ಬೆಂಗಳೂರು: 2013 ರ ವಿಧಾನಸಭೆ ಚುನಾವಣೆಯಲ್ಲಿ ಡಾ.ಎಚ್.ಸಿ. ಮಹದೇವಪ್ಪ 200 ಮತಗಳಿಂದ ಸೋತಿದ್ದರು. ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳ ಮೂಲಕ ಅಂಚೆ ಮತಗಳನ್ನು ಮಹದೇವಪ್ಪ ಹೆಸರಿಗೆ ಬದಲಾಯಿಸಿ ಗೆಲ್ಲುವಂತೆ ನೋಡಿಕೊಂಡರು ಎಂದು ಸಿವಿ ರಾಮನ್ ನಗರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪಿ. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಆಪ್ತರಲ್ಲಿ ನಾನೂ ಒಬ್ಬ 2013 ಚುನಾವಣಾ ಫಲಿತಾಂಶ ಹೊರ ಬಿದ್ದ ಸಂದರ್ಭದಲ್ಲಿ ಮಹದೇವಪ್ಪ 200 ಮತಗಳಿಂದ ಸೋತ ಸುದ್ದಿ ಬಂದ ತಕ್ಷಣ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಜಿಲ್ಲಾಧಿಕಾರಿಗೆ ಫಲಿತಾಂಶ ಪ್ರಕಟಿಸದಂತೆ ತಡೆ ಹಿಡಿದು, ಅಂಚೆ ಮತಗಳನ್ನು ಮಹದೇವಪ್ಪ ಹೆಸರಿಗೆ ಸೇರಿಸಿ ಗೆಲ್ಲುವಂತೆ ನೋಡಿಕೊಂಡಿದ್ದರು ಎಂದು ಆರೋಪಿಸಿದರು.
ಈಗ ಬೆಂಗಳೂರಿನ ಸಿ.ವಿ. ರಾಮನ್ ನಗರದಲ್ಲಿ ಮಹದೇವಪ್ಪ ಅವರನ್ನು ಕರೆತಂದು ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡುವಂತೆ ಕೇಳಿಕೊಂಡಿದ್ದರು. ಅದನ್ನು ನಿರಾಕರಿಸಿದ್ದಕ್ಕೆ ತಮಗೆ ಅವಕಾಶ ತಪ್ಪಿಸುತ್ತಿದ್ದಾರೆ. ಸಿ.ವಿ. ರಾಮನ್ ನಗರದಲ್ಲಿ ಎಚ್.ಸಿ. ಮಹದೇವಪ್ಪ ಸೋಲುತ್ತಾರೆ ಎಂದು ಎಲ್ಲ ಸಮೀಕ್ಷೆಗಳಲ್ಲಿಯೂ ವರದಿ ಬಂದಿದೆ. ಹೀಗಾಗಿ ಮಹದೇವಪ್ಪ ಸ್ಪರ್ಧಿಸಲು ಹಿಂದೆಟು ಹಾಕುತ್ತಿದ್ದರೂ ಅವರನ್ನೇ ನಿಲ್ಲಿಸಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು.
ರಾಜ್ಯದಲ್ಲಿ ಇಂದಿರಾ ಕಾಂಗ್ರೆಸ್ ಇಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಇದೆ. ಎಲ್ಲ ತೀರ್ಮಾನಗಳು ಸಿದ್ದರಾಮಯ್ಯ ಬಯಸಿದಂತೆ ಆಗುತ್ತಿವೆ. ಸಿದ್ದರಾಮಯ್ಯ ಅವರಿಗೆ ದೇವರೇ ಹೆದರುತ್ತಿದ್ದಾನೆ. ರಾಹುಲ್ ಗಾಂಧಿ ಹೆದರುವುದಿಲ್ಲವೇ ? ಪಕ್ಷದಲ್ಲಿನ ಸಮಸ್ಯೆಗಳ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅಸಹಾಯಕರಾಗಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಸೇರ್ಪಡೆ:ಕಾಂಗ್ರೆಸ್‌ನಲ್ಲಿ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ ಅವರು, ಸಿ.ವಿ. ರಾಮನ್‌ನಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದರು.