Advertisement
ಸೈಟ್ ಮೇಲೆ ದುಡ್ಡು ಹಾಕೋರು, ಅಪಾರ್ಟ್‌ಮೆಂಟ್ ಖರೀದಿಗೆ ಮಾಡಬೇಕು ಅಂತ ನಿಂತಿರೋರು ಒಟ್ಟಾರೆ ರಿಯಲ್ ಎಸ್ಟೇಟ್‌ನಲ್ಲಿ ಹೀಗೆ ದುಡ್ಡು ಹಾಕಿ ಹಾಗೆ ತೆಗೆಯೋಣ ಅಂತ ಯೋಚನೆ ಮಾಡುತ್ತಿರುವವರೇ. ಸ್ವಲ್ಪ ನಿಲ್ಲಿ. ಆತುರಬೇಡ. ತಾಳಿಯವನು ಬಾಳಿಯಾನು ಅಂತಾರಲ್ಲ. ಹಾಗೇ ಇದ್ದರೆ ಈಗ ಕ್ಷೇಮ. ಏಕೆಂದರೆ ಕೇಂದ್ರ ಸರ್ಕಾರ ಹೊಸ ರಿಯಲ್ ಎಸ್ಟೇಟ್ ( ನಿಯಂತ್ರಣ-ಅಭಿವೃದ್ಧಿ) ನಿಯಂತ್ರಣ ಕಾಯ್ದೆ ಬಿಲ್ ರೆಡಿ ಮಾಡಿದೆ. ಒಂದಷ್ಟು ರಾಜ್ಯಗಳಲ್ಲೂ ಇದು ಜಾರಿಯಾಗಿದೆ. ನಮ್ಮಲ್ಲಿ ಮೀನೇ ಮೇಷ ಎಣಿಸುತ್ತಿದ್ದರೂ ಅತಿ ಶೀಘ್ರದಲ್ಲೇ ಜಾರಿಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.
Related Articles
Advertisement
ಕಾಯ್ದೆಯಲ್ಲಿ ಹೇಳುವಂತೆ 8 ಮನೆ/ ಅಪಾರ್ಟ್‌ಮೆಂಟ್ ನಿರ್ಮಿಸುವ, 5000ಚ.ಮೀಟರ್‌ಗಿಂತ ಅಂದರೆ 5,180 ಚ.ಅಡಿ ಗಿಂತ ಕಡಿಮೆ ಜಾಗದಲ್ಲಿ ಲೇಔಟ್, ಅಪಾರ್ಟಮೆಂಟ್ ನಿರ್ಮಿಸುವುದಾದರೆ ಈ ಕಾಯ್ದೆ ಇಲ್ಲಿ ಅನ್ವಯಿಸುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ- ಹಳ್ಳಿಗಳಲ್ಲಿ ಸಣ್ಣ, ಸಣ್ಣ ಅಂದರೆ ಒಂದೋ, ಎರಡೋ ಸೈಟುಗಳನ್ನು, ಮನೆಗಳನ್ನು ಮಾರಾಟ ಮಾಡುವ, ವ್ಯವಹಾರ ಕುದುರಿಸಿ ಕೊಟ್ಟಿದ್ದಕ್ಕೆ ಕಮೀಷನ್ ಪಡೆಯುವವರಿಗೆ ಈ ಕಾಯ್ದೆ ಹೇಳಿಕೊಳ್ಳುವಂತ ಬಿಸಿ ಮುಟ್ಟಿಸುವುದಿಲ್ಲ. ಮಹಾನಗರಗಳಲ್ಲಿ ಗಗನ ಚುಂಬಿ ಕಟ್ಟಡಗಳನ್ನು ಕಟ್ಟುವ, ಅದನ್ನು ತೋರಿಸಿ ಯಾಮಾರಿಸುವವರಿಗೆ ಇದು ಬಿಸಿಬಿಸಿ ತುಪ್ಪವೇ ಸರಿ.
ಒಂದು ಪಕ್ಷ ಈಗಾಗಲೇ ಅಪಾರ್ಟ್‌ಮೆಂಟ್ ಕಟ್ಟಲು ಶುರುಮಾಡಿದ್ದರೆ, ಒಂದಷ್ಟು ಗ್ರಾಹಕರ ಹತ್ತಿರ ಮುಂಗಡ ಕೂಡ ಪಡೆದಿದ್ದರೆ- ಇದಕ್ಕೆ ಏನು ಮಾಡಬೇಕು? ಅಲ್ಲಿ ದುಡ್ಡು ಕೊಟ್ಟವರ ಕಥೆ ಏನು? ಭಯ ಬೇಡ. ಇದಕ್ಕೂ ಕಾಯ್ದೆಯಲ್ಲಿ ಅವಕಾಶವಿದೆ. ಇಂಥ ಬಿಲ್ಡರ್‌ಗಳು ಇನ್ನು ಮೂರು ತಿಂಗಳ ಒಳಗಾಗಿ ಅಂದರೆ ಆಗಸ್ಟ್ ಒಳಗಾಗಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿ, ನೋಂದಣಿ ಮಾಡಿಸಿಕೊಳ್ಳಬಹುದು. ಆ ನಂತರ ಕಾಯ್ದೆಯನ್ವಯ ನಡೆದು ಕೊಂಡರೆ ಸಾಕು. ಆದರೆ ಯಾವುದೇ ಕಾರಣಕ್ಕೂ ರಂಗೋಲಿ ಕೆಳಗಾಗಲೀ, ಚಾಪೆ ಕೆಳಗಾಗಲಿ ನುಸುಳುವ ಪ್ರಯತ್ನ ಮಾಡುವ ಹಾಗಿಲ್ಲ. ಹೀಗಾಗಿ ಎಲ್ಲವೂ ಅಲ್ಲದೇ ಇದ್ದರೂ ಕೆಲ ಪ್ರಮುಖ ಕಾಯ್ದೆಗಳು ಏನು ಹೇಳುತ್ತವೆ ಎನ್ನುವುದನ್ನು ಇಲ್ಲಿ ತಿಳಿಯಬೇಕು. ಹೂಡಿಕೆ ಮಾಡುವ ಮುನ್ನ ನಿಮಗೆ ಗೊತ್ತಿರಲೇ ಬೇಕಾದ ಸಂಗತಿಗಳು ಇಲ್ಲಿವೆ ನೋಡಿ.
ಎಲ್ಲರೂ ನೋಂದಣಿ ಮಾಡಿಸಿ ಸೆಕ್ಷನ್ 3- ಜಾಹೀರಾತಲ್ಲಿ ಕಣ್ಣ ಕೋರೈಸುವಂತ, ನಿಮ್ಮ ಆಸೆಗಳಿಗೆ ಬಣ್ಣ ಬಳಿದು ಕಟ್ಟಿದ ಅಪಾರ್ಟ್‌ಮೆಂಟುಗಳನ್ನು ತೋರಿಸಿ ಹಣ ಪಡೆಯುವ ಮೊದಲು- ಬಿಲ್ಡರ್ ತನ್ನ ಕಂಪೆನಿಯನ್ನು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಅಂಥ ಬಿಲ್ಡರ್ ಹತ್ತಿರವೇ ನೀವು ಅಪಾರ್ಟ್‌ಮೆಂಟ್, ಸೈಟುಗಳನ್ನು ಕೊಳ್ಳಬೇಕು. ಈ ರೀತಿ ನೋಂದಣಿ ಮಾಡಿಕೊಳ್ಳದೆಯೇ ಜಾಹೀರಾತು ನೀಡುವುದಾಗಲೀ, ಫ್ರೀಲಾಂಚ್ ಆಫರ್‌ಗಳನ್ನು ಘೋಷಣೆ ಮಾಡಿ ಗ್ರಾಹಕರನ್ನು ಸೆಳೆಯುವುದಾಗಲೀ ಮಾಡುವಹಾಗಿಲ್ಲ. ಇತ್ತ ಅಪ್ಲಿಕೇಷನ್ ಹಾಕಿದ್ದೇನೆ ಎನ್ನುವ ನೆಪ ಒಡ್ಡಿ ಆ ಗ್ಯಾಪಲ್ಲಿ ವ್ಯವಹಾರ ಕುದುರಿಸುವಹಾಗಿಲ್ಲ. ನೋಂದಣಿ ಮಾಡಿಸುವ ಸಂದರ್ಭದಲ್ಲಿ ಬಿಲ್ಡರ್ ತನ್ನೆಲ್ಲಾ ಜಾತಕವನ್ನು ಪ್ರಾಧಿಕಾರಕ್ಕೆ ಕೊಡಬೇಕು. ವಿಳಾಸ, ಪಾನ್, ಆದಾಯ ತೆರಿಗೆ ಮಾಹಿತಿ ಕೂಡ ಸಲ್ಲಿಸಬೇಕಾಗುತ್ತದೆ. ಜುಟ್ಟು ಪೂರ್ತಿ ಪ್ರಾಧಿಕಾರಕ್ಕೆ ಕೊಟ್ಟ ನಂತರ ವ್ಯವಹಾರ ಶುರುಮಾಡಬೇಕಾಗುತ್ತದೆ. ಪಾಸ್‌ವರ್ಡು ಲಾಗಿನ್
ಸೆಕ್ಷನ್ 11 ಹೇಳುವಂತೆ – ಪ್ರತಿ ಬಿಲ್ಡರ್ ಸಂಸ್ಥೆ ನೋಂದಣಿ ಮಾಡಿಸಬೇಕು. ನಂತರ ಪ್ರಾಧಿಕಾರ ಲಾಗಿನ್ ಪಾಸ್‌ವರ್ಡ್ ಕೊಡುತ್ತದೆ. ತಕ್ಷಣ ಪ್ರಾಧಿಕಾರದ ವೆಬ್‌ಸೈಟಲ್ಲಿ ಬಿಲ್ಡರ್ ತಮ್ಮ ಸಂಸ್ಥೆಯ ವೆಬ್‌ಸೈಟ್ ಓಪನ್ ಮಾಡಬೇಕು. ಅದರಲ್ಲಿ ತಮ್ಮ ಪ್ರಾಜಕ್ಟ್‌ನ ಎಲ್ಲ ಮಾಹಿತಿ ಕೂಡ ಹಾಕಬೇಕು. ಮುಖ್ಯವಾಗಿ 1) ಒಟ್ಟು ಎಷ್ಟು ಪ್ಲಾಟ್ ಕಾಲಿ ಇದೆ. 2) ಎಷ್ಟು ಪ್ಲಾಟ್ ಬುಕ್ ಆಗಿದೆ. 3) ಪ್ರಾಜೆಕ್ಟ್ ಮಾಡಲು ಯಾವ್ಯಾವ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡಿವೆ. 4) ಪ್ರಸ್ತುತ ಪ್ರಾಜೆಕ್ಟ್‌ನ ಕಾರ್ಯಗಳು ಯಾವ ಹಂತದಲ್ಲಿದೆ 5) ಕೊಳ್ಳುವವರಿಗೆ ಕಾರ್ ಪಾರ್ಕಿಂಗ್ ಇದೆಯೇ? ಇದ್ದರೆ ಅದರ ಸವಿವರ. ನೀವು ಒಂದು ಅಪಾರ್ಟ್‌ಮೆಂಟ್ ಬುಕ್ ಮಾಡಿದ್ದೀರಿ. ಈ ಸಂದರ್ಭದಲ್ಲಿ ನೋಂದಾಯಿತ್ ಬಿಲ್ಡರ್ ಮಾಡಬೇಕಾದದ್ದು-
ಸಂಪೂರ್ಣ ಲೇಔಟ್ ಪ್ಲಾನ್ ಕೊಡಬೇಕು. ಸ್ಯಾಂಕ್ಷನಿಂಗ್ ಪ್ಲಾನ್, ಸೌಲಭ್ಯಗಳು ಏನೇನು ಕೊಡುತ್ತಿದ್ದೇವೆ ಅನ್ನೋ ಮಾಹಿತಿ, ಮುಖ್ಯವಾಗಿ ಇಡೀ ಪ್ರಾಜೆಕ್ಟ್ ಯಾವಾಗ ಮುಗಿದು, ನಿಮ್ಮ ಕೈ ಸೇರುತ್ತದೆ ಅನ್ನೋ ನಿಗದಿತ ಸಮಯದ ನಿಖರವಾದ ವಿವರ ಒದಗಿಸಬೇಕಾಗುತ್ತದೆ. ಮುಂಗಡ ಶೇ.10ರಷ್ಟು ಮಾತ್ರ
ಅಪಾರ್ಟ್‌ಮೆಂಟ್ 60ಲಕ್ಷ ಎಂದಿಟ್ಟುಕೊಳ್ಳೋಣ. ಹೊಸ ಕಾಯ್ದೆ ಪ್ರಕಾರ ಇದರ ಶೇ.10ರಷ್ಟು ಅಂದರೆ 6ಲಕ್ಷ ರೂ. ಮಾತ್ರ ಮುಂಗಡವಾಗಿ ಪಡೆಯಬಹುದು. ಈಗಂತು ಶೇ.50ರಷ್ಟು, 70ರಷ್ಟು ಪೀಕುವಂತೆ ಹೊಸ ಕಾಯ್ದೆ ಜಾರಿಯಾದರೆ ಸಾಧ್ಯವಿಲ್ಲ. ಸೆಕ್ಷನ್ 4 ಹೇಳುವ ಇನ್ನೊಂದು ವಿಚಾರ ಎಂದರೆ ಈ ರೀತಿ ಪಡೆದ ಮುಂಗಡದ ಶೇ. 75ರಷ್ಟು ಮೊತ್ತವನ್ನು ಈ ಪ್ರಾಜೆಕ್ಟ್‌ನ ನಿರ್ಮಾಣ ಕಾಮಗಾರಿಗೇ ಬಳಸಬೇಕು. ಅದು ಬಿಟ್ಟು ಈ ಹಣವನ್ನು ಇನ್ನೊಂದು ಪ್ರಾಜೆಕ್ಟ್ಗೆ ಹಾಕಿ, ಅಲ್ಲಿ ಕೈ ಸುಟ್ಟುಕೊಂಡು ಇಲ್ಲಿ ಮುಂಗಡ ಕೊಟ್ಟ ಗ್ರಾಹಕರಿಗೆ ನಾಮ ಹಾಕುವಂತೆ ಇಲ್ಲ. ಅಂದರೆ ಇಲ್ಲಿ ಬಿಲ್ಡರ್‌ಗೆ ಲಾಭ ಪ್ರಮಾಣ ಶೇ.25ರಷ್ಟು ಎಂದು ಕಾಯ್ದೆ ನಿಗದಿಪಡಿಸಿದಂತೆ ಇದೆ. ಈ ಲಾಭದ ಹಣದಲ್ಲಿ ಬಿಲ್ಡಹ್ ಏನು ಬೇಕಾದರು ಮಾಡಬಹುದು. ಆದರೆ ಗ್ರಾಹಕರಿಂದ ಪಡೆದ ಮುಂಗಡವನ್ನು ಅವರ ಮನೆ ಕಟ್ಟಲು ಮಾತ್ರ ಬಳಸಬೇಕು.
ಬಿಲ್ಡರ್ ನೋಂದಣಿಯ ಸಮಯದಲ್ಲಿ ಕಾಂಟ್ರಾಕ್ಟರ್ ಯಾರು, ಆರ್ಕಿಟೆಕ್ಟ್ ಯಾರು ಅಪಾರ್ಟಮೆಂಟ್/ ಲೇಔಟ್ ನಿರ್ಮಾಣದ ಎಂಜಿನಿಯರ್ ಯಾರು? ಅವರ ಮಾಹಿತಿಯನ್ನು ನೀಡಬೇಕು ಎನ್ನುತ್ತದೆ ಕಾಯ್ದೆ. ಆಸ್ತಿಯ ಲೀಗಲ್ ಟೈಟಲ್‌ನ ಪೂರ್ತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಡೆಡ್‌ಲೈನ್, ಮುಂಗಡಕ್ಕೆ ಬಡ್ಡಿ
ನಿಮ್ಮ ಮನೆ/ ಸೈಟು ಇಂಥ ತಿಂಗಳು, ಇಂಥ ವರ್ಷದಲ್ಲಿ ಪೂರೈಸಿ ಕೊಡುತ್ತೇವೆ ಹೀಗಂತ ಬಿಲ್ಡರ್‌ಗಳು ಮೊದಲೇ ಘೋಷಣೆ ಮಾಡಬೇಕು. ಅದು ಅಗ್ರಿಮೆಂಟ್‌ನಲ್ಲಿ ನಮೂದಾಗಿರಬೇಕು. ಇದಕ್ಕಾಗಿ ಮುಂಗಡ ಪಡೆಯಬೇಕು. ಹೀಗೆ ಹೇಳಿದಂತೆ ನಡೆದು ಕೊಳ್ಳಬೇಕು. ಒಂದು ಪಕ್ಷ ಒಪ್ಪಂದದ ಪ್ರಕಾರ ನಡೆದು ಕೊಳ್ಳಲಿಲ್ಲ ಅಂದರೆ ಹೂಡಿಕೆದಾರ ಮುಂಡ ಹಣವನ್ನು ವಾಪಸ್ಸು ಪಡೆಯಬಹುದು. ಇದಕ್ಕೆ ಬಿಲ್ಡರ್ ಬಡ್ಡಿ ಸಮೇತ ಹಿಂತಿರುಗಿಸಬೇಕಾಗುತ್ತದೆ. ಒಂದು ಪಕ್ಷ ತಡವಾದರೂ ನಾನು ಇದೇ ಪ್ರಾಜಕ್ಟ್‌ನಲ್ಲಿ ಮುಂದುವರಿಯುತ್ತೇನೆ ಎಂದು ಗ್ರಾಹಕ/ ಹೂಡಿಕೆದಾರ ಹೇಳಿದರೆ – ಎಷ್ಟು ತಿಂಗಳು ವಿಳಂಬವಾಗುತ್ತದೋ ಅಷ್ಟು ತಿಂಗಳತನಕ ಮುಂಗಡಕ್ಕೆ ಬಿಲ್ಡರ್ ಬಡ್ಡಿ ಕೊಡಬೇಕಾಗುತ್ತದೆ. ಮಾರ್ಟ್‌ಗೇಜ್ ಇಲ್ಲ
ಒಂದು ಸಲ ನಿಮ್ಮ ಹತ್ತಿರ ಒಪ್ಪಂದ ಮಾಡಿಕೊಂಡರೆ ಆನಂತರ ಅದನ್ನು ಬ್ಯಾಂಕ್‌ಗಳಿಗೆ ಮಾರ್ಟಗೇಜ್ ಮಾಡುವುದು ಅಥವಾ ಆಸ್ತಿ ಅಡ ಇಟ್ಟು ಕೈ ಸಾಲಪಡೆಯುವುದು ಬಿಲ್ಡರ್ ಹೀಗೆಲ್ಲ ಮಾಡುವಹಾಗಿಲ್ಲ. ನಿಮಗೆ ಸ್ವತ್ತನ್ನು ನೋಂದಣಿ ಮಾಡಿಕೊಡುವ ಮೊದಲು ಎಲ್ಲ ರೀತಿಯ ತೆರಿಗೆಗಳು, ಸಾಲಗಳನ್ನು ತೀರಿಸಿ ನಂತರ ನೋಂದಣಿ ಮಾಡಿಕೊಡಬೇಕು. ಒಂದು ಪಕ್ಷ ನೋಂದಣಿಯ ನಂತರ ಹೀಗೆ ಮಾಡಿದರೆ ಬಿಲ್ಡರ್ ಮಾಡಿ ಕೊಂಡ ಸಾಲಕ್ಕೂ ಗ್ರಾಹಕರಿಗೂ ಯಾವುದೇ ಸಂಬಂಧವಿರುವುದಿಲ್ಲ. ಎಲ್ಲದರ ಹೊಣೆಗಾರಿಗೆ ಬಿಲ್ಡರ್ ಹೊರಬೇಕಾಗುತ್ತದೆ. ಏಜಂಟರುಗಳೇ ಎಚ್ಚರ
ಸೆಕ್ಷನ್ 9ರ ಹೇಳವಂತೆ ಒಂದು ಅಪಾರ್ಟಮೆಂಟ್ ತೋರಿಸಿ, ಮೂರು ಜನರ ಹತ್ತಿರ ಕಮೀಷನ್ ತೆಗೆದುಕೊಳ್ಳುವುದು ಎಲ್ಲವೂ ನಿಷಿದ್ಧ. ಪ್ರತಿಯೊಬ್ಬ ರಿಯಲ್ ಎಸ್ಟೇಟ್ ಏಜೆಂಟ್ ಕೂಡ ನೋಂದಣಿ ಮಾಡಿಸಿಕೊಳ್ಳಬೇಕು. ನಂತರ ಅವರಿಗೊಂದು ಕ್ರಮ ಸಂಖ್ಯೆ, ಲೈಸೆನ್ಸ್ ಪ್ರಾಧಿಕಾರ ನೀಡುತ್ತದೆ. ಇದರ ಅವಧಿ 5 ವರ್ಷಗಳು. ನೋಂದಣಿ ಮಾಡಿಸಿಕೊಳ್ಳುವಾಗ-
1) ಒಬ್ಬನೇ ಪ್ರಾಜೆಕ್ಟ್ ಮಾಡಿತ್ತಿದ್ದೀರಾ, ಬಾಗೀದಾರರು ಇದ್ದಾರ? ಅವರ ಮಾಹಿತಿ. ಭಾವಚಿತ್ರಗಳು.
2) ಪಾನ್ ಸಂಖ್ಯೆ ಕಡ್ಡಾಯ
3) 1962ರ ಆದಾಯ ತೆರಿಗೆ ಕಾಯ್ದೆಯಂತೆ ತೆರಿಗೆ ಕಟ್ಟಿದ್ದರ ಮಾಹಿತಿ
4) ಏಜೆಂಟ್ ಆದಾಯ, ಖರ್ಚಿನ ಅಕೌಂಟ್ ಇಡಬೇಕು. ಏಜೆಂಟ್‌ಗಳು ಇಲ್ಲಸಲ್ಲದ ಆಶ್ವಾಸನೆ ಕೊಡುವ ಹಾಗಿಲ್ಲ. ಸೌಲಭ್ಯಗಳು ಏನು ಕೊಡುತ್ತಾರೋ ಅದನ್ನು ಮಾತ್ರ ಗ್ರಾಹಕರಿಗೆ ಹೇಳಬೇಕು. ಸುಳ್ಳು ಮಾಹಿತಿ ಕೊಟ್ಟರೆ ಲೈಸನ್ಸ್ ರದ್ದಾಗುವ ಸಾಧ್ಯತೆಯೂ ಉಂಟು. ಗ್ರಾಹಕರು ದಾಖಲೆ ಕೇಳಿದರೆ ಎಲ್ಲವನ್ನೂ ಒದಗಿಸಬೇಕು. ಅದಕ್ಕೆ ಪ್ರತಿಯಾಗಿ 5-10 ಸಾವಿರ ಹಣ ಪಡೆಯುವಂತೆ ಇಲ್ಲ. ಕೊಳ್ಳುವವರೇ
ಸೆಕ್ಷನ್ 17 ಸೈಟು, ಅಪಾರ್ಟ್‌ಮೆಂಟ್‌ಗಳನ್ನು ಕೊಳ್ಳುವವರಿಗೆ ಎಚ್ಚರಿಕೆ ನೀಡಿದೆ. ಅವರು ಬಿಲ್ಡರ್ ಹೇಳಿದಂತೆ ಅಪಾರ್ಟ್ ಮೆಂಟೋ, ಲೇಔಟಿನ ಕಾಮಗಾರಿಯ ಸ್ಟೇಜ್ ಬೈ ಸ್ಟೇಜ್ ಕೆಲಸಗಳು ನಡೆಯುತ್ತಿವೆಯೇ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಕೊಳ್ಳುವ ಆಸ್ತಿಯ ಅಗತ್ಯವಿರುವ ದಾಖಲೆಗಳು, ನೀಲನಕ್ಷೆಯನ್ನು ಪಡೆಯಬಹುದು. ಸಮಯಕ್ಕೆ ಸರಿಯಾಗಿ ಕಂತು ಕಟ್ಟಬೇಕು. ಒಂದು ಪಕ್ಷ ಕಟ್ಟದೇ ಹೋದರೆ ಬಿಲ್ಡರ್‌ಗೆ ಅದಕ್ಕೆ ಆಗುವ ಬಡ್ಡಿ ತೆತ್ತಬೇಕಾಗುತ್ತದೆ.
ಲಾಯರ್ ಮರಿಯಪ್ಪ ಫೈನ್ ಹೀಗೂ ಉಂಟು…
1) ಪ್ರಾಜೆಕ್ಟ್ ನೋಂದಣಿ ಮಾಡದೇ ಮಾರಾಟ ಮಾಡಲು ಮುಂದಾದರೆ ಪ್ರಾಜಕ್ಟ್ ಮೇಲೆ ಹೂಡಿಕೆ ಮಾಡಿದ ಒಟ್ಟು ಮೊತ್ತದ ಶೇ. 10ರಷ್ಟು ಫೈನ್ 2) ನೋಂದಣಿ ಮಾಡಿಸದೇ, ಪ್ರಾಧಿಕಾರ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ವಿಫಲವಾದರೆ ಮೂರು ವರ್ಷ ಸೆರೆವಾಸ ಮತ್ತು ಶೇ. 10ರಷ್ಟು ಫೈನ್. 3) ಪ್ರಾಧಿಕಾರಕ್ಕೆ ಸುಳ್ಳು ಮಾಹಿತಿ ಅಥವಾ ದಾಖಲೆ ಕೊಟ್ಟು ದಾರಿ ತಪ್ಪಿಸಿದರೆ ಶೇ.5ರಷ್ಟು ಫೈನ್. 4) ಪ್ರಾಧಿಕಾರದ ನಿರ್ದೇಶನ ಉಲ್ಲಂ ಸಿದರೆ ಪ್ರತಿದಿನ ಶೇ. 5ರಷ್ಟು ಫೈನ್ 5) ಗ್ರಾಹಕ ಪ್ರಾಧಿಕಾರ, ಟ್ರಿಬ್ಯೂನಲ್‌ಗೆ ದೂರಿನ ಅನ್ವಯ ನೀಡಿದ ನಿರ್ದೇಶನ ಪಾಲಿಸದೇ ಇದ್ದರೆ ಅಪಾರ್ಟ್‌ಮೆಂಟ್, ಕಟ್ಟಡದ ಮಾರುಕಟ್ಟೆಯ ಬೆಲೆಯ ಶೇ.5 ಅಥವಾ 10ರಷ್ಟು ಫೈನ್.