Advertisement

ಪಾಲಿಕೆ-ಪೊಲೀಸರ ಸಮನ್ವಯ ಕೊರತೆಯೇ ಸಮಸ್ಯೆಗೆ ಕಾರಣ

11:13 PM Jan 12, 2021 | Team Udayavani |

ಮಹಾನಗರ: ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ಇಷ್ಟೊಂದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವುದಕ್ಕೆ ಬಹುಮುಖ್ಯ ಕಾರಣವೆಂದರೆ ಅದಕ್ಕೆ ಶಾಶ್ವತ ಪರಿಹಾರ ಕೊಂಡುಕೊಳ್ಳುವ ಉತ್ತರದಾಯಿತ್ವ ಹೊಂದಿರುವ ಮನಪಾ ಹಾಗೂ ಸಂಚಾರ ಪೊಲೀಸರ ನಡುವಿನ ಸಮನ್ವಯ ಕೊರತೆ.

Advertisement

ನಗರ ವ್ಯಾಪ್ತಿಯಲ್ಲಿ ಪಾರ್ಕಿಂಗ್‌ ಸಮಸ್ಯೆ ಯು ಜನಸಾಮಾನ್ಯರ ಹಾಗೂ ವ್ಯಾಪಾರಸ್ಥರ ನಿದ್ದೆಗೆಡಿಸುತ್ತಿದ್ದರೂ ಪರ್ಯಾಯ ಕ್ರಮದ ಬಗ್ಗೆ ಪ್ರಸ್ತಾವವಾದಾಗ ಸಂಚಾರ ಪೊಲೀಸರು ಮನಪಾ ಕಡೆಗೆ ಬೆಟ್ಟು ಮಾಡುವ ಮೂಲಕ “ಪಾಲಿಕೆಯವರು ನಗರದಲ್ಲಿ ಮೊದಲು ಪಾರ್ಕಿಂಗ್‌ ಜಾಗ ಎಲ್ಲೆಲ್ಲಿ ಎಂಬುದನ್ನು ಗುರುತಿಸಲಿ’ ಎಂದು ಹೇಳುತ್ತಾರೆ. ಇನ್ನೊಂದೆಡೆ ನಗರದಲ್ಲಿ ಪಾರ್ಕಿಂಗ್‌ ವಿಚಾರ ಅಥವಾ ಟೋಯಿಂಗ್‌ ತೊಂದರೆ ಬಗ್ಗೆ ಚರ್ಚೆಯಾದಾಗ, ಸಂಚಾರ ಪೊಲೀಸರು, “ನೋ-ಪಾರ್ಕಿಂಗ್‌ ಜಾಗಗಳನ್ನು ಗುರುತಿಸಿ’ ಆದೇಶ ಹೊರಡಿಸುತ್ತಾರೆ. ಆದರೆ ಜನರು ಎಲ್ಲೆಲ್ಲಿ ವಾಹನ ನಿಲ್ಲಿಸಬಹುದು ಎನ್ನುವ ಕುರಿತು ಎರಡೂ ಇಲಾಖೆ ಒಟ್ಟಾಗಿ ಕುಳಿತು ಪಾರ್ಕಿಂಗ್‌ ವಲಯ ಗುರುತಿಸುವ ಕೆಲಸ ಮಾತ್ರ ಆಗುತ್ತಿಲ್ಲ.  ವಾಸ್ತವದಲ್ಲಿ ನಗರ ಸಂಚಾರ ವ್ಯವಸ್ಥೆ ನಿರ್ವಹಣೆಯ ಜವಾಬ್ದಾರಿ ಟ್ರಾಫಿಕ್‌ ಪೊಲೀಸರದ್ದು. ಆದರೆ ಸುಗಮ ಸಂಚಾರ ವ್ಯವಸ್ಥೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಾಗಿರುವುದು ಪಾಲಿಕೆ. ಹೀಗಿರುವಾಗ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆಯು ನಗರದ ಪಾರ್ಕಿಂಗ್‌ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ಕಾರಣವಾಗುತ್ತಿರುವುದು ವಿಪರ್ಯಾಸ.

ಮಹಾನಗರ ಪಾಲಿಕೆಯಲ್ಲಿಯೂ ನಗರ ಯೋಜನೆ ಮತ್ತು ಅಭಿವೃದ್ಧಿ ಎಂಬ ಪ್ರತ್ಯೇಕ ವಿಭಾಗವಿದೆ. ಇದೀಗ ಸ್ಮಾರ್ಟ್‌ ಸಿಟಿ ಯೋಜನೆಯೂ ಸೇರಿಕೊಂಡಿದೆ. ಇನ್ನು ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ವ್ಯಾಪ್ತಿಯ ರಸ್ತೆಗಳಾಗಿದ್ದರೆ ಈ ಎರಡು ಇಲಾಖೆಗಳನ್ನೂ ಸೇರಿಸಬೇಕಾಗುತ್ತದೆ. ಹೀಗಾಗಿ ಸಂಚಾರ ಮತ್ತು ಪಾರ್ಕಿಂಗ್‌ ಸಮಸ್ಯೆ ಪರಿಹಾರಕ್ಕೆ ಈ ಎಲ್ಲ ಇಲಾಖೆಗಳ ನಡುವೆ ಸಂವಹನ-ಸಮನ್ವಯತೆ ಇಲ್ಲದಿದ್ದರೆ ಸಂಚಾರ ವ್ಯವಸ್ಥೆಯ ಸುಧಾರಣೆ ಕಷ್ಟ-ಸಾಧ್ಯ.

ಕಟ್ಟಡಗಳಲ್ಲಿ ಬೈಲಾ ಪಾಲನೆ ಇಲ್ಲ :

ಬಹುಮಹಡಿ ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳ ಬೈಲಾ ಪ್ರಕಾರ, ಯಾವುದೇ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಮನಪಾದಿಂದ ಅನುಮತಿ ಪಡೆಯಬೇಕಾದರೆ ತಳ ಅಂತಸ್ತು ಸಹಿತ ನಿರ್ದಿಷ್ಟ ಸಂಖ್ಯೆಯ ಪಾರ್ಕಿಂಗ್‌ ಜಾಗ ಮೀಸಲಿಡಬೇಕು. ಆದರೆ ನಗರದಲ್ಲಿ ಬಹಳಷ್ಟು ಕಟ್ಟಡಗಳ ಪಾರ್ಕಿಂಗ್‌ ಸ್ಥಳಾವಕಾಶ ಕಟ್ಟಡದ ನೀಲ ನಕ್ಷೆಗೆ ಮಾತ್ರ ಮೀಸಲು. ಕಟ್ಟಡ ಕಾಮಗಾರಿ ಮುಕ್ತಾಯಗೊಂಡು ಜನರ ಬಳಕೆಗೆ ಬಿಟ್ಟು ಕೊಟ್ಟ ಬಳಿಕ ವಾಹನ ನಿಲುಗಡೆ ಜಾಗವೇ ವ್ಯಾಪಾರ ಮಳಿಗೆ ತಾಣವಾಗಿ ಮಾರ್ಪಾಟು ಹೊಂದುತ್ತದೆ. ನಗರದಲ್ಲಿ ಎಷ್ಟು ಕಟ್ಟಡಗಳಲ್ಲಿ ಪಾರ್ಕಿಂಗ್‌ ನಿಯಮ ಉಲಂಘಿಸಲಾಗಿದೆ ಎಂಬುದನ್ನು ಕೂಡ ಪಾಲಿಕೆ ಅಧಿಕಾರಿಗಳು ಪತ್ತೆ ಮಾಡಿ ಕಟ್ಟುನಿಟ್ಟಿನ ಕ್ರಮ ಜರಗಿಸುತ್ತಿದ್ದರೆ, ಪಾರ್ಕಿಂಗ್‌ ಸಮಸ್ಯೆ ಇಷ್ಟೊಂದು ಬಿಗಡಾಯಿಸುತ್ತಿರಲಿಲ್ಲ.

Advertisement

ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ಅ ಧಿಕಾರಿಗಳು ದಾಳಿ ನಡೆಸಿ ನೋಟಿಸ್‌ ನೀಡಿದ ಅನೇಕ ಘಟನೆಗಳು ಈ ಹಿಂದೆ ನಡೆದಿವೆ. ಡಾ| ವಿಜಯ ಪ್ರಕಾಶ್‌ ಪಾಲಿಕೆ ಆಯುಕ್ತರಾಗಿದ್ದಾಗ ಮತ್ತು ವಿಪುಲ್‌ ಕುಮಾರ್‌ ಅವರು ಮಂಗಳೂರು ಪೊಲೀಸ್‌ ಕಮಿಷನರೆಟ್‌ನ ಆಯುಕ್ತರಾಗಿದ್ದ ಸಂದರ್ಭದಲ್ಲಿ ರಸ್ತೆ ಬದಿಯ ಕೆಲವು ಬಹು ಮಹಡಿ ಕಟ್ಟಡಗಳಿಗೆ ದಾಳಿ ನಡೆಸಿದ್ದರು. ಪಾಲಿಕೆ ಮೂಲಗಳ ಪ್ರಕಾರ 2011ರ ಬಳಿಕ ನಿರ್ಮಾಣವಾದ ಬಹು ಮಹಡಿ ಕಟ್ಟಡಗಳ ತಳ ಅಂತಸ್ತು ಕಡ್ಡಾಯವಾಗಿ ಪಾರ್ಕಿಂಗ್‌ಗೆ ಮೀಸಲಿ ರಿಸಲಾಗಿದೆ. ಆದರೆ 2011ಕ್ಕಿಂತ ಹಿಂದೆ ನಿರ್ಮಾಣ ಗೊಂಡ ಕೆಲವು ಬಹು ಮಹಡಿ ಕಟ್ಟಡಗಳಲ್ಲಿನ ತಳ ಅಂತಸ್ತಿನಲ್ಲಿ ವ್ಯಾಪಾರ ಮಳಿಗೆಗಳಿದ್ದು, ಅವುಗಳನ್ನು ತೆರವು ಮಾಡಲು ಕ್ರಮ ಜರಗಿಸಿ ದಾಗ ಕೆಲವರು ನ್ಯಾಯಾ ಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದಲ್ಲಿರುವ ಇಂತಹ 88 ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ.  ಸಂಚಾರ ವ್ಯವಸ್ಥೆ ಯನ್ನು ಸುಧಾರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಗೆ, ಸ್ಮಾರ್ಟ್‌ ಸಿಟಿ ಯೋಜನೆಗೆ, ಪಿಡಬ್ಲ್ಯುಡಿ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪೊಲೀಸ್‌ ಇಲಾಖೆಯಿಂದ ಆಗಿಂದಾಗ್ಗೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗುತ್ತದೆ. ತುರ್ತು ನೆಲೆಯಲ್ಲಿ ಆಗಬೇಕಾಗಿರುವ ಕಾಮಗಾರಿಗಳ ಬಗ್ಗೆ ಪತ್ರ ಬರೆದು ಪೊಲೀಸರು ಕೋರುತ್ತಾರೆ. ವಿವಿಧ ಕಾಮಗಾರಿಗಳು ನಡೆಯುವಾಗ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಆದರೆ ಬಹಳಷ್ಟು ಬಾರಿ ಇವುಗಳಿಗೆ ಪಾಲಿಕೆಯಿಂದ ಸೂಕ್ತ ಪ್ರತಿಸ್ಪಂದನೆ ಸಿಗುತ್ತಿಲ್ಲ. ಪೊಲೀಸರೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ; ಮಹಾ ನಗರ ಪಾಲಿಕೆಯ ಸಭೆಗಳಿಗೆ ಪೊಲೀಸ್‌ ಅಧಿಕಾರಿಗಳು ಹಾಜರಾಗುತ್ತಿಲ್ಲ. ಕಳೆದ ಡಿಸೆಂಬರ್‌ ತಿಂಗಳ ಮ.ನ.ಪಾ. ಮಾಸಿಕ ಸಭೆಗೆ ಪೊಲೀಸ್‌ ಅಧಿಕಾರಿಗಳು ಹಾಜರಾಗದಿರುವ ಬಗ್ಗೆ ಸದನದಲ್ಲಿ ಪ್ರಸ್ತಾವವಾಗಿ ಚರ್ಚೆಯೂ ನಡೆದಿತ್ತು ಎನ್ನುವುದು ಉಲ್ಲೇಖಾರ್ಹ.

ಸಂವಹನ ಸಭೆಗಳು ಆಗಲಿ :

ಯಾವುದೇ ಸಮಸ್ಯೆ ನಿವಾರಣೆಯಲ್ಲಿ ಸಂವಹನ- ಸಮನ್ವಯ ಸಭೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಒಂದು ಕಡೆ ಕುಳಿತು ಚರ್ಚಿಸುವುದರಿಂದ ಸಮಸ್ಯೆಗಳು ಎಲ್ಲರಿಗೂ ಮನದಟ್ಟಾಗಿ ಅವುಗಳನ್ನು ಬಗೆಹರಿಸಲು ಪರಿಹಾರೋಪಾಯ ಕಂಡುಕೊಳ್ಳಲು ಸಾಧ್ಯವಿದೆ.

ಬೆರಳೆಣಿಕೆ  ಅಧಿಕೃತ ಪಾರ್ಕಿಂಗ್‌ ತಾಣ :

ನಗರದಲ್ಲಿ ಕೇವಲ ಬೆರಳೆಣಿಕೆಯ ಅಧಿಕೃತ ಪಾರ್ಕಿಂಗ್‌ ತಾಣಗಳಿವೆ. ಫುಟ್‌ಬಾಲ್‌ ಮೈದಾನ ಬಳಿ (ಲೇಡಿಗೋಶನ್‌ ಆಸ್ಪತ್ರೆ ಎದುರು), ಹಂಪನಕಟ್ಟೆ ಹಳೆ ಬಸ್‌ ನಿಲ್ದಾಣ, ಜ್ಯೋತಿ ಜಂಕ್ಷನ್‌ ಬಳಿ ಬಲ್ಮಠ ರಸ್ತೆಯ ಬದಿಯಲ್ಲಿ ಕೆಲವು ಕಡೆ, ಕಾರ್‌ಸ್ಟ್ರೀಟ್‌ ರಸ್ತೆಯ ಒಂದು ಬದಿ (ಪರ್ಯಾಯವಾಗಿ ಒಂದೊಂದು ದಿನ ಒಂದೊಂದು ಬದಿ)- ಇವು ಈಗಿರುವ ಪಾರ್ಕಿಂಗ್‌ ಜಾಗಗಳು. ಈ ಸ್ಥಳಗಳನ್ನು ಹೊರತುಪಡಿಸಿದರೆ ನಗರದಲ್ಲಿ ಬೇರೆ ಎಲ್ಲಿಯೂ ಅಧಿಕೃತ ಪಾರ್ಕಿಂಗ್‌ ಎಂಬುದಿಲ್ಲ. ಹಲವು ವರ್ಷಗಳ ಹಿಂದೆ ಈ ಜಾಗ ಗುರುತಿಸಿದ್ದು, ನಗರ ಈಗ ಸಾಕಷ್ಟು ಪ್ರಗತಿ ಕಂಡಿದೆ. ಹೀಗಿರುವಾಗ ಬೆರಳೆಣಿಕೆ ಪಾರ್ಕಿಂಗ್‌ ವಲಯ ಈಗಿನ ಸಂಚಾರ ದಟ್ಟಣೆಗೆ ಪೂರಕವಾಗಿಲ್ಲ.

ಪಾಲಿಕೆ ಬಳಿ ಮಾಹಿತಿಯಿಲ್ಲ :

ಮಂಗಳೂರು ಪೊಲೀಸ್‌ ಕಮಿಷನರೆಟ್‌ ವತಿಯಿಂದ ಕೆಲವು ದಿನಗಳ ಹಿಂದೆ ನಗರದ ನೋ ಪಾರ್ಕಿಂಗ್‌ ತಾಣಗಳನ್ನು ಗುರುತಿಸಿ ಪ್ರಕಟನೆ ಹೊರಡಿಸಲಾಗಿದೆ. ಅಧಿಕೃತ ಪಾರ್ಕಿಂಗ್‌ ತಾಣಗಳನ್ನು ಗುರುತಿಸಿ ಪ್ರಕಟಿಸುವಂತೆ ಮಹಾನಗರ ಪಾಲಿಕೆಗೆ ಪತ್ರ ಬರೆದಿದೆ. ಒಟ್ಟು 50 ಕಟ್ಟಡಗಳಲ್ಲಿ ಪಾರ್ಕಿಂಗ್‌ಗೆ ಕಾದಿರಿಸಿದ ಸ್ಥಳದಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿರುವುದನ್ನು ಪತ್ತೆ ಮಾಡಿ, ಈ ರೀತಿ ನಿಯಮ ಉಲ್ಲಂಘಿಸಿ ನಡೆಯುತ್ತಿರುವ ವ್ಯಾಪಾರ ಚಟುವಟಿಕೆಗಳನ್ನು ತೆರವು ಮಾಡಿಸುವಂತೆ ಪಾಲಿಕೆಗೆ ಸೂಚನೆ ನೀಡಿದೆ. ಆದರೆ ಈ ದಿಶೆಯಲ್ಲಿ ಪಾಲಿಕೆ ವತಿಯಿಂದ ಪೂರಕವಾದ ಕ್ರಮಗಳು ನಡೆದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿಪರ್ಯಾಸವೆಂದರೆ, ನಗರದಲ್ಲಿ ಇರುವ ಪಾರ್ಕಿಂಗ್‌ ತಾಣಗಳು ಮತ್ತು ನೋ ಪಾರ್ಕಿಂಗ್‌ ತಾಣಗಳ ಕುರಿತಂತೆ ಮಂಗಳೂರು ಮಹಾನಗರ ಪಾಲಿಕೆಯ ಬಳಿ ಯಾವುದೇ ಮಾಹಿತಿಯೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next