Advertisement

ರಿಯಾಲಿಟಿಯೇಕೆ ಕಾಣಿಸುತ್ತಿಲ್ಲ?

12:30 AM May 24, 2018 | |

ಕೇವಲ ಐದಾರು ವರ್ಷದ ಹೆಣ್ಣು ಮಗು ವೇದಿಕೆಯಲ್ಲಿ ಅಡ್ಡಾದಿಡ್ಡಿ ಕುಣಿಯುತ್ತಿರುತ್ತದೆ. ಜತೆಗೆ ಅದೇ ಪ್ರಾಯದ ಒಬ್ಬ ಹುಡುಗ ಕುಣಿಯುತ್ತಿರುತ್ತಾನೆ. ಹಿನ್ನೆಲೆಯಲ್ಲಿ ಅಬ್ಬರದ ಸಂಗೀತ ಕೇಳಿ ಬರುತ್ತದೆ. ಎಂತಹ ಹಾಡು ಗೊತ್ತೇ? ಯಾರಿಗೂ ಮತ್ತೇರಿಸುವಂತಹ ಜೋಶ್‌ ಹಾಡು. ಪುಟ್ಟ ಹುಡುಗ ಪುಟ್ಟ ಹುಡುಗಿಯ ಸೊಂಟ ಹಿಡಿದು ಹಾಡಿಗೆ ತಕ್ಕ ಹೆಜ್ಜೆ ಹಾಕುತ್ತಾ ಕುಣಿಯತೊಡಗುತ್ತಾನೆ. ಇಬ್ಬರ ಮುಖದಲ್ಲಿ ಒಂದು ರೀತಿಯ ಮಾದಕ ಮಂದಹಾಸ. 

Advertisement

ಸಂವಿಧಾನದ ಪ್ರಕಾರ ಯಾರಾದರೂ ಇತರರ ಜೀವನದ ಪರಿಧಿಯನ್ನು ಅನಗತ್ಯವಾಗಿ ಪ್ರವೇಶಿಸಿದರೆ ಅದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಂತೆ. ಇದು ಒಂದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಶಾರೀರಿಕವಾಗಿ ಕೊಡುವ ತೊಂದರೆ ಹಲ್ಲೆ ಶಿಕ್ಷಾರ್ಹ ಅಪರಾಧ. ಆದರೆ ಮಾನಸಿಕವಾಗಿ ಮಾಡುವ ಹಲ್ಲೆ? ಎಳೆಯ ಮುಗ್ಧ ಮನಸ್ಸುಗಳ ಮಾರಣ ಹೋಮ. ಇದಕ್ಕೆ ಏನನ್ನೋಣ? ಗರ್ಭದೊಳಗೆ ಮಗು ಹೇಗೆ ಹಂತ ಹಂತವಾಗಿ ಪೂರ್ಣ ಬೆಳೆದು ಹೊರ ಜಗತ್ತನ್ನು ಪ್ರವೇಶಿಸುತ್ತದೋ, ಅದೇ ರೀತಿ ಬೆಳವಣಿಗೆಗೆ ಒಳಪಡುವ ಮನಸ್ಸೂ ಕೂಡಾ ಶೈಶಾವಸ್ಥೆಯಿಂದ ಪ್ರಬುದ್ಧತೆಯವರೆಗೆ ಹಂತ ಹಂತವಾಗಿ ಬೆಳೆಯಬೇಕಷ್ಟೆ. ಬದಲಾಗಿ ಶೈಶಾವಸ್ಥೆ ಯಲ್ಲಿಯೇ ಪ್ರಬುದ್ಧತೆಯನ್ನು ಹೇರತೊಡಗಿದರೆ ಅದು ಆ ಮನಸ್ಸಿನ ಮೇಲೆ ನಾವು ಮಾಡುವ ಹಲ್ಲೆ, ಆಂತರಿಕವಾಗಿ ಮುಗಿಸಿ ದರೆ ಅದೂ ಹತ್ಯೆ ಅಲ್ಲವೇ? ಮೊದಲನೆಯದು ಶಾರೀರಿಕ ಕೊಲೆ, ಎರಡನೆಯದು ಮಾನಸಿಕ ಕೊಲೆ. ಇದಕ್ಕೇನು ಶಿಕ್ಷೆ? 

ಏಕೆ ಈ ಮಾತುಗಳನ್ನು ಹೇಳಿದೆನೆಂದರೆ ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಈ ರೀತಿಯಾಗಿ ಮಕ್ಕಳನ್ನು ಮಾನಸಿಕವಾಗಿ ಹಿಂಸಿಸ ಲಾಗುತ್ತಿದೆ. ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ, ಅದರಲ್ಲೂ ನಿರ್ದಿಷ್ಟವಾಗಿ ಹಿಂದಿ ಭಾಷೆಯ ರಿಯಾಲಿಟಿ ಶೋಗಳನ್ನು ನೋಡಿ ದರೆ ನೀವು ಬೆಚ್ಚಿಬೀಳುವುದೂ ಖಂಡಿತ. ಅದನ್ನು ನೋಡಿ ಖುಷಿಪಡುವ ವರ್ಗವೂ ಇದೆ ಅನ್ನುವುದು ಒಂದು ವಾಸ್ತವ. ಆದರೆ ಸರಳ, ಮೌಲ್ಯಾಧಾರಿತ, ಸಭ್ಯ ಮನಸ್ಸು ಇಂತಹ ಅಸಂಬದ್ಧ ಪ್ರದರ್ಶನಗಳನ್ನು ಜೀರ್ಣಿಸಿಕೊಳ್ಳುವುದು ಕಠಿಣವೇ ಸರಿ. ಕೇವಲ ಐದಾರು ವರ್ಷದ ಹೆಣ್ಣು ಮಗು ವೇದಿಕೆಯಲ್ಲಿ ಅಡ್ಡಾದಿಡ್ಡಿ ಕುಣಿಯುತ್ತಿರುತ್ತದೆ. ಜತೆಗೆ ಅದೇ ಪ್ರಾಯದ ಒಬ್ಬ ಹುಡುಗ ಕುಣಿಯುತ್ತಿರುತ್ತಾನೆ. ಇಬ್ಬರ ನಡುವೆ ಮೈಕ್‌ ಹಿಡಿದು ನಿರೂಪಕಿ ಮಕ್ಕಳನ್ನು ಹುರಿದುಂಬಿಸುತ್ತಾ ಪುಂಖಾನುಪುಂಖವಾಗಿ ಮಾತಿನ ಮುತ್ತುಗಳನ್ನು ಉರುಳಿಸುತ್ತಿರುತ್ತಾಳೆ. ಹಿನ್ನೆಲೆಯಲ್ಲಿ ಅಬ್ಬರದ ಸಂಗೀತ ಕೇಳಿ ಬರುತ್ತದೆ. ಎಂತಹ ಹಾಡು ಗೊತ್ತೇ? ಯಾರಿಗೂ ಮತ್ತೇರಿಸುವಂತಹ ಜೋಶ್‌ ಹಾಡು.  ಪುಟ್ಟ ಹುಡುಗ ಪುಟ್ಟ ಹುಡುಗಿಯ ಸೊಂಟ ಹಿಡಿದು ಹಾಡಿಗೆ ತಕ್ಕ ಹೆಜ್ಜೆ ಹಾಕುತ್ತಾ ಕುಣಿಯತೊಡಗುತ್ತಾನೆ. ಇಬ್ಬರ ಮುಖದಲ್ಲಿ ಒಂದು ರೀತಿಯ ಮಾದಕ ಮಂದಹಾಸ. 

ಇನ್ನೊಂದು ದೃಶ್ಯ: ನಿರೂಪಕಿ ಪುಟ್ಟ ಹುಡುಗನೊಬ್ಬನನ್ನು ಮಾತನಾಡಿಸುತ್ತಿರುತ್ತಾಳೆ. ಮೈ ಕುಲುಕಿಸುತ್ತ, ಮಾತನಾಡುವ ನಿರೂಪಕಿ ಕುಚೇಷ್ಟೆಯ ನಗು ಸೂಸುತ್ತಿರುವ ಹುಡುಗನನ್ನು ಕೇಳುತ್ತಾಳೆ, ನಿನಗೆ ಹುಡುಗಿ ಅಂದರೆ ಇಷ್ಟಾನಾ? ಆಕೆಯನ್ನು ಲವ್‌ ಮಡುತ್ತೀಯಾ?  ಹುಡುಗ ಕಣ್ಣು ಮಿಟುಕಿಸಿ ಹೇಳುತ್ತಾನೆ, ಇಲ್ಲ, ನಾನು ನಿಮ್ಮನ್ನು ಲವ್‌ ಮಾಡುತ್ತೇನೆ. ಕೈ ಕಾಲು ಮುಖಗಳೆ ಉದುರಿ ಹೋಗುವಂತೆ ನಿರೂಪಕಿ ನಗುತ್ತಾಳೆ. ಸೂರು ಹಾರಿ ಹೋಗುವಂತೆ ಅಲ್ಲಿನ ಪ್ರೇಕ್ಷಕರು ನಗುತ್ತಾರೆ. 

ಇದೇನಾ ನಾವು ಕಲಿತ ಸಂಸ್ಕೃತಿ? ಇದೇನಾ ನಮ್ಮ ಹಿರಿಯರು ಹಾಕಿಕೊಟ್ಟ ದಾರಿ ? ಸಭ್ಯತೆ ಸತ್ತುಹೋಗುವ ಸನ್ನಿವೇಶಗಳಿವು. ಆಶ್ಚರ್ಯವೇನೆಂದರೆ, ಇಂತಹ ರಿಯಾಲಿಟಿ ಶೋಗಳಿಗೆ ಹೆತ್ತವರು ತಮ್ಮ ಮಕ್ಕಳನ್ನು ಹೆಮ್ಮೆಯಿಂದ ಕಳುಹಿಸುತ್ತಾರೆ. ಆರರ ಪುಟ್ಟ ಪೋರ ಇಪ್ಪತ್ತಾರರ ಯುವಕನಂತೆ ಮಾತಾಡುತ್ತಾನೆ, ವರ್ತಿಸುತ್ತಾನೆ. ಅದೇ ವಯಸ್ಸಿನ ಪೋರಿ ಆಗಷ್ಟೇ ಪ್ರಬುದ್ಧತೆಯನ್ನು ಪಡೆದಂತೆ ಪ್ರಣಯದಾಟವಾಡುತ್ತಾಳೆ.

Advertisement

ಮನೆಯೊಳಗಣ ಹಾಲಿನಲ್ಲಿ ಎಲ್ಲರೊಂದಿಗೆ ಕುಳಿತು ಇಂತಹ ಕಾರ್ಯಕ್ರಮಗಳನ್ನು ನೋಡುವ ದುರ್ದೆಶೆ ಈಗಿನ ಪ್ರೇಕ್ಷಕನದ್ದು. ವಿಷಯ ವಾಸನೆಯ ಪ್ರಣಯ ಗೀತೆಗಳಿಗೆ ಹೆಜ್ಜೆ ಹಾಕುತ್ತಾ ಮುಗ್ಧತೆಯನ್ನು , ಮಾನಸಿಕ ಸ್ನಿಗ್ಧತೆಯನ್ನು ಕತ್ತು ಹಿಸುಕಿ ಕೊಲ್ಲುವ ಇಂತಹ ಕಾರ್ಯಕ್ರಮಗಳು ಅಪರಾಧವೇ ಅಲ್ಲವೇ? ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ಪ್ರಸಾರ ಭಾರತಿ ಕಾಯಿದೆ ಇದೆ . ಆದರೆ ಅದೂ ಕೂಡ ಮಿತಿಯೊಳಗೆ ಮಾತನಾಡಿ ಮತ್ತೆ ಮೌನವಹಿಸುತ್ತದೆ. ಮುದ್ರಣ ಮಾಧ್ಯಮದಲ್ಲಿ ಇಂತಹ ಕೆಲವು ನ್ಯೂನತೆಗಳು ಗೋಚರಿಸಿದಾಗ ಅದು ನಿರ್ಣಾಯಕ ನಿರ್ಧಾರಗಳನ್ನು ತಳೆಯಲು ವಿಫ‌ಲವಾ ದುದೂ ಒಂದು ವಾಸ್ತವ. ಅದರ ಪ್ರತಿಕ್ರಿಯೆ ಗಾಯವನ್ನು ಗರಿಯಿಂದ ಸವರಿದಂತೆ. ಸಮಾಧಾನಕರ ವಿಷಯವೆಂದರೆ, ಮುದ್ರಣ ಮಾಧ್ಯಮ ಮಾತ್ರ ಒಂದಿಷ್ಟು ಶುದ್ಧತೆಯನ್ನು ಉಳಿಸಿಕೊಂಡಿದೆ. ಆದರೆ ದೃಶ್ಯ ಮಾಧ್ಯಮಗಳಿಗೆ ಯಾವುದೇ ಲಗಾಮು ಇಲ್ಲ. ಹೀಗಾಗಿ ಈ ರೀತಿಯ ಅಸಂಬದ್ಧ, ತರ್ಕರಹಿತ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ದೃಶ್ಯ ಮಾಧ್ಯಮಗಳಿಗೆ ಅಂಕುಶ ಹಾಕುವ ಪ್ರಬಲವಾದ ವ್ಯವಸ್ಥೆಯೊಂದರ ಅಗತ್ಯವಿದೆ.

ಬಿ.ಎನ್‌. ರಾಮಚಂದ್ರ 

Advertisement

Udayavani is now on Telegram. Click here to join our channel and stay updated with the latest news.

Next