Advertisement

ರಿಯಲ್‌ ಹೀರೋ ಮತ್ತು…

10:25 AM Apr 01, 2020 | Suhan S |

ಅಪ್ಪನ ಪುಸ್ತಕದ ಟ್ರಂಕು ತೆರೆದು ನೋಡಿದಾಗ ಅವೇ ಕುವೆಂಪುರ ಬೆರಳ್‌ಗೆ ಕೊರಳ್‌, ಪಾಂಚಜನ್ಯ, ಅಗ್ನಿಹಂಸ ಹಾಗೂ ಇತರೆ ಪುಸ್ತಕಗಳು. ಪುಸ್ತಕಗಳ ಮೇಲೆ ಎರಡು ಪುಕ್ಕಗಳ ಚೆಂದನೆಯ ಪಕ್ಷಿ, (ಅದರ ಹೆಸರೇನು ಗೊತ್ತಿಲ್ಲ) ಆ ಪುಸ್ತಕಗಳನ್ನು ಇಂದಿಗೂ ಓದಿಕೊಂಡಿಲ್ಲ. ಓದಿದಾಗ ಅರ್ಥವಾಗಲಿಲ್ಲ. “ಮಲೆಗಳಲ್ಲಿ ಮದುಮಗಳು’ ರಂಗದ ಮೇಲೆ ಇಷ್ಟವಾಗಿತ್ತು ಬಿಟ್ಟರೆ ಪುಸ್ತಕ ಹತ್ತು ಪೇಜನ್ನೂ ಓದಿಸಿಕೊಳ್ಳಲಿಲ್ಲ. ಶಿವರಾಮ ಕಾರಂತರು ನನಗೆ, “ಅರಸಿಕರಲ್ಲ’ ಪುಸ್ತಕದಷ್ಟೇ ಕಾಂಪ್ಲಿಕೇಟೆಡ್ಡು. ನಮ್ಮ ಬಾಲ್ಯವನ್ನು ತುಂಬಿಕೊಂಡದ್ದು ಬಾಲಮಿತ್ರ, ಬಾಲಮಂಗಳ, ಚಂದಮಾಮ ಪುಸ್ತಕಗಳು. “ಚುಟುಕ’ ಸರಣಿಯ ಪುಸ್ತಕಗಳು, ಆ ವಯಸ್ಸಿನ ನಮ್ಮನ್ನು ಪ್ರಪಂಚವನ್ನು ಕುತೂಹಲದಿಂದ ನೋಡುವಂತೆ ಮಾಡಿದ್ದವು. ನಾವು ಬೆಳೆದಂತೆ ಪೂರ್ಣಚಂದ್ರ ತೇಜಸ್ವಿಯವರು ನಮ್ಮ ಕಾಲದ ಯುವಕ, ಯುವತಿಯರಿಗೆ ಸಾಹಿತ್ಯವಾದರು.

Advertisement

ಭೈರಪ್ಪನವರ ಬರವಣಿಗೆ ಜೀವನದ ಕುರಿತ ಸಂಶೋಧನೆ ಅನ್ನಿಸಿತ್ತು. ವಾರ ಪತ್ರಿಕೆಗಳಿಗೆ ಬರೆಯುತ್ತಿದ್ದ ಹೆಸರೇ ಕೇಳದ ಅನೇಕ ಬರಹಗಾರರ ಕಥೆಗಳು, ಕವನಗಳು ಅತ್ಯಂತ ಶ್ರೇಷ್ಠ ಎನಿಸುತ್ತಿದ್ದವು. ಈ ಕಾಲಮಾನದ ಮಕ್ಕಳ ಪುಸ್ತಕಗಳು ಹೆಚ್ಚಾಗಿ ಸಿನೆಮಾ ಸ್ವರೂಪದ ಕತೆಗಳು. ಫ್ಯಾಂಟಸಿಯೇ ತುಂಬಿಕೊಂಡ ಅವುಗಳಲ್ಲಿ ಯಾವ ಪಂಚತಂತ್ರದ ತತ್ವಗಳೂ ಸಿಗುವುದಿಲ್ಲ. ಹ್ಯಾರಿ ಪಾಟರ್‌ ಸರಣಿಯ ಪುಸ್ತಕಗಳು ಇಂದಿಗೂ ಪ್ರಪಂಚದ best selling  ಪುಸ್ತಕಗಳು.

ಗ್ರಿಲ್ಸ್ ಬಾಲ್ಯದಿಂದಲೂ ಹುಚ್ಚು ಕ್ರಿಕೆಟಿಗ, ಇವರ ತಂದೆ ರಾಜಕಾರಣಿ. ಈ ಹುಡುಗ ಥೇಮ್ಸ್  ನದಿ ದಂಡೆಯ ಮೇಲೆ ಬೆಳೆ ಬೆಳೆಯುತ್ತಾ ಹವ್ಯಾಸಿ ಸಾಹಸಿಗನಾಗಿ ಬದಲಾಗಿ ಬಿಟ್ಟ. ಎಪ್ಪತ್ತೈದು ದೇಶಗಳಲ್ಲಿ ಪ್ರಸಾರವಾಗುವ Man v/s Wild ಕಾರ್ಯಕ್ರಮ ಸರಣಿಯಲ್ಲಿ ಒಬಾಮ, ಪುಟಿನ್‌ ಸೇರಿದಂತೆ ಹಲವರು ಕಾಣಿಸಿಕೊಂಡರು! ಮೋದಿಯವರೊಂದಿಗೆ ಜಿಮ್‌ ಕಾರ್ಬೆಟ್‌ ಅರಣ್ಯದಲ್ಲಿ ಸುತ್ತು ಹಾಕಿದ ಮೇಲೆ ಮೌಂಟ್‌ ಎವರೆಸ್ಟ್ ಏರಿ ಬಂದ ಅನುಭವವನ್ನು ತಾಯಿಗೆ ಹೇಳಲು ಹೊರಟನಂತೆ.

ಎವರೆಸ್ಟ್ ತುದಿಯ ಫೋಟೋವನ್ನು ನೋಡಿದ ಅವನಮ್ಮನಿಗೆ ಕಂಡದ್ದು ಸ್ನಾನವಿಲ್ಲದೆ ತಂಪು ಹವೆಗೆ ಗಂಟು ಕಟ್ಟಿ ಜಡೆಯಾದ ಅಸ್ತವ್ಯಸ್ತ ಕೂದಲು..! ಆಕೆ “ಅರೇ… ಈ ಚಿತ್ರದಲ್ಲಿ ನಿನ್ನ ಹೇರ್‌ ಸ್ಟೈಲ್‌ ಚೆನ್ನಾಗಿಲ್ಲ..’ ಎಂದರಂತೆ! ಇಂತಹ ಸಂಗತಿಗಳನ್ನು ಹೇಳಿಕೊಳ್ಳುವ ಅವನ ಭಾವುಕ ಮನಸ್ಸು ಹಾಗೂ ಹಾವುಗಳಂತಹ ಜಂತುಗಳನ್ನು ಹಸಿಹಸಿಯಾಗಿಯೇ ತಿಂದುಬಿಡುವ ಅವನ ಕಠೊರ ದೇಹ ಪ್ರಕೃತಿ ನನ್ನ ಅಚ್ಚರಿಯ ವಿಷಯಗಳು. ಮೊನ್ನೆ ಆಧ್ಯಂತ ತನ್ನ ಶಾಲೆಯ ಲೈಬ್ರರಿಯಿಂದ ತಂದ “ಜೆರೋನಿಮೋ ಸ್ಟೆಲ್‌ ಟನ್‌’ ಸರಣಿಯ ಪುಸ್ತಕಗಳನ್ನು ಕಣ್ಣು ಮಿಟುಕಿಸದೆ ಓದಿ ಮುಗಿಸಿಬಿಟ್ಟ.

ಅವುಗಳಲ್ಲಿ ಚಿತ್ರಿತವಾದ ಇಲಿಯ ಕಾಲ್ಪನಿಕ ಕ್ಯಾರೆಕ್ಟರ್‌ಗಳ ಸಾಹಸಗಳನ್ನು ಅವನ ಕ್ಯೂಟ್‌ ಮಾತುಗಳಲ್ಲಿ ಕೇಳಲು ಅದೆಷ್ಟು ಚೆಂದವೋ..! ಅವನ ಪುಸ್ತಕಗಳ ಇಂಟರೆಸ್ಟ್ ಗಳನ್ನು ಗಮನಿಸಿ ನಿನ್ನೆ ಬೀರ್‌ ಗ್ರಿಲ್ಸ್‌ರ “Kid who climbed Everest’, ‘Facing up, Born survivor’ ಪುಸ್ತಕಗಳನ್ನು ತಂದು ಕೊಟ್ಟಿದ್ದೇನೆ. ಫ್ಯಾಂಟಸಿ ಪ್ರಪಂಚದಿಂದ ಆಚೆ ತಂದು ರಿಯಲ್‌ ಹೀರೋನನ್ನು ಇವನಿಂದ ಓದಿಸಬೇಕೆಂಬ ಇರಾದೆ ನನ್ನದು. ಈ ಕಾಲದ ಮಕ್ಕಳು ತಿರುವಿ ಹಾಕುವ ಪುಸ್ತಕಗಳು ಹೇಗೆಂದರೆ ಅವರಲ್ಲೊಬ್ಬ ಸಾಹಸಿ ಗ್ರಿಲ್ಸ್‌ ಹೊರಹೊಮ್ಮಿ ಬರುವಂತಿರಬೇಕು.

Advertisement

 

-ಸತ್ಯ

Advertisement

Udayavani is now on Telegram. Click here to join our channel and stay updated with the latest news.

Next