ತಿರುವನಂತಪುರಂ: ಅಕ್ಷಯ್ ಕುಮಾರ್ ನಾಯಕರಾಗಿ ನಟಿಸಿರುವ, 2016ರಲ್ಲಿ ತೆರೆಕಂಡ “ಏರ್‌ಲಿಫ್ಟ್’ ಚಿತ್ರದ ಪ್ರೇರಕರು ಹಾಗೂ ನಿಜ ಜೀವನದ ಹೀರೋ, ಕುವೈತ್‌ನ ಅನಿವಾಸಿ ಭಾರತೀಯ ಉದ್ಯಮಿ ಮ್ಯಾಥುನ್ನೈ ಮ್ಯಾಥಿವ್ಸ್ (81) ಶುಕ್ರವಾರ ನಿಧನರಾಗಿದ್ದಾರೆ.
1990ರ ಆಗಸ್ಟ್ ತಿಂಗಳು. ಇರಾಕ್‌ನ ಸರ್ವಾಧಿಕಾರಿ ಸದ್ದಾಮ್ ಹುಸೇನ್‌ನ ಸೇನೆ ಕುವೈತ್ ಮೇಲೆ ಆಕ್ರಮಣ ಮಾಡಿದ ಸಮಯ. ಕುವೈತ್ ಮೇಲೆ ಏಕಾಏಕಿ ದಾಳಿ ನಡೆಸಿದ ಕ್ರೂರ ಇರಾಕಿ ಸೈನಿಕರು, ಅಲ್ಲಿ ವಾಸವಿದ್ದ ಜನರಿಗೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲುತ್ತಿದ್ದರು. ಈ ವೇಳೆ ಭಾರತದ ಪ್ರಜೆಗಳ ಬಗ್ಗೆ ಸದ್ದಾಂ ಬಣ ಮೃದು ಧೋರಣೆ ಹೊಂದಿತ್ತಾದರೂ , ಅನುಮಾನ ಬಂದರೆ ಭಾರತೀಯರೆಂದೂ ನೋಡದೆ ಪ್ರಾಣ ತೆಗೆಯುತ್ತಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಹತ್ತಾರು ಸಾವಿರ ಭಾರತೀಯರ ಪ್ರಾಣ ರಕ್ಷಿಸಿ, ಅವರೆಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆ ತಂದ ನಿಜ ಜೀವನದ ಹೀರೋ ಮ್ಯಾಥುನ್ನೈ ಮ್ಯಾಥಿವ್ಸ್.
ಟೊಯೋಟಾ ಸನ್ನಿ ಎಂದೇ ಖ್ಯಾತರಾಗಿದ್ದ ಮ್ಯಾಥಿವ್ಸ್, ಕೇರಳದ ಪತ್ತನಂತಿಟ್ಟ ಜಿಲ್ಲೆಯ ಕುಂಬನಾಡ್ ಮೂಲದವರು. 1956ರಲ್ಲಿ ಉದ್ಯೋಗ ಅರಸಿ ಕುವೈತ್‌ಗೆ ಹೋದ ಮ್ಯಾಥಿವ್ಸ್, ಟೊಯೋಟಾ ಕಂಪೆನಿಯಲ್ಲಿ ಟೈಪಿಸ್ಟ್ ಆಗಿ ಸೇರಿಕೊಂಡರು. ನಂತರ ಅದೇ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರೂ ಆದರು. 1989ರಲ್ಲಿ ನಿವೃತ್ತರಾದ ಮ್ಯಾಥಿವ್ಸ್, ಕಾರ್ ರೆಂಟಲ್ ಮತ್ತು ಜನರಲ್ ಟ್ರೇಡಿಂಗ್ ಕಂಪೆನಿ ತೆರೆದು ಯಶಸ್ವಿ ಉದ್ಯಮಿಯಾಗಿ ಬೆಳೆದರು. ಆದರೆ ಮರು ವರ್ಷ ಕುವೈತ್ ಮೇಲೆ ಇರಾಕ್ ದಾಳಿ ಮಾಡಿತು. ಈ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದ ಕೀರ್ತಿಗೆ ಮ್ಯಾಥಿವ್ಸ್ ಪಾತ್ರರಾಗಿದ್ದರು.
ಇರಾಕ್ ಸರ್ವಾಧಿಕಾರಿ ಸದ್ದಾಮ್ ಹುಸೇನ್‌ನ ಸೇನೆ ಕುವೈತ್ ಮೇಲೆ ದಾಳಿ ನಡೆಸಿದಾಗ ತಮ್ಮ ಸ್ವಂತ ಆಸ್ತಿ ಮತ್ತು ಪರಿವಾರದ ರಕ್ಷಣೆಯನ್ನು ಬದಿಗಿರಿಸಿ, ಹತ್ತಾರು ಸಾವಿರ ಭಾರತೀಯರಿಗೆ ಆಶ್ರಯ, ಆಹಾರ, ನೀಡಿದ್ದ ಮ್ಯಾಥಿವ್ಸ್, ಸತತ 59 ದಿನಗಳ ಕಾಲ ಹೋರಾಡಿದ್ದರು. ಕುವೈತ್ ಯುದ್ಧಭೂಮಿಯಾಗಿ ಪರಿವರ್ತನೆಯಾಗಿದ್ದ ಸಮಯದಲ್ಲೇ ಹತ್ತಾರು ಸಾವಿರ ಭಾರತೀಯರನ್ನು ಕುವೈತ್‌ನಿಂದ ಜೋರ್ಡಾನ್ ರಾಜಧಾನಿ ಅಮ್ಮಾನ್‌ಗೆ ರಸ್ತೆ ಮೂಲಕ ಕರೆದೊಯ್ದು, ಅಲ್ಲಿಂದ ಏರ್ ಇಂಡಿಯಾ ವಿಮಾನಗಳಲ್ಲಿ ಭಾರತಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಮ್ಯಾಥಿವ್ಸ್‌ರ ಈ ಸಾಹಸವನ್ನು “ವಿಶ್ವದ ಅತಿ ದೊಡ್ಡ ಯಶಸ್ವಿ ಮಾನವ ಸ್ಥಳಾಂತರ’ ಎಂದೇ ಕರೆಯಲಾಗಿದೆ. ಮ್ಯಾಥಿವ್ಸ್ ಸಾವಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್, ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.
ನಿಜಕ್ಕೂ ನನ್ನ ತಂದೆ ಅಸಾಧ್ಯವಾದ ಸಾಹಸವನ್ನೇ ಮಾಡಿದ್ದರು. ಆದರೆ ಅದರ ಕೀರ್ತಿ ಸಂದಿದ್ದು ಮಾತ್ರ ಏರ್ ಇಂಡಿಯಾಗೆ. ಅಲ್ಲದೆ ಒಂದೆರಡು ವರ್ಷಗಳ ನಂತರ ಕುವೈತ್‌ಗೆ ಮರಳಿದಾಗ ಅಲ್ಲಿನ ಜನ ನಮ್ಮ ತಂದೆ ಮಾಡಿದ ತ್ಯಾಗ, ಸಾವಿರಾರು ಜನರನ್ನು ರಕ್ಷಿಸಿದ್ದನ್ನು ಮರೆತೇಹೋಗಿದ್ದರು ಎಂಬುದೇ ವಿಪರ್ಯಾಸ.
– ಜಾರ್ಜ್, ಮ್ಯಾಥಿವ್ಸ್‌ರ ಪುತ್ರ