Advertisement

ಎಲ್‌ಜೆಪಿ ಇಬ್ಭಾಗ: ಏಕಾಂಗಿಯಾದ  ಅಧ್ಯಕ್ಷ ಚಿರಾಗ್‌ ಪಾಸ್ವಾನ್‌

08:34 AM Jun 15, 2021 | Team Udayavani |

ಹೊಸದಿಲ್ಲಿ: ಬಿಹಾರ ರಾಜಕೀಯವು ಸೋಮವಾರ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಕೇಂದ್ರದ ಮಾಜಿ ಸಚಿವ ದಿವಂಗತ ರಾಮ್‌ ವಿಲಾಸ್‌ ಪಾಸ್ವನ್‌ರಿಂದ ಸ್ಥಾಪಿತವಾಗಿರುವ ಲೋಕಜನಶಕ್ತಿ ಪಕ್ಷ ಏಕಾಏಕಿ ಇಬ್ಭಾಗವಾಗಿದೆ! ಎಲ್‌ ಜೆಪಿಯ ಆರು ಮಂದಿ ಲೋಕಸಭೆ ಸಂಸದರ ಪೈಕಿ ಐವರು ದಿಢೀರನೆ ಪಕ್ಷದ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ವಿರುದ್ಧ ಬಂಡಾಯ ಎದ್ದಿದ್ದಾರೆ.

Advertisement

ಜತೆಗೆ ಹಾಜಿಪುರ ಕ್ಷೇತ್ರದ ಲೋಕಸಭಾ ಸದಸ್ಯ, ಚಿರಾಗ್‌ ಅವರ ಬಂಧು ಪಶುಪತಿ ಕುಮಾರ್‌ ಪರಸ್‌ ಅವರನ್ನು ಪಕ್ಷದ ನಾಯಕ ಎಂದು ಆಯ್ಕೆ ಮಾಡಿದ್ದಾರೆ. ಅನಿರೀಕ್ಷಿತವಾಗಿ ನಡೆದ ಈ ಬೆಳವಣಿಗೆಯಿಂದ ಚಿರಾಗ್‌ ಪಾಸ್ವಾನ್‌ ಕಕ್ಕಾಬಿಕ್ಕಿಯಾಗಿರುವುದು ಮಾತ್ರವಲ್ಲ, ಪಕ್ಷದಲ್ಲಿ ಏಕಾಂಗಿಯಾಗಿದ್ದಾರೆ.

ಈ ಕುರಿತು ಹೊಸದಿಲ್ಲಿಯಲ್ಲಿ ಮಾತನಾಡಿದ ಪಶುಪತಿ ಪರಸ್‌, “ನಾನು ಪಕ್ಷವನ್ನು ಒಡೆದಿಲ್ಲ. ಬದಲಾಗಿ ಉಳಿಸಿದ್ದೇನೆ. ಹಾಲಿ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ನಾಯಕತ್ವದ ವಿರುದ್ಧ ಶೇ.99 ಮಂದಿ ಅತೃಪ್ತಿ ಹೊಂದಿದ್ದಾರೆ. ಜತೆಗೆ 2020ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಉಂಟಾದ ಹಿನ್ನಡೆಯೂ ಇದಕ್ಕೆ ಕಾರಣವಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ:ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

ನಿತೀಶ್‌ ಪ್ರತೀಕಾರ?: 2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ನಿತೀಶ್‌ ಕುಮಾರ್‌ ವಿರುದ್ಧ ತಿರುಗಿ ಬಿದ್ದಿದ್ದ ಚಿರಾಗ್‌ ಪಾಸ್ವಾನ್‌, ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲೂ ಎಲ್‌ಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಅಲ್ಲದೇ, ನಿತೀಶ್‌ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದ ಅವರು, ನಿತೀಶ್‌ರನ್ನು ಅಧಿಕಾರದಿಂದ ಕೆಳಕ್ಕಿಳಿಸಬೇಕೆಂದು ಕರೆ ನೀಡಿದ್ದರು.

Advertisement

ಇದರ ಪರಿಣಾಮವೆಂಬಂತೆ, ಚುನಾವಣೆಯಲ್ಲಿ ಜೆಡಿಯು ಬಾಹುಳ್ಯದ ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿತ್ತು. ಈಗ ಎಲ್‌ಜೆಪಿ ಎರಡು ಹೋಳಾಗಿ, ಚಿರಾಗ್‌ಗೆ ಮುಖಭಂಗವಾಗಿರುವುದರ ಹಿಂದೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಕೈವಾಡವಿದೆ ಎಂಬ ಗುಸು ಗುಸು ಕೇಳಿ ಬಂದಿದೆ. ಚಿರಾಗ್‌ ವಿರುದ್ಧ ಸಂಸದರು ಬಂಡಾಯ ಏಳಲು ಖುದ್ದು ನಿತೀಶ್‌ ಅವರೇ ಕುಮ್ಮಕ್ಕು ನೀಡುವ ಮೂಲಕ ಪ್ರತೀಕಾರ ತೀರಿಸಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ.

ಎನ್‌ಡಿಎ ಜತೆ ಇರುತ್ತೇವೆ: ಹೊಸ ಬೆಳವಣಿಗೆಗಳ ಕುರಿತು ಲೋಕಸಭೆ ಸ್ಪೀಕರ್‌ ಒಂ ಬಿರ್ಲಾ ಅವರಿಗೆ ಮಾಹಿತಿ ನೀಡಲಾಗಿದೆ. ನಮ್ಮ ಗುಂಪು ಬಿಜೆಪಿ ನೇತೃತ್ವದ ಎನ್‌ಡಿಎ ಜತೆಗೇ ಇರುತ್ತದೆ. ಚಿರಾಗ್‌ ಅವರು ಪಕ್ಷದಲ್ಲಿ ಉಳಿಯಲಿದ್ದಾರೆ ಎಂದು ಪಶುಪತಿ ಕುಮಾರ್‌ ಪರಸ್‌ ಹೇಳಿದ್ದಾರೆ. ಜತೆಗೆ ಸಿಎಂ ನಿತೀಶ್‌ ಕುಮಾರ್‌ ಅವರನ್ನು “ವಿಕಾಸ ಪುರುಷ’ ಎಂದೂ ಅವರು ಬಣ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next