ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ವಿಧಾನಸೌಧದ ಆವರಣದಲ್ಲಿ ಅತೃಪ್ತ ಶಾಸಕರು ಓಡೋಡಿ ಬಂದು ಸ್ಪೀಕರ್ ಕೆ. ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಿದ ಚಿತ್ರ ಜನರ ಕಣ್ಣ ಮುಂದೆ ಕಟ್ಟಿದಂತಿದೆ. ಆದರೆ, ಆ ಓಟ ಕೇವಲ ಅಲ್ಲಿಯೇ ನಿಲ್ಲಲಿಲ್ಲ; ಬದಲಿಗೆ ಅಲ್ಲಿಂದ ಶುರುವಾಗಿ ಈಗ ‘ಮಿಂಚಿನ ಓಟ’ದ ರೂಪ ಪಡೆದುಕೊಂಡಿದೆ!
ರಾಜೀನಾಮೆ ಸಲ್ಲಿಸಿದ್ದೇ ತಡ, ಅತೃಪ್ತ ಶಾಸಕರು ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಓಡಿದರು. ನಂತರ ಮುಂಬೈಗೂ ಹಾರಿದರು. ಅಲ್ಲಿಂದ ದೇವರ ದರ್ಶನದ ನೆಪದಲ್ಲಿ ಮಹಾರಾಷ್ಟ್ರ ಪ್ರದಕ್ಷಿಣೆ ನೆಪದಲ್ಲಿ ಹಾಕುತ್ತಿದ್ದಾರೆ. ಈ ಓಟಕ್ಕೆ ಮೂಲ ಕಾರಣ ರಾಜೀನಾಮೆ ಬೆನ್ನಲ್ಲೇ ಘೋಷಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ‘ವಿಶ್ವಾಸ ಮತ’. ಈ ನಿರ್ಣಯದಿಂದ ಕಂಗಾಲಾದ ಅತೃಪ್ತ ಶಾಸಕರ ಗುಂಪು ಒಂದೇ ಕಡೆ ನೆಲೆ ನಿಲ್ಲದೆ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡುತ್ತಿದೆ.
ಸ್ಪೀಕರ್ ಕಚೇರಿಗೆ ತೆರಳಿ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ ನಂತರದಿಂದ ಈವರೆಗೆ ಅಂದರೆ ಎರಡು ದಿನಗಳಲ್ಲಿ ಅತೃಪ್ತ ಶಾಸಕರ ತಂಡ ಸುಮಾರು 1,500 ಕಿಮೀ ‘ಓಡಿದೆ’. ಇಲ್ಲಿಂದ ಮುಂಬೈನ ರೆನೈಸನ್ಸ್ ರೆಸಾರ್ಟ್‌ಗೆ ಓಡಿದ ಈ ತಂಡ ಸುಧಾರಿಸಿಕೊಳ್ಳುವಷ್ಟರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಯಂಪ್ರೇರಿತರಾಗಿ ‘ವಿಶ್ವಾಸ’ದ ಮತಕ್ಕೆ ನಿರ್ಣಯಿಸಿದರು. ಇದರಿಂದ ತಕ್ಷಣ ಅತೃಪ್ತರು ರೆಸಾರ್ಟ್‌ನಿಂದ ಹೊರಬಂದು ಮುಂಬೈ ನಗರದಲ್ಲಿರುವ ವಿನಾಯಕ ದೇವರ ಮೊರೆಹೋದರು. ಆದರೂ ಸಮಾಧಾನ ಆಗಲಿಲ್ಲ. 300 ಕಿ.ಮೀ. ದೂರದ ಶನಿಶಿಂಗಣಾಪುರ, ಅಲ್ಲಿಂದ 92 ಕಿ.ಮೀ. ದೂರದ ಶಿರಡಿ ಸಾಯಿಬಾಬಾ ದರ್ಶನ ಪಡೆದರು. ನಂತರ ಶನಿವಾರ ರಾತ್ರಿ ಔರಂಗಾಬಾದ್‌ನಲ್ಲಿ ಅತೃಪ್ತರು ತಂಗಿದರು. ಮೂಲಗಳ ಪ್ರಕಾರ ಹೆಚ್ಚು-ಕಡಿಮೆ ಇನ್ನೂ ಎರಡು ಮೂರು ದಿನಗಳು ಈ ಮಿಂಚಿನ ಓಟ ನಿಲ್ಲುವುದಿಲ್ಲ.
ಇಡೀ ದಿನದ ಓಟ
ರಿನೈಸನ್ಸ್ ರೆಸಾರ್ಟ್‌ನಿಂದ ಶನಿ ಸಿಂಗಣಾಪುರ- 300 ಕಿ.ಮೀ.
ಶನಿ ಶಿಂಗಣಾಪುರದಿಂದ ಶಿರಡಿ- 92 ಕಿ.ಮೀ.
ಶಿರಡಿಯಿಂದ ನಾಗ್ಪುರದ ಔರಂಗಾಬಾದ್ (ವಾಸ್ತವ್ಯ)- 108 ಕಿಮೀ.
ಇಂದು ಎಲ್ಲಿಗೆ ಭೇಟಿ?
ಔರಂಗಾಬಾದ್‌ನಿಂದ ಅಜಂತಾ-ಎಲ್ಲೋರಾ ಗುಹೆಗಳ ವೀಕ್ಷಣೆ