ಹಾವೇರಿ: ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅರುಣಕುಮಾರ ಪೂಜಾರ ಅವರಿಗೆ ಟಿಕೆಟ್ ಘೋಷಿಸಿರುವುದಕ್ಕೆ ಸ್ಥಳೀಯವಾಗಿ ಬಂಡಾಯ ಭುಗಿ ಲೆದ್ದಿದ್ದು ಬಿಜೆಪಿಗೆ ಹೊಸ ತಲೆನೋವು ಶುರುವಾಗಿದೆ.
ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರಕ್ಕೆ ಅನರ್ಹ ಶಾಸಕ ಆರ್. ಶಂಕರ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದ ಬಳಿಕ ಕ್ಷೇತ್ರದ ಮೇಲೆ ಹಲವರ ಕಣ್ಣು ಬಿದ್ದಿತ್ತು. ಪಕ್ಷದ ಘಟಾನುಘಟಿ ನಾಯಕರು ತಮ್ಮ ಪುತ್ರರನ್ನು ಕಣಕ್ಕಿಳಿಸಲು ಪೈಪೋಟಿ ನಡೆಸಿದ್ದರು. ಈ ಅನಾರೋಗ್ಯಕರ ಪೈಪೋಟಿಯನ್ನು ನಾಜೂಕಾಗಿ ನಿಯಂತ್ರಿಸಿದ ಬಿಜೆಪಿ ಸ್ಥಳೀಯರಿಗೆ ಟಿಕೆಟ್ ಘೋಷಿಸಿ ಗೊಂದಲಕ್ಕೆ ತೆರೆ ಎಳೆಯಿತು. ಇನ್ನೇನು ಕ್ಷೇತ್ರದ ಟಿಕೆಟ್ ಗೊಂದಲ ಬಗೆಹರಿಯಿತೆಂದು ಎನ್ನುವಷ್ಟರಲ್ಲಿ ಬಿಜೆಪಿಗೆ ಈಗ ಬಂಡಾಯದ ಬಿಸಿ ತಟ್ಟಿದೆ.
ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾದ ಡಾ| ಬಸವರಾಜ ಕೇಲಗಾರ ಬೆಂಬಲಿಗರು ಅರುಣಕುಮಾರ ಅವರಿಗೆ ಟಿಕೆಟ್ ಘೋಷಿರುವುದನ್ನು ಪ್ರಬಲವಾಗಿ ವಿರೋಧಿಸುತ್ತಿದ್ದಾರೆ. ಶನಿವಾರ ನಗರದಲ್ಲಿ ಬೆಂಬಲಿಗ ಕಾರ್ಯಕರ್ತರು ಕಚೇರಿಯಲ್ಲಿ ಮುಖಂಡರೊಂದಿಗೆ ವಾಗ್ವಾದ ಮಾಡಿ, ಕಚೇರಿ ಎದುರೇ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರಷ್ಟೇ ಅಲ್ಲ “ಡಾ| ಕೇಲಗಾರ ಅವರಿಗೆ ಟಿಕೆಟ್ ನೀಡದಿದ್ದರೆ ತಾವು ಸುಮ್ಮನಿರಲ್ಲ’ ಎಂಬ ಖಡಕ್ ಸಂದೇಶವನ್ನೂ ಪಕ್ಷದ ಹೈಕಮಾಂಡ್‌ಗೆ ರವಾನಿಸಿದ್ದಾರೆ. ಸ್ಥಳೀಯ ವಿರೋಧ ಬಿಜೆಪಿ ಮುಖಂಡರಿಗೆ ಅಕ್ಷರಶಃ ಬಿಸಿ ತುಪ್ಪವಾಗಿದೆ.
ಏಕಿಷ್ಟು ವಿರೋಧ?: ಅರುಣಕುಮಾರ ಪೂಜಾರ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಸ್ಥಳೀಯವಾಗಿ ವ್ಯಾಪಕ ವಿರೋಧ ವ್ಯಕ್ತವಾಗಲು ಅನೇಕ ಕಾರಣಗಳಿವೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆಗ ಪಕ್ಷ ಅವರಿಗೆ ಟಿಕೆಟ್ ನೀಡಿರಲಿಲ್ಲ. ಡಾ| ಬಸವರಾಜಕೇಲಗಾರ ಅವರಿಗೆ ಟಿಕೆಟ್ ನೀಡಿತ್ತು. ಆಗ ಟಿಕೆಟ್ ವಂಚಿತ ಅರುಣಕುಮಾರ, ಪಕ್ಷದ ಆಗಿನ ಅಭ್ಯರ್ಥಿ ಡಾ| ಕೇಲಗಾರ ವಿರುದ್ಧವಾಗಿ ಕೆಲಸ ಮಾಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಪಕ್ಷ ಈ ಬಾರಿ ಟಿಕೆಟ್ ನೀಡಿರುವುದು ಅಕ್ಷಮ್ಯ ಎಂಬುದು ಕೇಲಗಾರ ಬೆಂಬಲಿಗರ ಗಂಭೀರ ಆರೋಪ.
ಈ ಗಂಭೀರ ಆರೋಪ ಜತೆಗೆ ಪಕ್ಷನಿಷ್ಠೆ ಇಲ್ಲದ ಅರುಣಕುಮಾರ ಅವರು ಕೆ.ಎಸ್. ಈಶ್ವರಪ್ಪ ಪ್ರಭಾವ ಬಳಸಿಕೊಂಡು ಟಿಕೆಟ್ ಗಿಟ್ಟಿಸಿಕೊಂಡು ಬಂದಿದ್ದಾರೆ. ಸ್ಥಳೀಯ ವಾಸ್ತವ ಅರಿಯದೇ ಪಕ್ಷದ ಹಿರಿಯರು ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನೇ ಬೆಂಬಲಿಸುವುದು ಸರಿಯಲ್ಲ. ಇನ್ನು ಅರುಣಕುಮಾರ ಅವರಿಗೆ 2013ರ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿತ್ತು. ಆಗ ಅವರು ಕ್ಷೇತ್ರದಲ್ಲಿ ಕೇವಲ 9476 ಮತ ಪಡೆದು ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಗಮನಿಸಿದರೆ ಅರುಣಕುಮಾರ ಪೂಜಾರ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಇದೇ ಸಮುದಾಯಕ್ಕೆ ಸೇರಿದ, ತಮ್ಮದೇ ಆದ ಮತ ಬ್ಯಾಂಕ್ ಪ್ರಾಬಲ್ಯಯುಳ್ಳ 6-8 ಆಕಾಂಕ್ಷಿಗಳು ಸ್ಥಳೀಯವಾಗಿದ್ದರು. ಅವರೆಲ್ಲನ್ನು ಪಕ್ಷ ಕಡೆಗಣಿಸುವ ಮೂಲಕ ಎಲ್ಲ ಮುಖಂಡರ ಕೆಂಗಣ್ಣಿಗೂ ಗುರಿಯಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಅರುಣ್ ಬೆಂಬಲಿಗರ ವಾದವೇನು?: ಟಿಕೆಟ್ ಘೋಷಿತ ಅರುಣಕುಮಾರ ಮಾತ್ರ ಈ ಆರೋಪಗಳನ್ನು ಅಲ್ಲಗಳೆಯುತ್ತಾರೆ. 2013ರಲ್ಲಿ ನಾನು ಸ್ಪರ್ಧಿಸಿದಾಗ ಪಕ್ಷದ ಸ್ಥಿತಿ ಬೇರೆಯೇ ಇತ್ತು. ಆಗ ಪಕ್ಷ ಬಿಜೆಪಿ-ಕೆಜೆಪಿ ಘಟಕಗಳಾಗಿ ಒಡೆದಿತ್ತು. ಈಗ ಪರಿಸ್ಥಿತಿ ಬೇರೆಯೇ ಇದೆ. ಅಂದಿನ ಪಕ್ಷದ ಸ್ಥಿತಿಯನ್ನು ಈಗ ಹೋಲಿಸುವುದು ಸರಿಯಲ್ಲ. ಮೊನ್ನೆಯಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ
ಮತಗಳ ಪ್ರಮಾಣ ಗಣನೀಯ ಹೆಚ್ಚಾಗಿದೆ. ನಾನು ಯಾವತ್ತೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಪಕ್ಷದ ವಿವಿಧ ವಿಭಾಗದಲ್ಲಿ ಪದಾಧಿಕಾರಿಯಾಗಿ ಮಾಡಿರುವ ಉತ್ತಮ ಕೆಲಸ ಗುರುತಿಸಿ ಪಕ್ಷ ಟಿಕೆಟ್ ನೀಡಿದೆಯೇ ಹೊರತು ಯಾರ ಶಿಫಾರಸ್ಸಿನಿಂದ ಟಿಕೆಟ್ ನೀಡಿಲ್ಲ ಎಂಬುದು ಅರುಣಕುಮಾರ ಬೆಂಬಲಿಗರ ವಾದ. ಒಟ್ಟಾರೆ ಕ್ಷೇತ್ರದಲ್ಲಿ ಅರುಣಕುಮಾರ ಹಾಗೂ ಡಾ| ಬಸವರಾಜ ಕೇಲಗಾರ ಈ ಎರಡೂ ಬೆಂಬಲಿಗ ಬಣಗಳ ಹೋರಾಟ ತಾರಕಕ್ಕೇರಿದೆ. ಟಿಕೆಟ್ ವಂಚಿತ ಆಕಾಂಕ್ಷಿಗಳಲ್ಲಿ ಬಹುತೇಕರು ಡಾ| ಬಸವರಾಜ ಕೇಲಗಾರ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಅರುಣಕುಮಾರ ವಿರೋಧಿ ಬಣವನ್ನು ಸಮಾಧಾನ ಪಡಿಸುವುದೇ ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
-ಎಚ್.ಕೆ. ನಟರಾಜ