Advertisement

ವಿಶ್ವ ಕ್ರಿಕೆಟ್ ನಲ್ಲಿ ಲಂಕಾ ಪಡೆ ಈಗ ಛಾಪು ಕಳೆದುಕೊಳ್ಳುತ್ತಿದೆಯೇ?

03:03 PM Sep 18, 2018 | |

1996 ರ ಏಕದಿನ ವಿಶ್ವಕಪ್ ಚಾಂಪಿಯನ್ಸ್, 2007, 2011ರ ಏಕದಿನ ವಿಶ್ವಕಪ್ ಫೈನಲಿಸ್ಟ್, 2014ರ ಟಿ-20 ವಿಶ್ವಕಪ್ ವಿಜೇತರು,5 ಬಾರಿಯ ಏಶ್ಯಾಕಪ್ ಗೆದ್ದವರು, ಐಸಿಸಿ ಕೂಟಗಳಲ್ಲಿ ಸ್ಥಿರ ಪ್ರದರ್ಶನ ನೀಡುವ ತಂಡ. ಇಷ್ಟೆಲ್ಲಾ ಸಾಧನೆ ಮಾಡಿದ ದ್ವೀಪರಾಷ್ಟ್ರ ಶ್ರೀಲಂಕಾ ಕ್ರಿಕೆಟ್ ತಂಡದ ಸದ್ಯದ ಪರಿಸ್ಥಿತಿ ಮಾತ್ರ ಹೀನಾಯವಾಗಿದೆ. 

Advertisement

ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಕುಮಾರ ಸಂಗಕ್ಕರ, ಮಹೇಲ ಜಯವರ್ಧನೆ, ತಿಲಕರತ್ನ ದಿಲ್ಶನ್ ರಂತಹ ದಿಗ್ಗಜ ಆಟಗಾರರನ್ನು ವಿಶ್ವ ಕ್ರಿಕೆಟ್ ಗೆ ನೀಡಿದ ಸಿಂಹಳೀಯ ನಾಡು ಈಗ ಕ್ರಿಕೆಟ್ ನಲ್ಲಿ ಅಧಃಪತನ ಹೊಂದುತ್ತಿರುವ ಭಾವನೆ ಮೂಡಿಸುತ್ತಿದೆ. 

ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಏಶ್ಯಾ ಕಪ್ ನಲ್ಲಿ ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ವಿರುದ್ದ ಹೀನಾಯ ಸೋಲುಂಡ ಶ್ರೀಲಂಕಾ ಕೂಟದಿಂದಲೇ ಹೊರಬೀಳುತ್ತಿರುವುದು ಐದು ಬಾರಿಯ ಚಾಂಪಿಯನ್ನರಿಗೆ ನಿಜಕ್ಕೂ ಆಘಾತಕಾರಿ ಸಂಗತಿ. 

ಶ್ರೀಲಂಕಾ ಕ್ರಿಕೆಟ್ ತಂಡದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಈ ಅಂಶಗಳು ಕಾಣಸಿಗುತ್ತವೆ.
1) ಕಾಡುತ್ತಿದೆ ಹಿರಿಯರ ಅನುಪಸ್ಥಿತಿ


ತಂಡದ ಆಧಾರ ಸ್ಥಂಭಗಳಾಗಿದ್ದ ಕುಮಾರ ಸಂಗಕ್ಕರ ಮತ್ತು ಮಹೇಲ ಜಯವರ್ಧನೆ 2015ರ ವಿಶ್ವಕಪ್ ನಲ್ಲಿ ವಿದಾಯ ಘೋಷಿಸಿದ ನಂತರ ಅವರ ಸ್ಥಾನವನ್ನು ತುಂಬುವಂತಹ ಅರ್ಹ ಆಟಗಾರರ ಕೊರತೆ ಶ್ರೀಲಂಕಾ ಕ್ರಿಕೆಟ್ ಗೆ ಕಾಡುತ್ತಿದೆ. ದಿಲ್ಶನ್ ನಿವೃತ್ತಿಯಿಂದ ತಂಡದಲ್ಲಿ ಅನುಭವಿ ಆಟಗಾರರೇ ಇಲ್ಲದಂತಾಯಿತು. ಈ ಹಂತದಲ್ಲೆ ನಿಯಮಿತ ಓವರ್ ಪಂದ್ಯಗಳಿಂದ ರಂಗನಾ ಹೆರಾತ್, ಟೆಸ್ಟ್ ನಿಂದ ಲಸಿತ್ ಮಾಲಿಂಗ ನಿವೃತ್ತಿ ಕೂಡಾ ಸಿಂಹಳೀಯ ಕ್ರಿಕೆಟ್ ತಂಡವನ್ನು ಮತ್ತಷ್ಟು ಬಡವಾಗಿಸಿದ್ದು ಸುಳ್ಳಲ್ಲ.

2)ತಂಡದ ಕಳಪೆ ಫಾರ್ಮ್
2015ರ ವಿಶ್ವಕಪ್ ನಲ್ಲಿ 16 ವರ್ಷಗಳ ನಂತರ ಮೊದಲ ಬಾರಿಗೆ ಸೆಮಿ ಫೈನಲ್ ತಲುಪಲು ವಿಫಲವಾದ ಲಂಕನ್ನರು, ನಂತರ ತವರಿನಲ್ಲಿ ಭಾರತ ವಿರುದ್ಧ ಟೆಸ್ಟ್ ಸರಣಿಯನ್ನು 22 ವರ್ಷಗಳ ನಂತರ ಸೋತರು. 2016ರ ಟಿ-20 ವಿಶ್ವಕಪ್ ಕೂಟದಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದು ಲಿಗ್ ಹಂತದಲ್ಲೇ ಹೊರಬೀಳಬೇಕಾಯಿತು.

Advertisement

ತವರಿನಲ್ಲೇ ನಡೆದ ನಿದಹಾಸ್ ಟ್ರೋಫಿ ತ್ರಿಕೋನ ಸರಣಿಯಲ್ಲಿ ಫೈನಲ್ ತಲುಪಲು ಕೂಡಾ ಲಂಕನ್ನರಿಗೆ ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲು ಕೂಡಾ ಇವರ ಸೋಲಿನ ಸರಪಣಿಯ ಭಾಗವಾಯಿತು.

3) ಸೂಕ್ತ ನಾಯಕತ್ವದ ಕೊರತೆ
2011ರಲ್ಲಿ ಕುಮಾರ ಸಂಗಕ್ಕರ ನಾಯಕತ್ವ ತ್ಯಜಿಸಿದ ನಂತರ ದ್ವೀಪರಾಷ್ಟ್ರದ ಕ್ರಿಕೆಟ್ ತಂಡಕ್ಕೆ ಸೂಕ್ತ ಸಾರಥಿ ಸಿಗಲೇ ಇಲ್ಲ. ಹೀಗಾಗಿ ಕಳೆದ ಏಳು ವರ್ಷಗಳ ಅವಧಿಯಲ್ಲಿ ಶ್ರೀಲಂಕಾ ಏಕದಿನ ತಂಡವನ್ನು ಮುನ್ನಡೆಸಿದವರ ಸಂಖ್ಯೆ ಬರೋಬ್ಬರಿ ಎಂಟು. ಸದ್ಯ ಏಶ್ಯಾ ಕಪ್ ನಲ್ಲಿ ತಂಡವನ್ನು ಮುನ್ನಡೆಸಿದ ಏಂಜಲೋ ಮ್ಯಾಥ್ಯೂಸ್ ಬಿಟ್ಟರೆ ಬೇರೆ ಯಾರೂ ನಾಯಕತ್ವದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ.

4) ತಂಡದಲ್ಲಿರುವ ಅನುಭವಿ ಆಟಗಾರರ ಅಸ್ಥಿರ ಪ್ರದರ್ಶನ
ಸದ್ಯ ತಂಡದಲ್ಲಿರುವ ಅನುಭವಿ ಆಟಗಾರರರಾದ ಏಂಜಲೋ ಮ್ಯಾಥ್ಯೂಸ್, ದಿನೇಶ್ ಚಂಡಿಮಾಲ್, ಉಪುಲ್ ತರಂಗ, ಲಸಿತ್ ಮಾಲಿಂಗ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ. ಮಾಲಿಂಗ, ಚಂಡಿಮಾಲ್ ಗಾಯಾಳಾಗಿ ತಂಡದಿಂದ ಹೊರಗಿರುವುದೇ ಹೆಚ್ಚಾಗಿದೆ. ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ  ಅನಗತ್ಯ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಚೆಲ್ಲಿದ ಅನುಭವಿ ಉಪುಲ್ ತರಂಗ, ಮ್ಯಾಥ್ಯೂಸ್ ರಿಂದಲೂ ತಂಡ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ.

5) ಯುವ ಆಟಗಾರರಲ್ಲಿ ಟಿ-20 ಪ್ರಭಾವ
ತಂಡದಲ್ಲಿರುವ ಯುವ ಆಟಗಾರರು ಬ್ಯಾಟಿಂಗ್ ವೇಳೆಗೆ ಒಂಟಿ ರನ್  ತೆಗೆಯುವ ಕೆಲಸವನ್ನೇ  ಮರೆತಿರುವ ಹಾಗಿದೆ. ಏಶ್ಯಾಕಪ್ ಪಂದ್ಯಗಳಲ್ಲಿ ಇದು ಸಾಬೀತಾಗಿದೆ. ಚೆಂಡನ್ನು ಕೇವಲ ಬೌಂಡರಿ ಗೆರೆ ಮುಟ್ಟಿಸುವ ಅವಸರದಲ್ಲಿ ಎದುರಾಳಿಗಳಿಗೆ ಸುಲಭದಲ್ಲಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಉಪಖಂಡದ ಆಟಗಾರರಾಗಿ ಸ್ಪಿನ್ನರ್ ಗಳಿಗೆ ಸುಲಭದ ತುತ್ತಾಗುತ್ತಿರುವುದು ಇದಕ್ಕೆಲ್ಲಾ ಸಾಕ್ಷಿಯಾದಂತಿದೆ. ಸಂದರ್ಭಕ್ಕೆ ಅನುಗುಣವಾಗಿ ಬ್ಯಾಟ್ ಬೀಸುವ ಅಗತ್ಯ ಈ ಆಟಗಾರರಿಗಿದೆ. 

6) ಗುಣಮಟ್ಟದ ಸ್ಪಿನ್ನರ್ ಗಳ ಕೊರತೆ
ಮುತ್ತಯ್ಯ ಮುರಳೀಧರನ್ ರಂತಹ ಅದ್ಭುತ ಸ್ಪಿನ್ನರ್ ಇದ್ದ ಕ್ರಿಕೆಟ್ ತಂಡ ಈಗ ಗುಣಮಟ್ಟದ ಸ್ಪಿನ್ನರ್ ಗಳ ಕೊರತೆಯನ್ನು ಎದುರಿಸುತ್ತಿದೆ. ವಿಶ್ವ ದರ್ಜೆಯ ಸ್ಪಿನ್ನರ್ ರಂಗನಾ ಹೆರಾತ್ ಟೆಸ್ಟ್ ಗೆ ಸೀಮಿತವಾಗಿ ಬಿಟ್ಟ ನಂತರ ಮತ್ತೊಬ್ಬ ಸ್ಪಿನ್ನರ್ ನ ಹುಡುಕಾಟದಲ್ಲಿದೆ ಶ್ರೀಲಂಕಾ ತಂಡ. ತಂಡದಲ್ಲಿರುವ ಅಖಿಲ ಧನಂಜಯಗೆ ಸೂಕ್ತ ಬೆಂಬಲ ನೀಡುವ ಇನ್ನೊಬ್ಬ ಸ್ಪಿನ್ನರ್ ನ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next