದ್ರಿಯ ಅದಾನಿ ಸಂಸ್ಥೆಗೂ ಮನವಿ ನೀಡಿದೆ. ಕನಿಷ್ಠ ಒಂದು ಟ್ಯಾಂಕ್‌ ನಿರ್ಮಾಣವಾದಲ್ಲಿ ನೀರಿನ ಬವಣೆಯನ್ನು ನಿಭಾಯಿಸಲು ಸಾಧ್ಯವಿದೆ ಎಂದು ಪಂಚಾಯತ್‌ ಆಡಳಿತ ಮಂಡಳಿ ಹೇಳಿದೆ.

ಜಿ.ಪಂ. ಸಭೆಯಲ್ಲಿ ಧ್ವನಿ
ಟ್ಯಾಂಕ್‌ ಕಟ್ಟಿಸುವ ಅನಿವಾರ್ಯತೆಯ ಬಗ್ಗೆ ಜಿ.ಪಂ. ಸಭೆಯಲ್ಲಿ ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು ಧ್ವನಿ ಎತ್ತಿದ್ದಾರೆ. ಈ ಭಾಗದ ಪ್ರತಿನಿಧಿಯಾಗಿರುವ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರೂ ಧ್ವನಿಗೂಡಿಸಿದ್ದಾರೆ. ಜಿ.ಪಂ.ಗೆ ವಿಶೇಷ ಅನುದಾನ ಇಲ್ಲದ ಕಾರಣ ಫಲಿತಾಂಶ ಶೂನ್ಯದಲ್ಲಿದೆ.

ಎಂಆರ್‌ಪಿಎಲ್‌ನಿಂದ ನಿರ್ಮಾಣ
ಪಡುಪಣಂಬೂರು ಗ್ರಾಮ ಪಂಚಾಯತ್‌ ವಿಶೇಷ ಮನವಿ ಮಾಡಿಕೊಂಡಿದ್ದರಿಂದ ಜಿಲ್ಲಾ ಪಂಚಾಯತ್‌ನಲ್ಲಿ ಟ್ಯಾಂಕ್‌ ನಿರ್ಮಿಸುವಷ್ಟು ಅನುದಾನದ ಕೊರತೆ ಇದ್ದರೂ ಜಿ.ಪಂ. ನೇರವಾಗಿ ಎಂಆರ್‌ಪಿಎಲ್‌ಗೆ ಮನವಿ ಮಾಡಿಕೊಂಡಿದೆ. ಇದಕ್ಕೆಂದೇ ಜಿ.ಪಂ. ಎಂಜಿನಿಯರ್‌ ವಿಭಾಗದಿಂದ 25 ಲಕ್ಷ ರೂ. ವೆಚ್ಚದ ಟ್ಯಾಂಕ್‌ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಿ ನೀಡಿದೆ. ಕಂಪೆನಿ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಕಸ್ತೂರಿ ಪಂಜ
  ಉಪಾಧ್ಯಕ್ಷರು, ದ.ಕ. ಜಿಲ್ಲಾ ಪಂಚಾಯತ್‌

ಒಂದಾದರೂ ನಿರ್ಮಾಣವಾಗಲಿ
ಪಂಚಾಯತ್‌ಗೆ ಅನುದಾನದ ಕೊರತೆ ಇದೆ. ಕನಿಷ್ಠ ಒಂದು ಟ್ಯಾಂಕ್‌ ನಿರ್ಮಾಣವಾದಲ್ಲಿ ನೀರು ಸರಬರಾಜನ್ನು ನಿಯಂತ್ರಿಸಬಹುದು. ಮುಂದಿನ ದಿನದಲ್ಲಿ ನೀರಿನ ಅಭಾವ ಕಾಡುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ತಕ್ಷಣ ಪರಿಹಾರ ನೀಡಲು ಸಹಕರಿಸಬೇಕು.
ಮೋಹನ್‌ದಾಸ್‌, ಅಧ್ಯಕ್ಷರು,
  ಪಡುಪಣಂಬೂರು ಗ್ರಾ.ಪಂ.

   ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next