ಮುಂಡಗೋಡ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮೂರು ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಬಂಡಾಯದ ವಾತಾವರಣ ನಿರ್ಮಾಣವಾದರೆ ಬಿಜೆಪಿಯಲ್ಲಿ ಒಗ್ಗಟ್ಟು ಪ್ರದರ್ಶಿತವಾಗಿದೆ. ಡಿ.5 ರಂದು ಮತದಾನ ನಡೆಯಲಿದ್ದು ಕಳೆದ ಎರಡು ದಿನಗಳಿಂದ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು ಮೂರೂ ಪಕ್ಷದವರು ಪ್ರಚಾರ ಕಾರ್ಯವನ್ನು ಭರದಿಂದ ನಡೆಸಿದ್ದಾರೆ.
ಈಗಾಗಲೆ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ನಾಮಪತ್ರ ಸಲ್ಲಿಸಿದ್ದು ಬಿಜೆಪಿ ಶಿವರಾಮ ಹೆಬ್ಟಾರ ಹಾಗೂ ಜೆಡಿಎಸ್‌ನ ಚೈತ್ರಾ ಗೌಡ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಉಪಚುನಾವಣೆಯಾಗಿದ್ದರಿಂದ ಈ ಚುನಾವಣೆ ಹೆಚ್ಚಿನ ತುರುಸಿನಿಂದ ನಡೆಯಲಿದೆ ಎನ್ನಲಾಗಿದೆ.
ಬಂಡಾಯದ ಬಿಸಿ: ಕಾಂಗ್ರೆಸ್, ಜೆಡಿಎಸ್‌ನಲ್ಲಿ ಬಂಡಾಯದ ವಾತಾವರಣ ನಿರ್ಮಾಣವಾಗಿದ್ದು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಯುವ ಮುಖಂಡ ಲಕ್ಷ್ಮಣ ಬನಸೋಡೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಜೆಡಿಎಸ್‌ನಲ್ಲಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಕುಟ್ರಿ ಹಾಗೂ ಉಮಾಕಾಂತ ಬೆಳ್ಳನಕೇರಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತೇವೆ ಎನ್ನುತ್ತಿದ್ದು ಸದ್ಯ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಬಂಡಾಯ ವಾತಾವರಣ ನಿರ್ಮಾಣವಾಗಿರುವುದು ಅಭ್ಯರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಚಾರ ಶುರು: ತಾಲೂಕಿನಲ್ಲಿ ಮೂರೂ ಪಕ್ಷದ ಮುಖಂಡರು ಗ್ರಾಮೀಣ ಭಾಗದಲ್ಲಿ ಈಗಾಗಲೆ ಪ್ರಚಾರ ಕಾರ್ಯ ನಡೆಸಿದ್ದು ತಮ್ಮ ಸರಕಾರದ ಅವಧಿಗಳಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡುತ್ತಿದ್ದಾರೆ. ಹಾಗೂ ತಮ್ಮ ಪಕ್ಷದ ಅಭ್ಯರ್ಥಿಗೆ ಮತವನ್ನು ಹಾಕುವಂತೆ ಮನವಿ ಮಾಡುತ್ತಿದ್ದಾರೆ.
ಬಿಜೆಪಿಗರ ಉತ್ಸಾಹ: ಶಿವರಾಮ ಹೆಬ್ಟಾರ ಬಿಜೆಪಿ ಅಭ್ಯರ್ಥಿಯಾಗಿದ್ದು ಇದೀಗ ಮಾಜಿ ಶಾಸಕ ವಿ.ಎಸ್. ಪಾಟೀಲ ಹಾಗೂ ಜಿಪಂ ಸದಸ್ಯ ಎಲ್.ಟಿ. ಪಾಟೀಲ ಪ್ರಚಾರ ಕಾರ್ಯ ನಡೆಸಿದ್ದು ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ. ಮೂರು ಪ್ರಮುಖ ಮುಖಂಡರು ಒಂದಾಗಿ ಬಿಜೆಪಿ ಪರ ಪ್ರಚಾರ ನಡೆಸುತ್ತಿರುವುದು ಮಾತ್ರ ಬಿಜೆಪಿ ಪಾಳಾಯದಲ್ಲಿ ಉತ್ಸಾಹ ಮತ್ತಷ್ಟು ಇಮ್ಮಡಿಗೊಳಿಸಿದೆ.
ಒಟ್ಟಿನಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳ ಪ್ರಚಾರ ಕಾರ್ಯ ನಡೆದಿದ್ದು ದಿನದಿಂದ ದಿನಕ್ಕೆ ಕ್ಷೇತ್ರದಲ್ಲಿ ಚುನಾವಣಾ ಕಾವು ಏರತೋಡಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಬಂಡಾಯ ಶಮನವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.