ನವದೆಹಲಿ: ರಾಬಿನ್ ಹುಡ್ ಬಗ್ಗೆ ಗೊತ್ತಾ…ಬ್ರಿಟಿಷರಿಂದ ದೋಚಿದ ವಸ್ತುಗಳನ್ನು ಬಡವರಿಗೆ, ದೀನ ದಲಿತರಿಗೆ ಹಂಚುತ್ತಿದ್ದನಂತೆ. 27ರ ಹರೆಯದ ಈ ಯುವಕ ಆಧುನಿಕ ರಾಬಿನ್ ಹುಡ್ ಆಗಲು ಹೋಗಿ ಪೊಲೀಸರ ಬಲೆಗೆ ಬಿದ್ದಿದ್ದಾ ನೆ!. ದೆಹಲಿಯ ಇರ್ಫಾನ್ ಎಂಬ ಯುವಕ ಶ್ರೀಮಂತ ಕುಳಗಳ ಹಣ, ಚಿನ್ನಾಭರಣಗಳನ್ನು ದೋಚಿ ಅದನ್ನು ಬಿಹಾರದಲ್ಲಿರುವ ತನ್ನ ಗ್ರಾಮಸ್ಥರಿಗೆ ಆರೋಗ್ಯ ಶಿಬಿರ ನಡೆಸಲು ಖರ್ಚು ಮಾಡುತ್ತಿದ್ದ ಎಂದು ಮಾಧ್ಯಮದ ವರದಿ ತಿಳಿಸಿದೆ.
ಸಾಮಾಜಿಕ ಕಾರ್ಯಕರ್ತ ಎಂಬಂತೆ ಬಿಂಬಿಸಕೊಂಡ ಇರ್ಫಾನ್ ಬಿಹಾರದಲ್ಲಿರುವ ತನ್ನ ಗ್ರಾಮದ ಸುಮಾರು 8 ಕುಟುಂಬಗಳ ಮದುವೆಗೆ ಹಣಕಾಸಿನ ನೆರವು ನೀಡಿದ್ದ. ಶ್ರೀಮಂತರಿಂದ ದೋಚಿದ ಹಣದಲ್ಲಿ ತಾನೂ ಐಶಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
5ನೇ ತರಗತಿಯಿಂದ ಹೊರಬಿದ್ದಿದ್ದ ಇರ್ಫಾನ್ ನನ್ನು ದೆಹಲಿಯ 12 ಶ್ರೀಮಂತರ ಮನೆಗಳನ್ನು ಲೂಟಿ ಮಾಡಿದ ಪ್ರಕರಣದಲ್ಲಿ ಬಂಧಿಸಿದ್ದಾರೆ. ಜುಲೈ 6ರಂದು ಬಿಹಾರದ ಮನೆಯಲ್ಲಿ ಇರ್ಫಾನ್ ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ಆತನ ಕೈಯಲ್ಲಿ ಬೆಲೆಬಾಳುವ ರೊಲ್ಯಾಕ್ಸ್ ವಾಚ್ ಇತ್ತು. ಇದನ್ನು ನ್ಯೂ ಫ್ರೆಂಡ್ಸ್ ಕಾಲೋನಿಯ ಬಂಗ್ಲೆಯೊಂದರಲ್ಲಿ ಕದ್ದಿದ್ದ. ಅಷ್ಟೇ ಅಲ್ಲ ಸ್ಥಳೀಯ ವ್ಯಾಪಾರಿಯೊಬ್ಬರಿಗೆ ಕದ್ದಿದ್ದ ಚಿನ್ನಾಭರಣ, ಬೆಲೆಬಾಳುವ ವಾಚ್ ಗಳನ್ನು ಮಾರಾಟ ಮಾಡಿ ಹೊಂಡಾ ಸಿವಿಕ್ ಕಾರನ್ನು ಖರೀದಿಸಿದ್ದ!
ಇರ್ಫಾನ್ ನನ್ನು ಬಿಹಾರದ ಪುಪ್ರಿ ಜಿಲ್ಲೆಯ ಮನೆಯಲ್ಲಿದ್ದಾಗ ಪೊಲೀಸರು ಬಂಧಿಸಿದಾಗ , ಸ್ಥಳೀಯರು ಛೇ…ಛೇ ಇರ್ಫಾನ್ ಸಾಮಾಜಿಕ ಕಾರ್ಯಕರ್ತ. ಆತ ಬಡವರಿಗಾಗಿ ಆರೋಗ್ಯ ಶಿಬಿರವನ್ನು ಆಯೋಜಿಸುತ್ತಾನೆ. ಬಡವರಿಗಾಗಿ ಧನ ನೀಡುತ್ತಾನೆ ಎಂದು ವಿವರಿಸಿದ್ದರು. ಗ್ರಾಮಸ್ಥರಿಗೆಲ್ಲಾ ಆತ ಉಜಾಲಾ ಬಾಬು ಎಂದೇ ಪರಿಚಿತ ಎಂದು ತನಿಖಾಧಿಕಾರಿಯೊಬ್ಬರು ಹಿಂದೂಸ್ಥಾನ್ ಟೈಮ್ಸ್ ಗೆ ವಿವರಿಸಿದ್ದಾರೆ.
ಇರ್ಫಾನ್ ದೆಹಲಿ ಮತ್ತು ಮುಂಬೈಯ ಬಾರ್ ಮತ್ತು ಕ್ಲಬ್ ಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದ. ಅಲ್ಲದೇ ಒಂದು ಬಾರಿ ತನ್ನ ಇಷ್ಟದ ಹಾಡನ್ನು ಕೇಳುವ ನಿಟ್ಟಿನಲ್ಲಿ ಬಾರ್ ಮ್ಯಾನೇಜರ್ ಗೆ 10 ಸಾವಿರ ರೂಪಾಯಿ ನೀಡಿರುವುದಾಗಿ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದ ಎಂದು ಡಿಜಿಪಿ ರೋಮಿಲ್ ಬನಿಯಾ ತಿಳಿಸಿದ್ದಾರೆ.