“ಇದು ನನ್ನ ಕನಸು ನನಸಾದ ದಿನ …’
– ಹೀಗೆಂದು ಖುಷಿಯಾದರು ಶಶಾಂಕ್. ನಿರ್ದೇಶಕ ಶಶಾಂಕ್ ಅಂದು ನಿರ್ಮಾಪಕರ ಸ್ಥಾನದಲ್ಲಿದ್ದರು. ಅದು ಅವರ ಕನಸು ಕೂಡಾ. “ನನ್ನದೇ ಆದ ಬ್ಯಾನರ್ ಹುಟ್ಟುಹಾಕಿ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆ ಇತ್ತು. ಅದೀಗ ಈಡೇರಿದೆ. ಗಾಂಧಿನಗರದ ಸುಲಭ ದಾರಿಯಲ್ಲಿ ಹೋಗುತ್ತಿದ್ದರೆ ಯಾವತ್ತೋ ನಿರ್ಮಾಪಕನಾಗುತ್ತಿದ್ದೆ. ಆದರೆ, ನನಗೆ ನನ್ನದೇ ದಾರಿಯ ಮೂಲಕ ನಿರ್ಮಾಪಕನಾಗಬೇಕೆಂಬ ಆಸೆ ಇತ್ತು. ಅದರಂತೆ ನನ್ನದೇ ಬ್ಯಾನರ್ ಆರಂಭಿಸಿದ್ದೇನೆ. ಜೊತೆಗೆ ಈ ಬ್ಯಾನರ್‌ನ ಮೊದಲ ಸಿನಿಮಾವನ್ನು ಪ್ರತಿಭಾವಂತ ನಿರ್ದೇಶಕ ವೇದ್‌ಗುರು ಮಾಡುತ್ತಿದ್ದಾರೆ’ ಎಂದು ಸಿನಿಮಾ ಬಗ್ಗೆ ಹೇಳಿಕೊಂಡರು. ಆಗಷ್ಟೇ ತಮ್ಮ ಚೊಚ್ಚಲ ನಿರ್ಮಾಣದ “ತಾಯಿಗೆ ತಕ್ಕ ಮಗ’ ಚಿತ್ರದ ಮುಹೂರ್ತ ಮುಗಿಸಿಕೊಂಡ ಬಂದು ಮಾತಿಗೆ ಕುಳಿತಿದ್ದರು ಶಶಾಂಕ್.
ಈಗಾಗಲೇ ಶಶಾಂಕ್, ಅಜೇಯ್ ಜೊತೆ ಎರಡು ಸಿನಿಮಾಗಳನ್ನು ಮಾಡಿದ್ದಾರೆ. ಈಗ ಮೂರನೇ ಸಿನಿಮಾವನ್ನು ಕೂಡಾ ಅಜೇಯ್ ಜೊತೆ ಮಾಡುತ್ತಿದ್ದಾರೆ. “ತಾಯಿಗೆ ತಕ್ಕ ಮಗ’ ನಿಗೆ ಅಜೇಯ್ ನಾಯಕ. ಇದು ಶಶಾಂಕ್ ಅವರ ಕಥೆ. ಅದನ್ನು ವೇದ್‌ಗುರು ನಿರ್ದೇಶಿಸುತ್ತಿದ್ದಾರೆ. ವೇದ್‌ಗುರು ಈ ಹಿಂದೆ ಅಜೇಯ್‌ಗೆ “ದಂಡಯಾತ್ರೆ’ ಎಂಬ ಸಿನಿಮಾ ಮಾಡಲು ಹೊರಟಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ಮುಂದುವರೆಯಲಿಲ್ಲ. ಇನ್ನು, “ತಾಯಿಗೆ ತಕ್ಕ ಮಗ’ ಟೈಟಲ್ ಕೇಳಿದಾಗಲೇ ಇದೊಂದು ತಾಯಿ-ಮಗನ ಸೆಂಟಿಮೆಂಟ್ ಕಥೆ ಎಂದು ನೀವಂದುಕೊಳ್ಳಬಹುದು. ಸೆಂಟಿಮೆಂಟ್ ಜೊತೆಗೆ ಇದು ತಾಯಿ-ಮಗನ ರೆಬೆಲ್ ಸ್ಟೋರಿ ಎನ್ನಬಹುದು.
ಶಶಾಂಕ್ ಅವರಿಗೆ ಈ ಕಥೆ ಹುಟ್ಟಲು ಕಾರಣ ಅಜೇಯ್ ಅವರ ತಾಯಿ ಪ್ರೀತಿಯಂತೆ. “ನಾವೆಲ್ಲರೂ ನಮ್ಮ ತಾಯಂದಿರನ್ನು ಪ್ರೀತಿಸುತ್ತೇವೆ. ಆದರೆ, ಅಜೇಯ್‌ಗೆ ಅವರ ತಾಯಿ ಎಂದರೆ ಸ್ವಲ್ಪ ಹೆಚ್ಚೇ ಪ್ರೀತಿ, ಕಾಳಜಿ, ಅಕ್ಕರೆ. ಇದನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಆ ಅಂಶದೊಂದಿಗೆ ಕಥೆ ಮಾಡಿದ್ದೇನೆ. ಹಾಗಂತ ಇಲ್ಲಿ ತಾಯಿ-ಮಗನ ಸೆಂಟಿಮೆಂಟ್ ಅಷ್ಟೇ ಇಲ್ಲ. ಬದಲಾಗಿ ಒಬ್ಬ ಸಾಮಾನ್ಯ ವ್ಯಕ್ತಿಯ ಕೋಪವೂ ಇದೆ. ಈ ಸಮಾಜಕ್ಕೆ ಸಾಮಾನ್ಯ ವ್ಯಕ್ತಿಯ ಕೋಪ ಎಷ್ಟು ಮುಖ್ಯ ಎಂಬ ಅಂಶವೂ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅನ್ಯಾಯ, ಅಸಮಾನತೆಯ ವಿರುದ್ಧ ಹೋರಾಡುವ ತಾಯಿ ಮಗನ ಕಥೆಯೂ ಇಲ್ಲಿದೆ. ಜೊತೆಗೆ ಒಂದು ಲವ್‌ಸ್ಟೋರಿಯೂ ಇದೆ’ ಎಂದು ಚಿತ್ರದ ಬಗ್ಗೆ ಹೇಳಿದರು ಶಶಾಂಕ್. ಚಿತ್ರದಲ್ಲಿ ಅಜೇಯ್ ತಾಯಿಯಾಗಿ ಸುಮಲತಾ ಅಂಬರೀಶ್ ನಟಿಸುತ್ತಿದ್ದಾರೆ. ತಾಯಿ ಪಾತ್ರ ಎಂದಾಗ ಅಜೇಯ್ ಬಾಯಲ್ಲಿ ಬಂದ ಮೊದಲ ಹೆಸರು ಸುಮಲತಾ ಅವರಂತೆ. ಅದಕ್ಕೆ ಕಾರಣ “ಎಕ್ಸ್‌ಕ್ಯೂಸ್ ಮೀ’ ಚಿತ್ರ. ಆ ಚಿತ್ರದಲ್ಲಿ ಅಜೇಯ್‌ಗೆ ತಾಯಿಯಾಗಿ ಸುಮಲತಾ ನಟಿಸಿದ್ದರು. ಈಗ 14 ವರ್ಷಗಳ ನಂತರ ಮತ್ತೂಮ್ಮೆ ಜೊತೆಯಾಗಿ ನಟಿಸುತ್ತಿದ್ದಾರೆ.
ಅಂದಹಾಗೆ, “ತಾಯಿಗೆ ತಕ್ಕ ಮಗ’ ಅಜೇಯ್ ಅವರ 25ನೇ ಸಿನಿಮಾ. 25ನೇ ಸಿನಿಮಾ ಶಶಾಂಕ್ ಬ್ಯಾನರ್‌ನಲ್ಲಿ ಆಗುತ್ತಿರುವ ಖುಷಿ ಅಜೇಯ್ ಅವರದು. “ಅವರ ಬ್ಯಾನರ್‌ನಲ್ಲಿ ನಟಿಸುತ್ತಿರೋದು ಹೆಮ್ಮೆ. ನಾನು ನಟನಾಗಿ ಮತ್ತಷ್ಟು ಪರಿಪಕ್ವವಾಗಿದ್ದು, ಇವರ ಸಿನಿಮಾಗಳಿಂದ ಎಂದರೆ ತಪ್ಪಲ್ಲ’ ಎಂದು ಶಶಾಂಕ್ ಬಗ್ಗೆ ಹೇಳಿದರು ಅಜೇಯ್. ಇನ್ನು, ಸುಮಲತಾ ಅವರು ಮತ್ತೆ ತನಗೆ ತಾಯಿಯಾಗಿ ನಟಿಸುತ್ತಿರೋದು ಅಜೇಯ್ ಖುಷಿಯ ವಿಚಾರವಂತೆ. ಅಜೇಯ್‌ಗೆ ತೆರೆಮೇಲೆ ಇಲ್ಲಿವರೆಗೆ ಅನೇಕರು ತಾಯಿಯಾಗಿ ನಟಿಸಿದ್ದಾರೆ. ಆದರೆ, ಸುಮಲತಾ ಅವರ ಜೊತೆ ನಟಿಸೋದು ತುಂಬಾ ಖುಷಿಯಂತೆ. ಈ ಚಿತ್ರದಲ್ಲಿ ಅನ್ಯಾಯ, ಅಸಮಾನತೆಯ ವಿರುದ್ಧ ಹೋರಾಡುವ ಪಾತ್ರವಾಗಿದ್ದು, ಮೋಹನ್ ದಾಸ್ ಎಂಬುದು ಅವರ ಪಾತ್ರದ ಹೆಸರಂತೆ. ಚಿತ್ರದಲ್ಲಿ ಆ್ಯಕ್ಷನ್ ಕೂಡಾ ಹೆಚ್ಚಿರೋದರಿಂದ ಬಾಡಿ ಬಿಲ್ಡ್ ಕೂಡಾ ಮಾಡಿದ್ದಾಗಿ ಹೇಳಿಕೊಂಡರು ಅಜೇಯ್. ಚಿತ್ರದಲ್ಲಿ ತಾಯಿ ಪಾತ್ರ ಮಾಡುತ್ತಿರುವ ಸುಮಲತಾ ಅವರಿಗೆ ತುಂಬಾ ದಿನಗಳ ನಂತರ ಒಂದು ಗಟ್ಟಿತನದ ಪಾತ್ರ ಸಿಕ್ಕಿದೆಯಂತೆ. ಅವರಿಲ್ಲಿ ಲಾಯರ್ ಆಗಿ ನಟಿಸುತ್ತಿದ್ದು, ಅಸಮಾನತೆಯ ವಿರುದ್ಧ ಸಿಡಿದೇಳುವ ಪಾತ್ರ ಎಂದು ಹೇಳಿದರು. ಚಿತ್ರದ ನಿರ್ದೇಶಕ ವೇದ್‌ಗುರು ಹೆಚ್ಚೇನು ಮಾತನಾಡಲಿಲ್ಲ. ಅವಕಾಶ ಕೊಟ್ಟವರಿಗೆ ಥ್ಯಾಂಕ್ಸ್ ಹೇಳಿದರು. ಚಿತ್ರದಲ್ಲಿ ಆಶಿಕಾ ನಾಯಕಿ. ಅಚ್ಯುತ್ ಕುಮಾರ್ ನಾಯಕಿಯ ತಂದೆ ಪಾತ್ರ ಮಾಡುತ್ತಿದ್ದಾರೆ. ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ನಂದಕಿಶೋರ್ ಛಾಯಾಗ್ರಹಣವಿದೆ.