ಬೆಳ್ತಂಗಡಿ: ಬದುಕು ಸೃಷ್ಟಿ, ಸ್ಥಿತಿ ಲಯದಿಂದ ಸಮ್ಮಿಳಿತವಾಗಿರು ವುದರಿಂದ ಎಲ್ಲರ ಪ್ರಯತ್ನದ ಮೂಲವೊಂದೆ ಭಗವಂತನ ಶೋಧ. ಮನಃ ವಚನ, ಕಾಯ ಹತೋಟಿಗೆ ತರುವುದರಿಂದ ಭಗವಂತನ ಸಾಕ್ಷಾತ್ಕಾರಕ್ಕೆ ಒಳಗಾಗುವಿರಿ ಎಂದು ಧರ್ಮಸ್ಥಳ ಧರ್ಮಾ ಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ಸಂಜೆ ಪ್ರವಚನ ಮಂಟಪದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಂಚಾಕ್ಷರಿ ಪಠಣಕ್ಕೆ ನಂದಾದೀಪ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು.
ಆಚಾರ್ಯವೇ ಪರಮ ಧರ್ಮ ವಾಗಿದ್ದು, ಬದುಕಿನಲ್ಲಿ ಅನ್ನ, ವಸ್ತ್ರ ಧಾನಗಳು ಎಲ್ಲೆಡೆಯೂ ಸಿಗಬಹುದು. ಆದರೆ ನಿಮ್ಮ ಪಾಪಗಳನ್ನು ತೊಳೆದು ಭಯ ನಿವಾರಿಸಿ ಅಭಯವನ್ನು ನೀಡುವು ದರಿಂದ ಧರ್ಮಸ್ಥಳ ಅಭಯ ಕ್ಷೇತ್ರವಾಗಿ ಬೆಳೆದಿದೆ ಎಂದರು.
ಅಂತರಂಗ ಸಂದರ್ಶಿಸುವ ಸಲುವಾಗಿ ದೇಹ ದಂಡನೆಗೆ ಒಳಗಾಗುತ್ತೇವೆ. ಅದಕ್ಕಾಗಿ ಇಂದು ಸಾವಿರಾರು ಮಂದಿ ಪಾದಯಾತ್ರೆ ಮೂಲಕ ದೇಹ ದಂಡನೆ ಮಾಡಿ ತಮ್ಮ ತನವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೀರಿ. ಈ ಮೂಲಕ ನಮ್ಮನ್ನು ನಾವು ಕಂಡುಕೊಳ್ಳುವ ಸಲುವಾಗಿ ಸತ್ಯದ ಹಾದಿಯಲ್ಲಿ ಭಗವಂತನನ್ನು ಸಂದರ್ಶಿಸುವುದೇ ಜೀವನ ಶ್ರೇಷ್ಠತೆ ಎಂದರು.
ಹೇಮಾವತಿ ವೀ.ಹೆಗ್ಗಡೆ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಸುರೇಂದ್ರ ಕುಮಾರ್, ಡಿ. ಹಷೇìಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶೃತಾ ವಿಜೇತ್, ಆರ್ಯನ್ ಉಪಸ್ಥಿತರಿದ್ದರು. ಪಾದಯಾತ್ರಿ ಸಂಘದ ಮುಖಂಡ ರಾದ ಹನುಮಂತಪ್ಪ ಸ್ವಾಮೀಜಿ, ಮರಿಯಪ್ಪ, ಶಶಿಕುಮಾರ್, ಹೆಗ್ಗಡೆ ಆಪ್ತ ಕಾರ್ಯದರ್ಶಿ ಎ.ವೀರು ಶೆಟ್ಟಿ, ದೇವಳ ಪಾರುಪತ್ತೆಗಾರ ಲಕ್ಷ್ಮೀ ನಾರಾಯಣ ರಾವ್ ಉಪಸ್ಥಿತರಿದ್ದರು. ಶಾಂತಿವನ ಯೋಗ ಶಿಕ್ಷಣ ನಿರ್ದೇಶಕ ಡಾ| ಐ.ಶಶಿಕಾಂತ್ ಜೈನ್ ಮೂರು ಬಾರಿ ಓಂಕಾರ ಪಠಿಸಿದರು. ಶ್ರೀನಿವಾಸ್ ರಾವ್ ನಿರ್ವಹಿಸಿದರು.
ದೇಗುಲ ಪುಷ್ಪಾಲಂಕಾರ
ಮಹಾಶಿವರಾತ್ರಿ ಪ್ರಯುಕ್ತ ಬೆಂಗಳೂರಿನ ಭಕ್ತರ ತಂಡವೊಂದು ಈ ಬಾರಿಯೂ ಶಿವಲಿಂಗ ರೂಪ ದಲ್ಲಿ ದೇವಸ್ಥಾನ ಮುಂಭಾಗಕ್ಕೆ ಪುಷ್ಪಾಲಂಕಾರ ಮಾಡಿತ್ತು. ಆಚರಣೆಯೇ ಶ್ರೇಷ್ಠ ಧರ್ಮವಾಗಿರು ವುದರಿಂದ ಧರ್ಮ ಕಾರ್ಯ ದಲ್ಲಿ ಒಳಗಾಗಬೇಕು. ಹಾಗಾ ದಲ್ಲಿ ಸತ್ಕರ್ಮ, ಸತ್ಚಿತನೆ ನಮ್ಮಿಂದಾಗುತ್ತದೆ. ಅಜ್ಞಾನದಿಂದ ತಪ್ಪುಗಳಾಗಬಹುದು. ಆದರೆ ಅದನ್ನು ಒಪ್ಪಿಕೊಂಡು ನೀವು ದೇವರಿಗೆ ಶರಣಾಗುವ ಮೂಲಕ ಜೀವನ ಸಾರ್ಥಕ ಪಡೆಯಬೇಕು.
-ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ