ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯ ನಾಮಪತ್ರ ಹಿಂಪಡೆಯುವ ಅಂತಿಮ ದಿನ ಸೋಮವಾರ ಕೆಲ ಬಂಡಾಯ ಅಭ್ಯರ್ಥಿಗಳು ಪಕ್ಷದ ಮುಖಂಡರ ಸೂಚನೆ, ಒತ್ತಡ, ಮನವೊಲಿಕೆ, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನದ ಭರವಸೆ ಮತ್ತು ಪಕ್ಷದ ನಿಷ್ಠೆ… ಹೀಗೆ ಕೆಲ ಕಾರಣಕ್ಕೆ ನಾಮಪತ್ರ ವಾಪಸ್ ಪಡೆದರು. ಇನ್ನು ಕೆಲವರು ಪಕ್ಷದ ವಿರುದ್ಧವೇ ಸೆಡ್ಡು ಹೊಡೆದು… ಕಣದಲ್ಲಿ ಉಳಿದುಕೊಂಡಿದ್ದಾರೆ. ಎರಡನೇ ಬಾರಿಗೆ ದಾವಣಗೆರೆ ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಜಿದ್ದಾಜಿದ್ದಿ ಪೈಪೋಟಿ ನಡೆಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ರೆಬೆಲ್ ಅಭ್ಯರ್ಥಿಗಳು ಬಿಸಿ ತುಪ್ಪವಾಗಿದ್ದಾರೆ.
ಕೆಲವರು ನಾಮಪತ್ರ ವಾಪಸ್ ಪಡೆದುಕೊಳ್ಳವಂತೆ ಮಾಡುವಲ್ಲಿ ಪಕ್ಷದ ಮುಖಂಡರು ಯಶ ಸಾಧಿಸಿದ್ದಾರೆ. ಕೆಲ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದಿರುವುದರಿಂದ ಮುಂದಿನ ನಡೆಯ ಬಗ್ಗೆ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಂದೊಂದು ಮತ… ಅತೀ ಪ್ರಮುಖ ಪಾತ್ರ ವಹಿಸುತ್ತದೆ. ಟಿಕೆಟ್ ದೊರೆಯದ ಸಿಟ್ಟಿಗೆ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯುವರು ಕೈ ಹಾಕುವುದೇ ಸ್ವಪಕ್ಷೀಯ ಮತಗಳಿಗೆ. ಪಕ್ಷಕ್ಕೆ ದೊರೆಯುವ ಖಾಯಂ… ಮತಗಳು ಹಂಚಿಕೆಯಾದರೆ ಫಲಿತಾಂಶ ಏನಾದರೂ ಆಗಬಹುದು ಎಂಬ ಆತಂಕ ಇರುವ ಕಾರಣಕ್ಕೆ ಪಕ್ಷದ ಮುಖಂಡರು ನೋಟಿಸ್ ಜಾರಿ, ಮನವೊಲಿಕೆ, ಉಚ್ಛಾಟನೆಯಂತಹ ಮಂತ್ರ ಪಠಿಸಿದ್ದು ತಕ್ಕ ಮಟ್ಟಿಗೆ ಯಶ ತಂದುಕೊಟ್ಟಿದೆ.
ಕೆಲವು ವಾರ್ಡ್‌ಗಳಲ್ಲಿ ಯಾವ ಮಂತ್ರ ಕೆಲಸ ಮಾಡಿಲ್ಲ. ಕಳೆದ ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಭರ್ಜರಿಯಾಗಿಯೇ ಮತಗಳ ಪಡೆದಿದ್ದ ಬಿಜೆಪಿ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಮತಬೇಟೆಯ ಮೂಲಕ ಅಧಿಕಾರದ ಚುಕ್ಕಾಣಿ ಮತ್ತೆ ಹಿಡಿಯುವ ಭಾರೀ ಭರವಸೆಯೊಂದಿಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಎಲ್ಲಾ 45 ವಾರ್ಡ್‌ಗಳಲ್ಲಿ ಟಿಕೆಟ್ ಆಕಾಂಕ್ಷಿತರ ಸಂಖ್ಯೆ ಜಾಸ್ತಿ. ಬಿ-ಫಾರಂಗೂ ಜಿದ್ದಾಜಿದ್ದಿ ಕಂಡು ಬಂದಿತು. ಕೆಲವರಿಗೆ ಟಿಕೆಟ್ ಸಿಕ್ಕಿದ್ದು, ಅಂತಿಮ ಗಳಿಗೆಯವರೆಗೆ ಟಿಕೆಟ್ ದೊರೆತೇ ತೀರುವ ವಿಶ್ವಾಸದಲ್ಲಿದ್ದವರಿಗೆ ಟಿಕೆಟ್ ತಪ್ಪಿದ್ದರಿಂದ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೆ ಬಂಡಾಯ ಅಭ್ಯರ್ಥಿಗಳಾಗಿದ್ದರು.
ಕೆಲವರು ನಾಮಪತ್ರ ಹಿಂದಕ್ಕೆ ಪಡೆದರೆ. ಇನ್ನು ಕೆಲವರು ರೆಬೆಲ್‌ಗಳಾಗಿ ಉಳಿದಿದ್ದಾರೆ. ಬಿಜೆಪಿಯಿಂದ ಮತ್ತೆ ಟಿಕೆಟ್ ಬಯಸಿದ್ದ ಮಾಜಿ ಮೇಯರ್ ಉಮಾ ಪ್ರಕಾಶ್(32ನೇ ವಾರ್ಡ್), ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ರಾಜಶೇಖರ್(33ನೇ ವಾರ್ಡ್), ಅತಿಥ್ ಅಂಬರ್‌ಕರ್(27ನೇ ವಾರ್ಡ್), ಜಗಳೂರು ಕ್ಷೇತ್ರದ ಮಾಜಿ ಶಾಸಕ ಟಿ. ಗುರುಸಿದ್ದನಗೌಡರ ಸೊಸೆ ಪ್ರೀತಿ ರವಿಕುಮಾರ್(42ನೇ ವಾರ್ಡ್), ಪದ್ಮಾವತಿ ಮಂಜುನಾಥ್(44ನೇ ವಾರ್ಡ್), ನಳಿನಾ ನರೇಂದ್ರ ಪವಾರ್(10ನೇ ವಾರ್ಡ್) ಅವರೊಂದಿಗೆ ಕೆಲವರು ಕಣದಲ್ಲಿ ಉಳಿದುಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಮತ್ತೂಮ್ಮೆ ಟಿಕೆಟ್ ಬಯಸಿದ್ದ ನಗರಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮಿದೇವಿ ವೀರಣ್ಣ(8ನೇ ವಾರ್ಡ್) ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ. ತಮ್ಮ ಆಪ್ತ ಗೆಳತಿ, ಮಾಜಿ ಸದಸ್ಯೆ, ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಎಸ್.ಎನ್. ಗೌರಮ್ಮ ಚಂದ್ರಪ್ಪ ವಿರುದ್ಧ ಸೆಣಸಾಟಕ್ಕೆ ಸಜ್ಜಾಗಿದ್ದಾರೆ. ಬಿಜೆಪಿ ಬಿ-ಫಾರಂ ಅಪೇಕ್ಷಿತ ಅಭ್ಯರ್ಥಿಯಾಗಿ 27ನೇ ವಾರ್ಡ್‌ನಿಂದ ನಾಮಪತ್ರ ಸಲ್ಲಿಸಿದ್ದ ಕೆ. ದುಗ್ಗಮ್ಮ ಪಕ್ಷದ ಮುಖಂಡರ ಮಾತಿಗೆ ಮನ್ನಣೆ ನೀಡಿ ನಾಮಪತ್ರ ಹಿಂದಕ್ಕೆ ಪಡೆದರು. 19ನೇ ವಾರ್ಡ್‌ನಿಂದ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ಡಿ.ಎಂ. ಕಾಂತರಾಜ್, 8ನೇ ವಾರ್ಡ್‌ಗೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚೇತನಾ ಶಿವಕುಮಾರ್ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. 28ನೇ ವಾರ್ಡ್‌ನಿಂದ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಟಾರ್ಗೆಟ್ ಅಸ್ಲಾಂ, 27ನೇ ವಾರ್ಡ್‌ನಿಂದ ಎಚ್.ಸಿ. ವಾಣಿ, ಮಂಜುಳಾ ಕೇರಂ ಗಣೇಶ್, 9ನೇ ವಾರ್ಡ್‌ನಿಂದ ಆಮ್ ಆದ್ಮಿ ಪಾರ್ಟಿಯ ಆದಿಲ್‌ಖಾನ್ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.
-ರಾ. ರವಿಬಾಬು