Advertisement
ಬಿಗ್‌ಬಾಸ್‌ನಂಥ ಜನಪ್ರಿಯ ರಿಯಾಲಿಟಿ ಶೋಗಳ ಬಗ್ಗೆ ಚರ್ಚಿಸುವ ಮುನ್ನ ಕಲೆ ಎಂದರೇನು? ಅದಕ್ಕೂ ಜೀವನಕ್ಕೂ ಏನು ಸಂಬಂಧ? ಕಲೆಗೂ ಸಮಾಜಕ್ಕೂ ಏನು ಸಂಬಂಧ? ಇತ್ಯಾದಿ ಪ್ರಶ್ನೆಗಳು ಮಹಾನ್ ಗ್ರೀಕ್ ಮೇಧಾವಿ ಪ್ಲೇಟೋನಿಂದ ಆರಂಭಗೊಂಡು ಇಂದಿಗೂ ಮುಂದುವರೆದಿವೆ. ಪ್ಲೇಟೋನ ಒತ್ತು ಒಳ್ಳೆಯ ಸಮಾಜವೊಂದನ್ನು ಕಟ್ಟುವುದಾಗಿತ್ತು. ಅವನಿಗೆ ಕಲೆಯ ಚರ್ಚೆ ಬೇಕಿರಲಿಲ್ಲ. ಹಾಗಾಗಿ ಅವನಿಗೆ ಕಲೆ ಜೀವನವನ್ನು ಚಿತ್ರ ವಿಚಿತ್ರವಾಗಿ, ಇಲ್ಲ ಸಲ್ಲದ ಬಣ್ಣಗಳಲ್ಲಿ, ಉತ್ಪ್ರೇಕ್ಷೆಗಳಲ್ಲಿ ಪ್ರದರ್ಶಿಸು ವುದು ಇಷ್ಟವಿರಲಿಲ್ಲ. ಅದಕ್ಕಾಗಿ ಆತ ಕಲೆಯನ್ನು ವಾಸ್ತವದಿಂದ ದೂರವಾದುದು ಮತ್ತು ಸುಳ್ಳು ಹೇಳುವಂತಹುದು ಎಂದು ಹೇಳಿದ. ಅಲ್ಲದೇ ಕಲೆ ಮನಸ್ಸುಗಳ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದು ಅಭಿಪ್ರಾಯಪಟ್ಟ. ಈ ಹಿನ್ನೆಲೆಯಲ್ಲಿ ಕಲಾವಿದರು ಒಂದು ಆದರ್ಶಮಯವಾದ ರಿಪಬ್ಲಿಕ್‌ನಲ್ಲಿ ಉಳಿಯಲು ಅನರ್ಹರು ಎಂದು ಆತ ವಾದಿಸಿದ. ಆದರೆ ಗುರುವಿಗೆ ತಿರುಮಂತ್ರ ಹಾಕಿದ ಶಿಷ್ಯ ಅರಿಸ್ಟಾಟಲ್, ಕಲೆ ವಾಸ್ತವದ ಪರಿಪೂರ್ಣತೆಯ ಸ್ವರೂಪ, ಕಲೆ ಮನುಷ್ಯನನ್ನು ಒಂದು ಭಾವನೆಯ ಸ್ಫೋಟ(ಕೆಥಾರ್ಸಿಸ್)ಕ್ಕೆ ಒಳಪಡಿಸುವುದರ ಮೂಲಕ ಆತನನ್ನು ಮಹೋನ್ನತಿಗೆ ಒಯ್ಯುತ್ತದೆ ಎಂದು ಹೇಳಿದ. ಅಂದಿನಿಂದ ಆರಂಭವಾದ ಕಲೆ ಮತ್ತು ಅದರ ವಿವಿಧ ಆಯಾಮಗಳ ಕುರಿತಾದ ಚರ್ಚೆ ಇಂದಿಗೂ ಮುಂದುವರೆದಿದೆ.
Related Articles
Advertisement
ಆದರೆ ವರ್ಜಿನಿಯಾ ವೂಲ್ಫ್ ಎನ್ನುವ ಇಪ್ಪತ್ತನೆಯ ಶತಮಾನದ ಇಂಗ್ಲಿಷ್ ಭಾಷೆಯ ಶ್ರೇಷ್ಠ ಕಾದಂಬರಿಕಾರ್ತಿ ಹೇಳುವ ಹಾಗೆ ಬಹುಶಃ ಇಪ್ಪತ್ತನೆಯ ಶತಮಾನದಲ್ಲಿ ಎಲ್ಲೋ ಒಂದು ಕಡೆ ಮಾನವ ಮನಸ್ಸು ಬದಲಾಗಿ ಹೋಯಿತು. ಇಂತಹ ಬದಲಾ ವಣೆಯ ಚಿತ್ರಣವನ್ನು ಸ್ಪಷ್ಟವಾಗಿ ಕಂಡುಕೊಳ್ಳಬಹುದಾಗಿದ್ದು, ಹತ್ತೂಂಬತ್ತನೆಯ ಶತಮಾನದ ಕೊನೆಯ ಭಾಗದ ಇಂಗ್ಲಿಷ್ ಸಾಹಿತ್ಯದಲ್ಲಿ ಹಾಗೂ ನಂತರ. ಕ್ರಮೇಣ ಕಲೆಯ ಕುರಿತಾದ ಮೇಲೆ ವಿವರಿಸಲಾದ ಮೊದಲಿನ ಪರಿಕಲ್ಪನೆಗಳು ಸಂಪೂರ್ಣವಾಗಿ ತಲೆ ಕೆಳಗಾಗಿ ಕಲೆ ಜೀವನದ ಗಲೀಜಿನ ಮತ್ತು ಕೊಳಕಿನ ಪ್ರದರ್ಶನವಾಗಿ ಪರಿವರ್ತನೆಯಾಗಿ ಹೋಯಿತು. ಬಹುಶಃ ಇದಕ್ಕೆ ಕಾರಣವೆಂದರೆ ಹತ್ತೂಂಬತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಮತ್ತು ನಂತರ ಯುರೋಪಿನಲ್ಲಿ ಹುಟ್ಟಿಕೊಂಡ ಅವಂಟ್‌ಗಾರ್ಡ್ ಚಳವಳಿಗಳು. ಉದಾಹರಣೆಗೆ ಇರುವವುಗಳು ಫ್ರೆಂಚ್ ಸಿಂಬಲಿಸ್ಟ್ ಚಳವಳಿ, ಆ್ಯಂಗ್ರಿ ಯಂಗ್ ಮ್ಯಾನ್ ಇತ್ಯಾದಿ ಚಳವಳಿಗಳು. ಫ್ರೆಂಚ್ ಸಿಂಬಲಿಸ್ಟ್ ಪಂಥಕ್ಕೆ ಸೇರಿದ ಕವಿ ಬೌದಲೇಯರ್‌ನ ಕವನಗಳು ಮಡಿವಂತರಿಗೆ ದಿಗ್ಭ್ರಮೆ ಮತ್ತು ಅಸಹ್ಯ ಹುಟ್ಟಿಸುವಂತಹ ಕವಿತೆಗಳು. ಪಾಪದ ಹೂಗಳು ಎನ್ನುವ ಹೆಸರಿನಲ್ಲಿ ಪಿ.ಲಂಕೇಶ್ ಅವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದರಲ್ಲಿ ಒಂದು ಕವಿತೆ ಒಬ್ಬ ವೇಶ್ಯೆಯ ಸಾಂಗತ್ಯದ ಕುರಿತು ಇದೆ. ಇನ್ನೊಂದು ಕವನದಲ್ಲಿ “ನನ್ನ ತಂಗಿ ಹಾಗೂ ನನ್ನ ಪ್ರೇಯಸಿ’ ಎನ್ನುವ ಬೆಚ್ಚಿ ಬೀಳಿಸುವ ಹೊಸ ನೈತಿಕತೆಯ ಸಾಲುಗಳು ಬರುತ್ತವೆ. ನಂತರ ಇಂಗ್ಲಿಷಿನಲ್ಲಿ ವಾರ್ ಪೋಯೆಟ್ ಆಗಿದ್ದ ವಿಲ್‌ಫ್ರೆಡ್ ಓವನ್ ಎನ್ನುವ ಕವಿ “ನನ್ನ ಕವಿತೆಗಳು ಇರುವುದು ಹರಿಯುವ ಭಾವನೆಗಳ ಕುರಿತಲ್ಲ. ಜೀವನದ ಕರುಣಾಜನಕ ಸ್ಥಿತಿಯ ಕುರಿತು’ ಎಂದು ಹೇಳುವ ಮೂಲಕ ಇಂಗ್ಲೆಂಡಿನಲ್ಲಿ ಹೊಸ ಕಲಾ ಪರಂಪರೆಯ ಉದಯಕ್ಕೆ ನಾಂದಿ ಹಾಡುತ್ತಾನೆ. ಇಪ್ಪತ್ತನೆಯ ಶತಮಾನದ ಯುರೋಪಿನ ಒಂಟಿತನದ, ಅಸಹಾಯಕತೆಯ, ಕೊಳಕಿನ ಧ್ವನಿಯಾದ ಟಿ.ಎಸ್. ಎಲಿಯಟ್ ಅಂದಿನ ಜಗತ್ತಿನ “ಮುರಿದು ಹೋದ ಪ್ರತಿಮೆ’ಗಳ ಕುರಿತು ಬರೆಯುತ್ತಲೇ ಹೋಗುತ್ತಾನೆ.
ಆತನ ಪ್ರಸಿದ್ಧ ಕವನ “ವೇಸ್ಟ್ ಲ್ಯಾಂಡ್’ನಲ್ಲಿ ಬರುವ ಪ್ರೇಯಸಿಯೊಬ್ಬಳು ಬಂದ ಪ್ರಿಯಕರನ ಸಾಂಗತ್ಯ ಮುಗಿದ ಕೂಡಲೇ ಪುನಃ ಕೂದಲು ಬಾಚಿಕೊಂಡು ಬೇರೊಬ್ಬನಿಗಾಗಿ ಕಾಯುವುದರ ವರ್ಣನೆ ಬರುತ್ತದೆ. ಹಾಗೆಯೇ ಅಲ್ಲಿ ಬರುವ ಲಿಲ್ ಎನ್ನುವ ಮಹಿಳೆಯೊಬ್ಬಳು ಇನ್ನೊಬ್ಬ ಮಹಿಳೆಯನ್ನು ಅವಳಿಗೆ ಬೇಡವಾಗಿರುವ ಸಂಪರ್ಕವೊಂದಕ್ಕೆ ಪ್ರೋತ್ಸಾಹಿಸುತ್ತಾಳೆ. ಹೆಚ್ಚು ಕಡಿಮೆಯಾಗಿ ನೀನೇನಾದರೂ ಗರ್ಭವತಿಯಾದರೆ ಅದೇನೂ ದೊಡ್ಡ ವಿಷಯವಲ್ಲ. ಅದಕ್ಕೆಲ್ಲ ಗುಳಿಗೆಗಳಿವೆ ಎಂದು ಆ ಮಹಿಳೆಗೆ ಹೇಳುತ್ತಾಳೆ. ನೀನು ಹೋಗದಿದ್ದರೆ ಆತನ ಬಳಿ ಇನ್ನೊಬ್ಬಳು ಹೋಗುತ್ತಾಳೆ ನೋಡು! ಎನ್ನುವ ನಿರ್ಲಜ್ಜವಾದ ಅವಳ ಮಾತುಗಳು ಕಾವ್ಯದ ಭಾಗವಾಗಿ ಬರುತ್ತವೆ. ಅರ್ಥವೆಂದರೆ ಕಲಾ ಪರಂಪರೆ ಈಗ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಹೀಗೆ ಇಪ್ಪತ್ತನೆಯ ಶತಮಾನ ಕಲೆಯನ್ನು ಅದರ ಸೌಂದರ್ಯದ, ಮಹೋನ್ನತ ಗೋಪುರಗಳಿಂದ ಕೆಳಗಿಳಿಸಿ ತಂದು ಹಿಂದಿನ ರಾತ್ರಿ ಚೆಲ್ಲಿದ ಬಿಯರಿನ ಕಮಟು ವಾಸನೆಯ, ಸುಟ್ಟ ಸಿಗರೇಟುಗಳ ಬುಡಗಳು ಮತ್ತಿತರ ರಾತ್ರಿಯ ಗುರುತುಗಳು, ಚೆಲ್ಲಿದ ಕಸ ತುಂಬಿದ ವಾಕರಿಕೆ ಬರುವ ಓಣಿಯೊಂದಕ್ಕೆ ಇಳಿಸಿಬಿಟ್ಟಿದೆ.
ಈಗ ರಿಯಾಲಿಟಿ ಶೋ ಕುರಿತು ಕೆಲವು ಅನಿಸಿಕೆಗಳು. ಬಿಗ್ ಬಾಸ್‌ನಂಥ ಲಕ್ಷಾಂತರ ಜನರ ಮನಸ್ಸಿಗೆ ಮುದ ನೀಡಬಲ್ಲ ಕಾರ್ಯಕ್ರಮವು “ನಾಟಕ’ದಂತಹ ಕಲಾ ಪ್ರಕಾರವಾಗಿ(?) ಪರಿವರ್ತನೆಗೊಂಡಿರುವ ಕಾರಣ ಬಹುಶಃ ಇಲ್ಲಿ ಇದೆ: ಏನೆಂದರೆ ಇಪ್ಪತ್ತನೆಯ ಶತಮಾನದಲ್ಲಿ ಆರಂಭವಾದ ಕಲೆಯ ಕುರಿತಾದ ಬೇರೊಂದು ಪರಿಕಲ್ಪನೆ ಬಹುಶಃ ಬಿಗ್‌ಬಾಸ್‌ನ್ನು ನಿರೂಪಿಸಿದಂತೆ ತೋರುತ್ತದೆ. ಕುತೂಹಲವೆಂದರೆ ಇದರಲ್ಲಿ(ಬಣ್ಣ ಹಚ್ಚಿದ) ವಾಸ್ತವಿಕ ಜೀವನವೇ ಒಂದು ಪ್ರೇಕ್ಷಣಿಯ ವಿಷಯವಾಗಿ, ಕಲೆಯಾಗಿ (?) ನಿರೂಪಣೆಗೊಂಡಿದೆ.
ಬಹಳ ಮಹತ್ವದ ವಿಷಯವೆಂದರೆ ಲಕ್ಷಾಂತರ ಜನ ಇಂಥ ರಿಯಾಲಿಟಿ ಶೋಗಳನ್ನು ಮುಗಿಬಿದ್ದು ನೋಡುತ್ತಾರೆ ಎಂದರೆ ಅದಕ್ಕೆ ಏನೋ ಒಂದು ರೀತಿಯ ಕಲಾತ್ಮಕ ಆಕರ್ಷಣೆ ಇದೆ ಎಂದೇ ಭಾವಿಸಬೇಕಾಗುತ್ತದೆ. ಬಹುಶಃ ಪ್ರೇಕ್ಷಕರು ಗಂಭೀರ ಸಂಗೀತವನ್ನು, ನೃತ್ಯವನ್ನು, ನಾಟಕಗಳನ್ನು, ಸಿನೆಮಾಗಳನ್ನು ಸೀರಿಯಲ್‌ಗಳನ್ನು ಬಿಟ್ಟು ಇವನ್ನು ವೀಕ್ಷಿಸುತ್ತಾರೆ ಎಂದರೆ ಬಹುಶಃ ಕಲೆಯ ವ್ಯಾಖ್ಯೆ ಮತ್ತೆ ಬದಲಾಗುತ್ತಿದೆ ಎಂದೇ ಅನಿಸುತ್ತಿದೆ. ಮುಂದಿನ ದಿನಗಳಲ್ಲಿ ಜನಪ್ರಿಯ ಕಲಾ ಪ್ರಕಾರಗಳು, ಸಾಹಿತ್ಯ-ಸಂಗೀತಗಳು ಯಾವ ರೀತಿಯಲ್ಲಿ ಮರುಹುಟ್ಟು ಪಡೆಯಲಿವೆ ಎನ್ನುವುದು ತುಂಬ ಕುತೂಹಲದ ವಿಷಯ.
– ಡಾ. ಆರ್.ಜಿ. ಹೆಗಡೆ, ವಿಜಯಪುರ