Advertisement

ಮೀಸಲು ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಬಂಡಾಯ

04:08 PM Apr 17, 2018 | Team Udayavani |

ಔರಾದ: ವಿಧಾನಸಭೆ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ವಿಚಾರದಲ್ಲಿ ಸ್ಥಳೀಯ ಮುಖಂಡರು ಹಾಗೂ ಪಕ್ಷದ ಹಿರಿಯ ನಾಗರಿಕರ ಲೆಕ್ಕ ಉಲ್ಟಾ ಆಗಿದೆ. ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಸ್ಥಳೀಯರಿಗೆ ಅವಕಾಶ ನೀಡುವಂತೆ ಹಿರಿಯ ಮುಖಂಡರು ದಿಲ್ಲಿಯಲ್ಲಿ ಠಿಕಾಣಿ ಹೂಡಿ ಬೇಡಿಕೆ ಇಟ್ಟಿದ್ದರೂ ಪ್ರಯೋಜನವಾಗಿಲ್ಲ.

Advertisement

ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಲ್ವರು ಟಿಕೆಟ್‌ ವಂಚಿತರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಮುಂದಾಗಿದ್ದು, ತಾಲೂಕು ಕಾಗ್ರೆಸ್‌ ಪಕ್ಷದಲ್ಲಿ ಭಿನ್ನಮತದ ಸುನಾಮಿ ಆರಂಭವಾಗಿದೆ. ಮಾಜಿ ಶಾಸಕ ಗುಂಡಪ್ಪ ವಕೀಲ ನೇತೃತ್ವದಲ್ಲಿ ಬೀದರ ಮಾಜಿ ಸಂಸದ ನರಸಿಂಗರಾವ್‌ ಸೂರ್ಯವಂಶಿ ಸಾರಥ್ಯದಲ್ಲಿ ಸಂಜಯ ಸೂರ್ಯವಂಶಿ, ಡಾ|ಲಕ್ಷ್ಮಣ ಸೋರಳ್ಳಿಕರ್‌, ಸುಧಾಕರ್‌ ಕೊಳ್ಳುರ್‌, ಶಂಕರ ದೋಡ್ಡಿ, ರಾಮಣ್ಣ ವಡೇಯರ್‌ ಸೇರಿದಂತೆ 10 ಜನ ಸ್ಥಳೀಯ ಟಿಕೆಟ್‌ ಆಕಾಂಕ್ಷಿಗಳು ಈ ಭಾರಿ ಸ್ಥಳೀಯರಿಗೆ ಅವಕಾಶ ಕೋಡಿ ಎಂದು ವಾರದಿಂದ ಅಂಗಲಾಚಿ ಬೇಡಿಕೊಂಡರೂ ಸ್ಥಳಿಯ ಮುಖಂಡರ ಮಾತಿಗೆ ಪಕ್ಷದ ವರಿಷ್ಠರು ಬೆಲೆ ನೀಡಿಲ್ಲ. ಅದರಂತೆ ಸಿಎಂ ಆಪ್ತ ಕಾರ್ಯದರ್ಶಿ ನಿವೃತ್ತ ಅಧಿಕಾರಿ ಡಾ| ಭೀಮಸೇನರಾವ್‌ ಸಿಂದೆಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತವಾಗಿದೆ ಎಂದು ತಾಲೂಕಿನ ಪಕ್ಷದ ಮುಖಂಡರು ಜನ ಸಾಮಾನ್ಯರು ಅಂದುಕೊಂಡಿದ್ದರು. ಹಾಗಾಗಿ ಸಿಂದೆ ಈಗಾಗಲೇ ಆರೂ ತಿಂಗಳಿಂದ ತಾಲೂಕಿನ ಶೇ.80 ಗ್ರಾಮಗಳಿಗೆ ತೆರಳಿ ಜನರೊಂದಿಗೆ ಬೆರೆತು ಜನರ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡುತ್ತಿದ್ದರು. ಕೊನೆ ಕ್ಷಣದಲ್ಲಿ ಹೊಸ ರಾಜಕೀಯ ಸಂಚಲನ ನಡೆದು ಸಿಎಂ ಆಪ್ತಗೆ ಟಿಕೇಟ್‌ ಕೈ ತಪ್ಪಿ ತಾಲೂಕಿ ರಾಜಕೀಯ ಆಟ ಉಲ್ಟಾ ಆಗಿದೆ.

ಮೂಲತಃ ಕಾಂಗ್ರೆಸ್‌ ಅಭ್ಯರ್ಥಿ ವಿಜಯಕುಮಾರ ಕೌಡ್ಯಾಳ ಬಸವಕಲ್ಯಾಣ ತಾಲೂಕಿನ ರಾಯಿಬಾಗ್‌ ಗ್ರಾಮದವರಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಭೂಮಾಪನ ಇಲಾಖೆಯಲ್ಲಿ 11 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ವಿಜಯಕುಮಾರ ಕೌಡ್ಯಾಳ ತಾಯಿ ಸಂತೋಷಮ್ಮ ಕೌಡ್ಯಾಳ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಜಿಪಂ ಕ್ಷೇತ್ರದಿಂದ ಸ್ಪರ್ಧಿಸಿ ಬೀದರ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಉತ್ತಮ ಆಡಳಿತ ನೀಡಿ, ಕಳೆದ ಜಿಪಂ ಚುನಾವಣೆಯಲ್ಲಿ ಔರಾದ ತಾಲೂಕಿನ ವಡಗಾಂವ ಜಿಪಂ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಹಿನಾಯವಾಗಿ ಸೋಲು ಅನುಭವಿಸಿದ್ದರು. 

ಸಿಂದೆ ಟಿಕೆಟ್‌ ಕೈ ತಪ್ಪಿದೆಲ್ಲಿ : ಬೀದರ ದಕ್ಷಿಣ ಕ್ಷೇತ್ರದ ಅಭ್ಯರ್ಥಿ, ಮಾಜಿ ಶಾಸಕ ಅಶೋಕ ಖೇಣಿ ಪಕ್ಷ ಹಾಗೂ ನಮ್ಮನ್ನು ನಂಬಿಕೊಂಡು ಬಂದಿದ್ದಾರೆ. ಅದರಂತೆ ಔರಾದ ಕ್ಷೇತ್ರದಿಂದ ಸಿಂದೆಗೆ ಟಿಕೇಟ್‌ ನೀಡಲಾಗುತ್ತದೆ ಎಂದು ಅಭ್ಯರ್ಥಿಗಳ ಆಯ್ಕೆ ಸಮಿತಿಯಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ವಿರೋಧ ಮಾಡಿದ್ದರು. ಬೀದರ ದಕ್ಷಿಣ ಕ್ಷೇತ್ರದಲ್ಲಿ ಧರ್ಮಸಿಂಗ್‌ ಅಳಿಯ ಚಂದ್ರಾಸಿಂಗ್‌ ಗೆ ಟಿಕೆಟ್‌ ನೀಡಿ ಎಂದು ಸಭೆಯಲ್ಲಿ ಖರ್ಗೆ ಸಿಎಂಗೆ ಮನವಿ ಮಾಡಿದಾಗ, ಬೀದರ ದಕ್ಷೀಣ ಕ್ಷೇತ್ರದಿಂದ ಅಶೋಕ ಖೇಣಿಯನ್ನು ಬಿಟ್ಟು ಬೇರೆ ಯಾರಿಗೂ ಟಿಕೇಟ್‌ ನೀಡಲು ಸಾಧ್ಯವಿಲ್ಲ ಎಂದು ಸಿಎಂ ಪಟ್ಟು ಹಿಡಿದು, ಔರಾದ ಮೀಸಲು ಕ್ಷೇತ್ರದಲ್ಲಿ ಖರ್ಗೆ ಬೆಂಬಲಿಗ ವಿಜಯಕುಮಾರ ಕೌಡ್ಯಾಳಗೆ ಟಿಕೆಟ್‌ ನೀಡಲಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳಿಂದ ತಿಳಿದು ಬಂದಿದೆ.

ಭಿನ್ನಮತ ಶುರು: ತಾಲೂಕಿನಲ್ಲಿರುವ 10 ಜನ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಿಗಾದರೂ ಟಿಕೆಟ್‌ ನೀಡಿ ಎಂದು ಮಾಜಿ ಶಾಸಕ ಹಾಗೂ ಮಾಜಿ ಸಂಸದರು ನಡೆಸಿದ ಪ್ರಯತ್ನಗಳು ವಿಫಲವಾಗಿವೆ. ಇದರಿಂದ ತಾಲೂಕು ಕೈ ಪಾಳಯದಲ್ಲಿ 4 ಜನ ಟಿಕೆಟ್‌ ವಂಚಿತರು ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣ ಪ್ರವೇಶ ಮಾಡಲಿದ್ದಾರೆ. ಇದರಿಂದ ತಾಲೂಕು ಕಾಂಗ್ರೆಸ್‌ ಪಕ್ಷ ಐದು ಹೋಳಾಗುವುದು ಬಹುತೇಕ ಖಚಿತವಾಗಿದೆ. 

Advertisement

ಉತ್ಸಾಹ ಕಮ್ಮಿ: ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿಜಯಕುಮಾರ ಕೌಡ್ಯಾಳ ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿರಾಶೆಯಾಗಿರುವುದು ಒಂದಡೆಯಾಗಿದ್ದರೆ, ಇನ್ನೂಂದೆಡೆ ಸ್ಥಳೀಯರಿಗೆ ಈ ಬಾರಿಯೂ ಟಿಕೇಟ್‌ ಸಿಕ್ಕಿಲ್ಲ ಎನ್ನುವ ಕೊರಗು ಹೆಚ್ಚಾಗಿ, ಜನರಲ್ಲಿ ಹಾಗೂ ಪಕ್ಷದ ಮುಖಂಡರಲ್ಲಿಯೂ ಉತ್ಸಾಹ ಕಡಿಮೆಯಾಗಿದೆ.

ತಾಲೂಕು ಕಾಂಗ್ರೆಸ್‌ ಪಕ್ಷದಲ್ಲಿ ಉಂಟಾದ ಭಿನ್ನಮತ ಸರಿ ಪಡಿಸಿಕೊಳ್ಳಲು ಮುಂದಾಗದೇ ಇದ್ದಲ್ಲಿ ಪಕ್ಷಕ್ಕೆ ತಾಲೂಕಿನಲ್ಲಿ ವಿಧಾನಸಭೆ ಚುನಾವಣೆ ಮೂಲಕವೇ ದೊಡ್ಡ ಹೊಡೆತ ಬೀಳುವುದು ಬಹುತೇಕ ಖಚಿತವಾಗಿದೆ.

ಸ್ಪರ್ಧೆಗೆ ಸಿದ್ದ: ಸ್ಥಳೀಯರಿಗೆ ಟಿಕೆಟ್‌ ನೀಡದೆ ಇರುವ ಹಿನ್ನೆಲೆಯಲ್ಲಿ ಗುಂಡಪ್ಪ ವಕೀಲರ ಆಪ್ತ ಬೆಂಬಲಿಗ ಹಾಗೂ ಪಟ್ಟಣದ ನಿವಾಸಿ ರಾಮಣ್ಣ ವಡೆಯರ್‌ ಹಾಗೂ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್‌ ಕೈ ತಪ್ಪಿ ಈ ಸಲವಾದರೂ ಸಿಗುತ್ತದೆ ಎನ್ನುವ ತವಕದಲ್ಲಿದ್ದ ಕಾಂಗ್ರೆಸ್‌ ಮುಖಂಡ ಡಾ| ಲಕ್ಷ್ಮಣ ಸೋರಳಿಕರ್‌, ಯುವ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಸುಧಾಕರ ಕೊಳ್ಳುರ್‌, ಬಂಡಾಯ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿಯಲ್ಲಿದ್ದಾರೆ. ಇನ್ನೂ ಸಿಎಂ ಆಪ್ತ ಡಾ| ಭೀಮಸೇನರಾವ್‌ ಸಿಂದೆ ತಾಲೂಕಿನ
ಜನರೊಂದಿಗೆ ಹಾಗೂ ಪಕ್ಷದ ಮುಖಂಡರೊಂದಿಗೆ ಎರಡು ದಿನಗಳಲ್ಲಿ ಸಭೆ ನಡೆಸಿ ಅಂತಿಮ ನಿಲುವು ತಿಳಿಸುವುದಾಗಿ ಹೇಳಿದ್ದಾರೆ.

„ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next