Advertisement

‘ಈ ಸಲ ತಪ್ಪು ನಮ್ದೇ!’ಆರ್ ಸಿಬಿ ಸೋಲಿಗೆ ಕಾರಣವೇನು ಗೊತ್ತಾ ?

10:03 AM May 08, 2019 | keerthan |

ಹಲವು ರೋಮಾಂಚನಕಾರಿ ಘಳಿಗೆಗಳಿಗೆ ಸಾಕ್ಷಿಯಾದ ಹನ್ನೊಂದನೇ ಆವೃತ್ತಿಯ ಐಪಿಎಲ್ ಲೀಗ್ ಹಂತ ಮುಗಿಸಿ ಈಗ ಪ್ಲೇ ಆಫ್ ಗೆ ಲಗ್ಗೆ ಇಟ್ಟಿದೆ. ಅಗ್ರ ನಾಲ್ಕು ತಂಡಗಳು ಪ್ಲೇ ಆಫ್ ಪ್ರವೇಶ ಗಿಟ್ಟಿಸಿದೆ. ಕಳೆದ ವರ್ಷದಂತೆ ‘ ಈ ಸಲ ಕಪ್ ನಮ್ದೇ’ ಎಂದು ಜೋರಾಗಿಯೇ ಹೇಳಿಕೊಂಡು ಬಂದ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಗಿ ಕೂಟ ಮುಗಿಸಿದೆ. ಆರ್ ಸಿಬಿ ಅಭಿಮಾನಿಗಳು ಮತ್ತೆ ಮುಂದಿನ ವರ್ಷ ಈ ಸಲ ಕಪ್ ನಮ್ದೇ ಡೈಲಾಗ್ ಹೊಡೆಯಬೇಕಿದೆ.

Advertisement

ವಿರಾಟ್ ಕೊಹ್ಲಿ, ಎ ಬಿ ಡಿ’ವಿಲಿಯರ್ಸ್, ಶಿಮ್ರನ್ ಹೆಟ್ ಮೈರ್ ಮುಂತಾದ ಘಟಾನುಘಟಿ ಆಟಗಾರರೇ ಇದ್ದರೂ ಆರ್ ಸಿಬಿ ಯಾಕೆ ಪದೇ ಪದೇ ಎಡವುತ್ತಿದೆ? ಋತುವಿನ ಮೊದಲ ಪಂದ್ಯ ಗೆಲ್ಲಲು ಆರು ಪಂದ್ಯಗಳನ್ನು ಸೋಲಬೇಕಾದ ಪರಿಸ್ಥಿತಿ ಯಾಕೆ ಬಂತು ? ಭಾರತ ತಂಡದಲ್ಲಿ ಯಶಸ್ವಿಯಾಗುವ ಕ್ಯಾಪ್ಟನ್ ಕೊಹ್ಲಿ ಬೆಂಗಳೂರು ತಂಡ ಮುನ್ನಡೆಸುವಾಗ ಯಾಕೆ ವಿಫಲರಾಗುತ್ತಾರೆ ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಣ್ಣ ಪ್ರಯತ್ನ ಇಲ್ಲಿದೆ.

1. ದುಬಾರಿಯಾದ ಬೌಲರ್ ಗಳು
ಪ್ರಸಕ್ತ ಸಾಲಿನ ಆರ್ ಸಿಬಿ ಬೌಲರ್ ಗಳದ್ದು ವ್ಯಥೆಯ ಕಥೆ. ರನ್ ಬಿಟ್ಟುಕೊಡುವುದರಲ್ಲಿ ಎಲ್ಲರಿಗಿಂತ ಮುಂದು ಆರ್ ಸಿಬಿ ಬೌಲರ್ ಗಳು. ಪವರ್ ಪ್ಲೇ ಓವರ್ ಗಳು ಮತ್ತು ಕೊನೆಯ ನಾಲ್ಕು ಓವರ್ ಗಳಲ್ಲಿ ಸಿಕ್ಕಾಪಟ್ಟೆ ದಂಡಿಸಿಕೊಂಡು ತಂಡಕ್ಕೆ ದೊಡ್ಡ ತಲೆನೋವಾಗಿದ್ದರು. ಆಸೀಸ್ ವೇಗಿ ನಥನ್ ಕೌಲ್ಟರ್ ನೈಲ್ ಗಾಯಗೊಂಡು ಐಪಿಎಲ್ ಗೆ ಬಾರದೇ ಇದ್ದುದು ಕೂಡಾ ಹಿನ್ನಡೆಯಾಯಿತು. ಉಮೆಶ್ ಯಾದವ್, ಸಿರಾಜ್, ನವದೀಪ್ ಸೈನಿ ಹೀಗೆ ಎಲ್ಲರೂ ದುಬಾರಿಯಾದರು. ಅರ್ಧ ಕೂಟ ಮುಗಿದ ನಂತರ ಬಂದ ಆಫ್ರಿಕಾ ವೇಗಿ ಡೇಲ್ ಸ್ಟೈನ್ ಅಷ್ಟೇ ವೇಗವಾಗಿ ಗಾಯಗೊಂಡು ಹಿಂದೆ ಹೋಗಿದ್ದು ಕೂಡಾ ಆಯ್ತು. ಸ್ಪಿನ್ನರ್ ಚಾಹಲ್ ಗೆ ಉತ್ತಮ ಜೊತೆಗಾರ ಸಿಗದೇ ಸ್ಪಿನ್ ಬೌಲಿಂಗ್ ಕೂಡಾ ಕಷ್ಟಪಡಬೇಕಾಯಿತು.


2. ಕೊಹ್ಲಿ, ಡಿ’ವಿಲಿಯರ್ಸ್ ಮೇಲೆ ಅವಲಂಬನೆ

ಇದು ರಾಯಲ್ ಚಾಲೆಂಜರರ್ಸ್ ಬೆಂಗಳೂರು ತಂಡವನ್ನು ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆ. ಈ ಮೊದಲು ಕ್ರಿಸ್ ಗೇಲ್, ಕೊಹ್ಲಿ ಮತ್ತು ಡಿ’ವಿಲಿಯರ್ಸ್ ಮೇಲೆ ಹೆಚ್ಚಾಗಿ ಅವಲಂಬಿತವಾಗಿದ್ದ ಬೆಂಗಳೂರು ಕ್ರಿಸ್ ಗೇಲ್ ಕೈಬಿಟ್ಟ ಮೇಲೆ ಕೊಹ್ಲಿ ಮತ್ತು ಡಿ’ವಿಲಿಯರ್ಸ್ ರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಇವರಿಬ್ಬರೂ ಆಡದೇ ಹೋದಲ್ಲಿ ಬೆಂಗಳೂರು ಬ್ಯಾಟಿಂಗ್ ಗತಿ ಅಧೋಗತಿ. ಕೆಲವು ಪಂದ್ಯಗಳಲ್ಲಿ ಪಾರ್ಥೀವ್ ಪಟೇಲ್, ಮೋಯೀನ್ ಅಲಿ ಮಿಂಚಿದರೂ ಸ್ಥಿರ ಪ್ರದರ್ಶನ ಅವರಿಂದ ಬಂದಿಲ್ಲ.

3. ಕ್ಯಾಚ್ ಬಿಟ್ಟು ಮ್ಯಾಚ್ ಬಿಟ್ಟ ಆರ್ ಸಿಬಿ


ಈ ಸಾಲಿನಲ್ಲಿ ಬೆಂಗಳೂರು ತಂಡದ ಫೀಲ್ಡಿಂಗ್ ತೀರಾ ಕಳಪೆ ಮಟ್ಟದಲ್ಲಿತ್ತು. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಆರ್ ಸಿಬಿ ಫೀಲ್ಡರ್ ಗಳು ಕೈ ಗೆ ಬಂದ ಕ್ಯಾಚ್ ಗಳನ್ನು ಕೈಚೆಲ್ಲಿ ಅನೇಕ ಪಂದ್ಯಗಳನ್ನೂ ಕೈ ಚೆಲ್ಲಿದರು. ಇದು ಕೂಡಾ ಬೌಲರ್ ಗಳ ಮೇಲೆ ಒತ್ತಡ ಬೀಳುವಂತೆ ಮಾಡುತ್ತಿತ್ತು.

Advertisement

4. ವಿಫಲರಾದ ಶಿಮ್ರನ್ ಹೆಟ್ ಮೈರ್


ಈ ವರ್ಷದ ಐಪಿಎಲ್ ಹರಾಜಿನಲ್ಲಿ ಬಹುಕೋಟಿ ಮೊತ್ತಕ್ಕೆ ಬಿಕರಿಯಾಗಿ ಸುದ್ದಿ ಮಾಡಿದ್ದ ಹಿಟ್ಟರ್ ಶಿಮ್ರನ್ ಹೆಟ್ ಮೈರ್ ಪಡೆದ ಮೊತ್ತಕ್ಕೆ ನ್ಯಾಯ ಸಲ್ಲಿಸುವಲ್ಲಿ ವಿಫಲರಾದರು. ಹೆಟ್ ಮೈರ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದ ಆರ್ ಸಿಬಿಗೆ ವಿಂಡೀಸ್ ಆಟಗಾರ ತಲೆ ನೋವಾದರು. ಕೊನೆಯ ಪಂದ್ಯದಲ್ಲಿ ಆಡಿದ್ದು ಬಿಟ್ಟರೆ ಹೆಟ್ ಮೈರ್ ರದ್ದು ಕೂಟದಲ್ಲಿ ಫ್ಲಾಪ್ ಶೋ. ಒಟ್ಟು ಐದು ಪಂದ್ಯವಾಡಿದ ಹೆಟ್ ಮೈರ್ ಗಳಿಸಿದ್ದು ಕೇವಲ 90 ರನ್.

5. ಆಟಗಾರರ ಆಯ್ಕೆ ಗೊಂದಲ
ಉತ್ತಮ ಆಟಗಾರರಿದ್ದರೂ ಸಮತೋಲಿತ ಆಡುವ ಬಳಗವನ್ನು ಆಯ್ಕೆ ಮಾಡುವಲ್ಲಿ ನಾಯಕ ಕೊಹ್ಲಿ ಎಡವಿದ್ದಾರೆ ಎನ್ನಬಹುದು. ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡುತ್ತಾ ಬಂದಿರುವ ಅಕ್ಷದೀಪ್ ನಾತ್ ಗೆ ಈ ಸಲ ಕೊಟ್ಟಿದ್ದು ಬರೋಬ್ಬರಿ ಎಂಟು ಅವಕಾಶ. ಆದರೆ ಆತ ಗಳಿಸಿದ್ದು ಕೇವಲ 61 ರನ್. ಅದರಲ್ಲೂ ಆರನೇ ಕ್ರಮಾಂಕ ಅಂದರೆ ಹೆಚ್ಚಾಗಿ ಕೊನೆಯ ಓವರ್ ಗಳಲ್ಲಿ ಬ್ಯಾಟಿಂಗ್ ಗೆ ಇಳಿಯುವ ಅಕ್ಷದೀಪ್ ನಾತ್ ತಂಡಕ್ಕೆ ಅಗತ್ಯವಾದ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಲು ಸಂಪೂರ್ಣ ವಿಫಲಾರದರು. ಮತ್ತೋರ್ವ ಆಲ್ ರೌಂಡರ್ ಪವನ್ ನೇಗಿ ಕೂಡಾ ಏಳು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರೂ ಗಳಿಸಿದ್ದು ಕೇವಲ ಐದು ರನ್, ಕಬಳಿಸಿದ್ದು ಮೂರು ವಿಕೆಟ್. ಇವರ ಬದಲು ಗುರುಕೀರತ್ ಸಿಂಗ್ ಮಾನ್ ಗೆ ಹೆಚ್ಚಿನ ಅವಕಾಶ ನೀಡಿದ್ದರೆ ಉತ್ತಮವಾಗಿತ್ತು ಎನ್ನುವುದು ಹಲವರ ವಾದ.

ಇವೆಲ್ಲಾ ಕಾರಣಗಳ ಜೊತೆ ಇನ್ನೂ ಹಲವು ಕಾರಣಗಳನ್ನು ಅಭಿಮಾನಿಗಳು ನೀಡುತ್ತಾರೆ. ವಿರಾಟ್ ಕೊಹ್ಲಿಯ ನಾಯಕತ್ವದ ಬಗ್ಗೆಯೂ ಪ್ರಶ್ನೆ ಮಾಡುವವರಿದ್ದಾರೆ. ಕೊಹ್ಲಿಯ ಕೆಲವು ನಿರ್ಧಾರಗಳು ಕೆಲವು ಸಲ ಉತ್ತಮ ಪರಿಣಾಮ ಬೀರದೇ ಇರುವುದು ಕೂಡಾ ಇದಕ್ಕೆ ಕಾರಣ ಎನ್ನಬಹುದು. ಬೆಂಗಳೂರು ತಂಡದಲ್ಲಿ ಸ್ಥಾನ ಪಡೆಯದ ಕರ್ನಾಟಕದ ಆಟಗಾರರು ಬೇರೆ ತಂಡದಲ್ಲಿ ಮಿಂಚುತ್ತಿರುವುದು ಅದರಲ್ಲೂ ವಿಶೇಷವಾಗಿ ಆರ್ ಸಿಬಿ ವಿರುದ್ದವೇ ಉತ್ತಮವಾಗಿ ಆಡುತ್ತಿರುವುದು ತಂಡಕ್ಕೆ ಮುಳುವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next