ರಾಂಚಿ: ಮಹೇಂದ್ರ ಸಿಂಗ್ ಧೋನಿ ಶಾಂತ ನಾಯಕ ಎಂದೇ ಖ್ಯಾತಿ ಪಡೆದಿದ್ದಾರೆ. ಆದರೆ ಧೋನಿಗೂ ಆಗಾಗ್ಗೆ ಸಿಟ್ಟು ಬರುತ್ತದೆ ಎನ್ನುವುದನ್ನು ಅವರ ಸ್ನೇಹಿತರೊಬ್ಬರು ತಿಳಿಸಿದ್ದಾರೆ.
ಹೌದು, ಆಪ್ತ ಗೆಳೆಯರೊಬ್ಬರು ಧೋನಿಗೆ ಸುಮ್ಮನೆ ಒಂದು ಪ್ರಶ್ನೆ ಕೇಳಿದ್ದಾರೆ. ಅಷ್ಟಕ್ಕೇ ಧೋನಿ ಸಿಡಿಮಿಡಿಗೊಂಡಿದ್ದಾರೆ.
ಹಾಗಿದ್ದರೆ ಧೋನಿಗೆ ಸಿಟ್ಟು ಬರಲು ಕಾರಣವೇನು?, ಯಾವ ವಿಷಯ ಅವರನ್ನು ಅಷ್ಟೊಂದು ಕೆರಳಿಸಿತು?. ಈ ಬಗ್ಗೆ ಧೋನಿಯ ಗೆಳೆಯರೊಬ್ಬರು ಹೇಳಿದ್ದು ಹೀಗೆ.
“ಕೆಲವು ದಿನಗಳ ಹಿಂದೆ ಧೋನಿ ನಿವೃತ್ತಿ ಬಗ್ಗೆ ಅವರೆದುರೇ ನಾವು ಮಾತನಾಡಿದ್ದವು. ಅದಕ್ಕೆ ಧೋನಿ ನಮ್ಮ ಮೇಲೆ ಸಿಟ್ಟು ಮಾಡಿಕೊಂಡಿದ್ದರು. ಈಗಲೂ ಧೋನಿಗೆ ತಾನು ಎಲ್ಲರಂತೆ ಫಿಟ್ ಆಗಿದ್ದೇನೆ. ವಿಕೆಟ್ ಕೀಪರ್‌ಗಳ ಪೈಕಿ ಅತ್ಯುತ್ತಮ ಎಂಬ ನಂಬಿಕೆ ಇದೆ. ಐಪಿಎಲ್ ಆರಂಭವಾಗುವ ವಿಶ್ವಾಸದಿಂದ ಧೋನಿ ಸಿಕ್ಕಾಪಟ್ಟೆ ಅಭ್ಯಾಸ ನಡೆಸಿದ್ದರು. ಅಷ್ಟೊಂದು ತಯಾರಿ ನಡೆಸಿದ್ದನ್ನು ಹಿಂದೆಂದೂ ನಾನು ನೋಡಿರಲಿಲ್ಲ.
ಅವರಿಗೆ ತಾನು ಯುವಕನಲ್ಲ ಎನ್ನುವುದು ಗೊತ್ತಿದೆ. ಹೀಗಿದ್ದರೂ ತರಬೇತಿಯಿಂದ ಫಿಟ್ ಆಗಿರಬಹುದು ಎನ್ನುವುದು ಧೋನಿ ದೃಢವಾದ ವಿಶ್ವಾಸವಾಗಿದೆ. ಯಾರ ಬೆಂಬಲ ಇಲ್ಲದ ಹೊರತಾಗಿಯೂ ತಾನು ಏನೆಂಬುದನ್ನು ಧೋನಿ ತೋರಿಸಿದ್ದಾರೆ. ಈಗ ಧೋನಿಯ ಅಭಿಮಾನಿಗಳು ಅವರ ಬೆಂಬಲಕ್ಕೆ ಇದ್ದಾರೆ’ ಎಂದು ತಿಳಿಸಿದರು.
ಸದ್ಯ ಧೋನಿಯ ನಿವೃತ್ತಿ ಬಗೆಗೆ ವ್ಯಾಪಕ ಚರ್ಚೆಯಾಗುತ್ತಿದೆ. ಐಪಿಎಲ್ ಬಳಿಕ ಧೋನಿ ಭವಿಷ್ಯ ನಿರ್ಧಾರ ಎಂದು ಹೇಳಲಾಗಿತ್ತು. ಐಪಿಎಲ್ ನಲ್ಲಿ ಚೆನ್ನೈ ಪರ ಧೋನಿ ಉತ್ತಮ ಪ್ರದರ್ಶನ ನೀಡಿದರೆ ಧೋನಿ ಮುಂದಿನ ಟಿ20 ವಿಶ್ವಕಪ್ ಗೆ ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೋವಿಡ್-19 ಸೋಂಕಿನ ಕಾರಣ ಐಪಿಎಲ್ ಈ ವರ್ಷ ನಡೆಯುವ ಸಾಧ್ಯತೆ ತೀರಾ ಕಡಿಮೆ.