ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ನಾಯಕರೆಲ್ಲರೂ ಕೋಲಾರದ ಕುರುಡು ಮಲೆಯಲ್ಲಿದ್ದರೆ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತ್ರ ತವರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ ತಮ್ಮ ಮುನಿಸನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.
ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಲು ಹೈಕಮಾಂಡ್ ಒಪ್ಪಿದ್ದರೂ ನಮ್ಮಲ್ಲಿ ಒಟ್ಟಭಿಪ್ರಾಯ ಮೂಡದೇ ಇದ್ದರಿಂದ ಗೌತಮ್‌ಗೆ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಗೆಲ್ಲಿಸಲು ನಾನೂ ಪ್ರಯತ್ನಿಸುತ್ತೇನೆ ಎಂದಿದ್ದ ಮುನಿಯಪ್ಪ, ಗೌತಮ್ ನಾಮಪತ್ರ ಸಲ್ಲಿಕೆ ವೇಳೆ ಜತೆಗಿದ್ದರು.
ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಟ್ಟರೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಸಚಿವ ಸುಧಾಕರ್ ಮತ್ತಿತರರು ಕುರುಡುಮಲೆಯಲ್ಲಿ ಉತ್ಸಾಹದಿಂದ ಇದ್ದರು. ಮುನಿಯಪ್ಪ ವಿರೋಧಿ ಬಣ ಎಂದೇ ಗುರುತಿಸಿಕೊಂಡಿರುವ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಕೂಡ ಈ ವೇಳೆ ಇದ್ದರು. ಆದರೆ ಪಕ್ಷದ ಅಧಿಕೃತ ಪ್ರಚಾರ ಕಾರ್ಯಕ್ಕೆ ನೀಡುವ ಮೊದಲು ಕುರುಡುಮಲೆ ಗಣಪತಿಗೆ ಪೂಜೆ ಸಲ್ಲಿಸಲು ಸಿಎಂ, ಡಿಸಿಎಂ ಸಹಿತ ಕಾಂಗ್ರೆಸ್‌ನ ಪ್ರಮುಖ ನಾಯಕ ರೆಲ್ಲರೂ ಕೋಲಾರಕ್ಕೆ ಬಂದರೂ ಮುನಿಯಪ್ಪ ಮಾತ್ರ ಬರಲಿಲ್ಲ. ಇಡೀ ಕಾರ್ಯಕ್ರಮದಲ್ಲಿ ಮುನಿಯಪ್ಪ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಜತೆಗೆ ಕೆಜಿಎಫ್ ಶಾಸಕಿ ಹಾಗೂ ಪುತ್ರಿ ರೂಪಕಲಾ ಕೂಡ ಗೈರಾಗಿದ್ದರು. ಇದೆಲ್ಲವೂ ಮುನಿಯಪ್ಪ ಕುಟುಂಬದ ಮುನಿಸು ಇನ್ನೂ ಶಮನವಾಗಿಲ್ಲ ಎಂಬುದನ್ನು ತೋರಿಸುತ್ತಿದೆ.
ನಾನು ಕಾಂಗ್ರೆಸ್ ಪರ್ಮನೆಂಟ್ ಸ್ಟಾರ್ ಪ್ರಚಾರಕ: ಮುನಿಯಪ್ಪ
ಬೆಂಗಳೂರು: ನಾನು ಕಾಂಗ್ರೆಸ್‌ನ ಶಾಶ್ವತ ತಾರಾ ಪ್ರಚಾರಕ. ಹಾಗಾಗಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟನೆ ನೀಡಿದರು.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಅಭಿ ನಂದಿಸಿದರು. ಬಳಿಕ ಮಾತನಾಡಿ, ನನಗೆ ಬೆಂಗಳೂರು ಗ್ರಾಮಾಂತರ-ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ಕೊಟ್ಟಿದ್ದಾರೆ. ಅಲ್ಲಿನ ಚಟುವಟಿಕೆಗಳಲ್ಲಿ ನಾನು ತೊಡಗಿಸಿಕೊಂಡಿದ್ದೇನೆ. ಹೀಗಾಗಿ ಕುರುಡುಮಲೆ ಕಾರ್ಯಕ್ರಮಕ್ಕೆ ನಾನು ತೆರಳಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಕೋಲಾರದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.