Advertisement
ಕರ್ನಾಟಕ ಬೀಜ ನಿಗಮದಿಂದಲೇ ಹರಿಹರ ತಾಲೂಕಿನ ಬನ್ನಿಕೋಡು ಇತರೆ ಭಾಗದಲ್ಲಿ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ಮಾಡಲಾಗಿದೆ ಎಂದು ರೈತರು ತಮ್ಮ ಗಮನಕ್ಕೆ ತಂದಿದ್ದಾರೆ. ಅಂತಹ ಬೀಜ ಮಾರಾಟ ಮಾಡಿದವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷೆ ಶೈಲಜಾ ಬಸವರಾಜ್ ಕೃಷಿ ಇಲಾಖೆ ಉಪ ನಿರ್ದೇಶಕ ಶರಣಪ್ಪ ಬಿ. ಮುದಗಲ್ ಅವರನ್ನ ಪ್ರಶ್ನಿಸಿದರು.
Related Articles
Advertisement
ಕೃಷಿ ಇಲಾಖೆ, ಬಿತ್ತನೆ ಬೀಜ ಮಾರಾಟಗಾರರೊಂದಿಗೆ ರೈತರು, ಮುಖಂಡರ ಸಭೆ ನಡೆಸಿ, ಇಲಾಖೆ ಕಳಪೆ ಬಿತ್ತನೆ ಬೀಜ ಮಾರಾಟದ ತಡೆಗೆ ಕೈಗೊಂಡಿರುವ ಕ್ರಮ, ರೈತರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಎಚ್. ಬಸವರಾಜೇಂದ್ರ ಸೂಚಿಸಿದರು.
ಜಗಳೂರು ತಾಲೂಕಿನ ಸೊಕ್ಕೆ ಹೋಬಳಿ ಗ್ರಾಮದ ರೈತರನ್ನ ಬಿತ್ತನೆ ಬೀಜಕ್ಕಾಗಿ ಒಂದು ವಾರದಿಂದ ಹೊಸಕರೆಯಿಂದ ಜಗಳೂರಿಗೆ, ಜಗಳೂರಿನಿಂದ ಹೊಸಕೆರೆಗೆ ಅಲೆದಾಡಿಸಲಾಗುತ್ತಿದೆ. ಎಲ್ಲಾ ದಾಖಲೆ ಇದ್ದರೂ ಬಿತ್ತನೆ ಬೀಜವೇ ಖಾಲಿ ಆಗಿದೆ ಎನ್ನಲಾಗುತ್ತಿದೆಯಂತೆ. ಸಂಬಂಧಿತ ರೈತ ಸಂಪರ್ಕ ಕೇಂದ್ರದ ಅಧಿಕಾರಿಗೆ ಸೂಚನೆ ನೀಡಿ, ರೈತರಿಗೆ ಬಿತ್ತನೆ ಬೀಜ ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆ. ಸವಿತಾ ಕೃಷಿ ಇಲಾಖೆ ಉಪ ನಿರ್ದೇಶಕ ಶರಣಪ್ಪ ಬಿ. ಮುದಗಲ್ಗೆ ಸೂಚಿಸಿದರು.
ಬಾಡ ಗ್ರಾಮದ ರಾಜು ಎಂಬ ರೈತ ಆತ್ಮಹತ್ಯೆಗೆ ಒಳಗಾಗಿ ಎರಡು ವರ್ಷ ಕಳೆದರೂ ಉಪ ವಿಭಾಗಾಧಿಕಾರಿ ಅಧ್ಯ್ಕಕ್ಷತೆಯ ಸಮಿತಿ ಮುಂದೆ ಆತನಿಗೆ ಸಂಬಂಧಿತ ಕಡತ ಮಂಡನೆ ಆಗಿಲ್ಲ. ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ಕೃಷಿ ಇಲಾಖೆಗೆ ಫೈಲ್ ಕಳಿಸಲಾಗಿದೆ ಎಂದು ಹೇಳುತ್ತಾರೆ. ಆ ಫೈಲ್ ಎಲ್ಲಿದೆ, ಯಾವ ಕಾರಣಕ್ಕೆ ಇನ್ನೂ ಎಸಿ ಸಮಿತಿ ಮುಂದೆ ಬಂದಿಲ್ಲ ಎಂದು ಅಧ್ಯಕ್ಷೆ ಶೈಲಜಾ ಬಸವರಾಜ್ ಪ್ರಶ್ನಿಸಿದರು. ಆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಶರಣಪ್ಪ ಬಿ. ಮುದಗಲ್ ತಿಳಿಸಿದರು.ಮಳೆ ಕೊರತೆ, ತೋಟಗಾರಿಕಾ ಇಲಾಖಾ ಕಾರ್ಯಕ್ರಮ, ಫಲಾನುಭವಿಗಳ ಆಯ್ಕೆ, ಶಿಕ್ಷಣ, ಆರೋಗ್ಯ ಇಲಾಖೆ ಬಗ್ಗೆ ಚರ್ಚೆ ನಡೆಯಿತು.
ಕೊಳವೆ ಬಾವಿ ಜಟಾಪಟಿ: ಅತೀ ಅಗತ್ಯ ಇರುವ ಕಡೆ ಕೊಳವೆಬಾವಿ ಕೊರೆಸುವಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಸ್ಪಂದಿಸುತ್ತಿಲ್ಲ. ಜಿಲ್ಲಾ ಪಂಚಾಯತ್ ವತಿಯಿಂದ ಒಬ್ಬ ಸದಸ್ಯರ ಕ್ಷೇತ್ರದಲ್ಲಿ ಕೊಳವೆ ಬಾವಿ ಕೊರೆಸಲಿಕ್ಕೆ ಆಗಲೇ ಇಲ್ಲ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಯಿತು.
ಟಾಸ್ಕ್ಫೋರ್ಸ್ ಮೂಲಕ 7 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಪೈಪ್‌ಲೈನ್, ನಿರ್ವಹಣೆಗೆ ಬಳಕೆ ಮಾಡಲಾಗುತ್ತಿದೆ. ಕೊಳವೆ ಬಾವಿ ಕೊರೆಸುವುದು ಕೊನೆಯ ಆದ್ಯತೆ. ಅನುದಾನ ಇದೆ ಎಂದು ಹೇಗೆ ಬೇಕೋ, ಎಲ್ಲಿ ಬೇಕೋ ಅಲ್ಲಿ ಅವೈಜ್ಞಾನಿಕವಾಗಿ ಕೊಳವೆಬಾವಿ ಕೊರೆಸುವುದಲ್ಲ. ಸರ್ಕಾರ ಸಹ ಕೊಳವೆಬಾವಿ ಕೊರೆಸುವುದಕ್ಕೆ ಒಪ್ಪುವುದಿಲ್ಲ ಎಂದು ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಎಚ್. ಬಸವರಾಜೇಂದ್ರ ಹೇಳಿದರು.
ನಮಗೂ ಪರಿಸರದ ಬಗ್ಗೆ ಬಹಳ ಕಾಳಜಿ ಇದೆ. ತೀರ ಅಗತ್ಯ ಮತ್ತು ತುರ್ತು ಇರುವ ಕಡೆ ಕೊಳವೆ ಬಾವಿ ಕೊರೆಸುವುದು ತಪ್ಪಲ್ಲ. ಕೊಳವೆಬಾವಿ ಇಲ್ಲದೆ ಸಮುದ್ರಕ್ಕೆ ಪೈಪ್‌ಲೈನ್ ಹಾಕಲಿಕ್ಕೆ ಹಣ ಬಳಕೆ ಮಾಡಿಕೊಳ್ಳಲಾದೀತೇ? ಜಿಲ್ಲಾ ಪಂಚಾಯತ್‌ನಿಂದ ಎಷ್ಟು ಬೋರ್‌ಗಳನ್ನ ವೈಜ್ಞಾನಿಕವಾಗಿ ಮತ್ತು ಎಷ್ಟು ಅವೈಜ್ಞಾನಿಕವಾಗಿ ಕೊರೆಸಲಾಗಿದೆ ಎಂದು ಮಾಹಿತಿ ಕೊಡಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಚ್.ಎನ್. ರಾಜುಗೆ ಪ್ರಶ್ನಿಸಿದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆ. ಸವಿತಾ, ಜಗಳೂರು ತಾಲೂಕಿನಲ್ಲಿ ಅರ್ಧ, ಒಂದು ಇಂಚು ನೀರು ಸಿಕ್ಕರೂ ಸಾಕು ಎನ್ನುವ ಪರಿಸ್ಥಿತಿ ಇರುವಾಗ ಬೋರ್ ಕೊರೆಸುವುದು ವೈಜ್ಞಾನಿಕ, ಅವೈಜ್ಞಾನಿಕ ಎನ್ನುವುದು ಸರಿ ಅಲ್ಲ. ನಮಗೆ ಒಂದು ಲೋಟ ನೀರು ಸಹ ಮುಖ್ಯ ಎಂಬುದನ್ನ ಅರ್ಥ ಮಾಡಿಕೊಂಡು ಅಧಿಕಾರಿಗಳು ಸ್ಪಂದಿಸಬೇಕು ಎಂದು ತಾಕೀತು ಮಾಡಿದರು. ಕೊಳವೆ ಬಾವಿ ಕೊರೆಸುವ ವಿಚಾರ ಸಾಕಷ್ಟು ಸಮಯ ಚರ್ಚೆ ನಡೆಯಿತು.