Advertisement

ಮುರಿದ ಬದುಕು ಮರು ನಿರ್ಮಾಣ

01:18 PM Aug 14, 2019 | Team Udayavani |

ಹಾವೇರಿ: ಇಲ್ಲಿಯ ಜನರು ಸಾಮೂಹಿಕವಾಗಿ ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿದ್ದಾರೆ. ಬಟ್ಟೆ-ಬರೆ, ಪಾತ್ರೆ- ಪಗಡೆ ತೊಳೆದುಕೊಳ್ಳುತ್ತಿದ್ದಾರೆ. ಮನೆಯ ಒಂದಿಷ್ಟು ಕಾಗದ ಪತ್ರ, ಮಕ್ಕಳ ಪುಸ್ತಕ ಸೇರಿದಂತೆ ಕೆಲ ಸಾಮಗ್ರಿಗಳನ್ನು ಬಿಸಿಲಿಗೆ ಹಾಕಿ ಒಣಗಿಸಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ತಗಡು, ತಾಡಪತ್ರಿ ತಂದು ಮನೆಗೆ ಮೇಲ್ಛಾವಣಿ ಹಾಕುತ್ತಿದ್ದಾರೆ. ಇನ್ನು ಕೆಲವರು ನೀರು ಹರಿದು ಹೋಗಲು ಕಾಲುವೆ ಮಾಡಿಕೊಳ್ಳುತ್ತಿದ್ದಾರೆ.

Advertisement

ಗ್ರಾಮಗಳಲ್ಲಿನ ಈ ಸಾಮೂಹಿಕ ಚಟುವಟಿಕೆಯನ್ನು ಮೇಲ್ನೋಟಕ್ಕೆ ಗಮನಿಸಿದರೆ ಊರಲ್ಲಿ ಉತ್ಸವ ಇಲ್ಲವೇ ಹಬ್ಬದ ಸಡಗರ ನಡೆದಿರಬಹುದೇನೋ ಎಂದೆನಿಸುತ್ತದೆ. ಆದರೆ, ವಾಸ್ತವ ಸಂಗತಿ ಅದಲ್ಲ. ಕಳೆದ ವಾರ ಬಿಟ್ಟೂ ಬಿಡದೆ ಸುರಿದ ಮಳೆ, ಉಕ್ಕಿ ಹರಿದ ನೆರೆಯಿಂದ ಜಲಾವೃತವಾದ ಗ್ರಾಮಗಳಲ್ಲಿನ ಜನರು ಮರು ಬದುಕು ಕಟ್ಟಿಕೊಳ್ಳುವ ಚಿತ್ರಣವಿದು.

ಉಕ್ಕಿ ಹರಿದು ಆರ್ಭಟ ತೋರಿದ ಕುಮದ್ವತಿ, ಧರ್ಮಾ ವರದೆ, ತುಂಗೆ ಈಗ ಶಾಂತರಾಗಿದ್ದಾರೆ. ವರುಣ ತುಸು ಹೊಳವು ನೀಡಿದ್ದು ಸೂರ್ಯ ಪ್ರಖರತೆ ಬೀರಿದ್ದಾನೆ. ಹೀಗಾಗಿ ಪರಿಹಾರ ಕೇಂದ್ರದಲ್ಲಿದ್ದ ಸಂತ್ರಸ್ತರು ಈಗ ತಮ್ಮ ಮನೆಗಳತ್ತ ಧಾವಿಸಿ ಈ ರೀತಿಯ ಚಟುವಟಿಕೆಯಲ್ಲಿ ಮಗ್ನರಾಗಿದ್ದಾರೆ.

ಕೆಲವು ಮನೆಗಳಿಗೆ ನೀರು ನುಗ್ಗಿ ಕಸ-ಕಡ್ಡಿ ಸಂಗ್ರಹವಾಗಿದೆ. ಕೆಲ ಮನೆಗಳಲ್ಲಿ ಹಾವು, ಕಪ್ಪೆ, ಹುಳುಹುಪ್ಪಡಿಗಳು ಸೇರಿವೆ. ಅವುಗಳನ್ನೆಲ್ಲ ಹೊರಹಾಕುವುದು, ಮನೆಯೊಳಗೆ ತುಂಬಿರುವ ನೀರು ಹೊರಚೆಲ್ಲುವುದು, ಮನೆ ಸುತ್ತ ನಿಂತ ನೀರು ಹರಿದು ಹೋಗಲು ಕಾಲುವೆ ಮಾಡುವುದು, ನೀರಿಗೆ ನೆಂದ ಸಾಮಗ್ರಿಗಳನ್ನು ಬಿಸಿಲಿಗೆ ಹಾಕುವುದು, ನೆಂದ ದವಸಧಾನ್ಯ, ಕಾಳು ಕಡಿಯನ್ನು ಬಿಸಿಲಿಗೆ ಒಣಗಿಸಿ ಸ್ವಚ್ಛಗೊಳಿಸುವುದರಲ್ಲಿ ನೆರೆಪೀಡಿತ ಗ್ರಾಮದ ಜನರು ತೊಡಗಿಕೊಂಡಿದ್ದಾರೆ.

ತಾತ್ಕಾಲಿಕ ಶೆಡ್‌: ಸಂಪೂರ್ಣವಾಗಿ ಮನೆ ಕುಸಿದು ನೆಲೆ ಕಳೆದುಕೊಂಡವರು ಪರಿಹಾರಕ್ಕಾಗಿ ಫೋಟೋ ತೆಗೆಸುವುದು, ಅವರಿವರ ಸಲಹೆ ಕೇಳುವುದು. ತಾತ್ಕಾಲಿಕ ವಾಸಕ್ಕಾಗಿ ಗುಡಿಸಲು, ತಾಡಪತ್ರಿಯ ಆಸರೆ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Advertisement

ಜಾನುವಾರುಗಳನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟಲು ವ್ಯವಸ್ಥೆ ಮಾಡುವುದು, ನೆಂದಿರುವ ಬಣಿವೆ ಕೈಬಿಟ್ಟು ದೂರದಿಂದ ಮೇವು ತಂದು ಇಡುವುದು, ಜಾನುವಾರುಗಳಿಗೆ ಮೈತೊಳೆಸುವುದು, ಹೊಲಗಳಲ್ಲಿ ನಿಂತಿರುವ ನೀರು ಹರಿದು ಹೋಗಲು ಬಸಿಗಾಲುವೆ ಮಾಡುವುದು ಹೀಗೆ ಹೊಸ ಭರವಸೆಗಳೊಂದಿಗೆ ನೆರೆಪೀಡಿತ ಗ್ರಾಮಗಳ ಜನರು ಹೊಸ ಜೀವನ ಕಟ್ಟಿಕೊಳ್ಳಲು ಅಣಿಯಾಗುತ್ತಿದ್ದಾರೆ.

ಊಟದ ಕೇಂದ್ರ: ಅಡುಗೆ ಮಾಡಿಕೊಳ್ಳಲು, ಉಳಿಯಲು ಸಹ ವ್ಯವಸ್ಥೆ ಮಾಡಿಕೊಳ್ಳಲಾಗದ ಸಂತ್ರಸ್ತರು ಪರಿಹಾರ ಕೇಂದ್ರವನ್ನು ಊಟ, ವಸತಿಯ ಕೇಂದ್ರವನ್ನಾಗಿಸಿಕೊಂಡಿದ್ದಾರೆ. ರಾತ್ರಿ ವಸತಿಗೆ, ಮಧ್ಯಾಹ್ನ, ರಾತ್ರಿ ಊಟಕ್ಕೆ ಹಾಗೂ ಬೆಳಗಿನ ಉಪಹಾರಕ್ಕಾಗಿ ಪರಿಹಾರ ಕೇಂದ್ರ ಅವಲಂಬಿಸಿದ್ದು, ಇಡೀ ದಿನ ಮನೆ ಸ್ವಚ್ಛತೆ, ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮನೆ ವ್ಯವಸ್ಥೆ ಸರಿಯಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಪರಿಹಾರ ಕೇಂದ್ರ ತೊರೆಯುತ್ತಿದ್ದಾರೆ.

ಕಗ್ಗತ್ತಲಲ್ಲಿ ಹಳ್ಳಿ: ನೆರೆಪೀಡಿತ ಗ್ರಾಮಗಳಲ್ಲಿ ಇನ್ನೂ ಎಲ್ಲೆಡೆ ನೀರು ನಿಂತಿದು,್ದ ವಿದ್ಯುತ್‌ ಕಂಬಗಳು ನೀರಲ್ಲಿಯೇ ಇವೆ. ಹಲವು ಕಡೆಗಳಲ್ಲಿ ವಿದ್ಯುತ್‌ ಕಂಬಗಳು ಮುರಿದುಬಿದ್ದಿದ್ದು, ದುರಸ್ತಿ ಕಾರ್ಯ ನಡೆದಿದೆ. ಹೀಗಾಗಿ ಹಲವು ಗ್ರಾಮಗಳ ಮನೆಗಳಲ್ಲಿ ರಾತ್ರಿ ಕಗ್ಗತ್ತಲು ಆವರಿಸಿದೆ. ಸೀಮೆಯೆಣ್ಣೆಯೂ ಎಲ್ಲೆಡೆ ಸಿಗದೆ ಇರುವುದರಿಂದ ಬ್ಯಾಟರಿ, ಮೊಂಬತ್ತಿ ಬೆಳಕಲ್ಲಿ ರಾತ್ರಿ ಕಳೆಯುತ್ತಿದ್ದು ಟಿವಿಗಳಂತೂ ಸಂಪೂರ್ಣ ಸ್ಥಬ್ಧಗೊಂಡಿವೆ. ನಿರಂತರ ಸುರಿದ ಮಳೆಯಿಂದ ಗ್ರಾಮಗಳಲ್ಲಿ ತುಂಬಿಕೊಂಡ ನೀರು ಇನ್ನೂ ಹಾಗೆಯೇ ಇದೆ. ಹಲವು ಮನೆ, ಸರ್ಕಾರಿ ಕಚೇರಿ, ಬಸ್‌ನಿಲ್ದಾಣಗಳ ಸುತ್ತ ನೀರು ನಿಂತು ಕೊಂಡಿದೆ.

 

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next