ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ದೇಶದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ದಶಕದಲ್ಲಿ ಅಭಿವೃದ್ಧಿಯ ಟ್ರೇಲರ್ ಮಾತ್ರ ತೋರಿಸಿದ ಪ್ರಧಾನಿ ನರೇಂದ್ರ ಮೋದಿ ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ನೈಜ ಸಿನೆಮಾ ಪ್ರದರ್ಶಿಸುವರು ಎಂದು ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಧನಂಜಯ ಸರ್ಜಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವು ಬಿಜೆಪಿಯ ಸಂಘಟನ ಶಕ್ತಿಯ ಫಲವಾಗಿ ಪ್ರಧಾನಿ ಮೋದಿಯವರ ಯಶಸ್ವಿ ಆಡಳಿತದಿಂದ ಸಾಧ್ಯವಾಗಿದೆ. ಜತೆಗೆ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ರದ್ದು ಸೇರಿದಂತೆ ಹಲವು ಮಹತ್ತರ ನಿರ್ಣಯಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಸಮಾಜಕ್ಕಾಗಿ ಕೆಲಸ ಮಾಡಲು ಹಿರಿಯರ ಆಶೀರ್ವಾದ ದೊರೆತಿದೆ. ನಾನು ವಿಟ್ಲದ ಅಳಿಕೆಯಲ್ಲಿ ಪಿಯುಸಿ, ಮಣಿಪಾಲದಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದಿದ್ದು ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿ, ಖಾಸಗಿ ಆಸ್ಪತ್ರೆ ನಡೆಸುತ್ತಿರುವೆ. ಇದೀಗ ಪದವೀಧರ ಕ್ಷೇತ್ರದ ಮೂಲಕ ಜನ ಸೇವೆಗೆ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಸ್ವತಂತ್ರವಾಗಿ ಸ್ಪರ್ಧೆಗೆ ಉದ್ದೇಶಿಸಿದ ಮಾಜಿ ಶಾಸಕ ಕೆ. ರಘುಪತಿ ಭಟ್ ಪಕ್ಷ ನಿಷ್ಠೆ ಬಗ್ಗೆ ಗೌರವವಿದೆ. ಪಕ್ಷದ ಹಿರಿಯರು ಅವರೊಂದಿಗೆ ಮಾತನಾಡುವರು ಎಂದರು.
ಬಿಜೆಪಿಯ ವರಿಷ್ಠರೇ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿ ಗೆಲುವಿಗಾಗಿ ಮಾಜಿ ಶಾಸಕ ಕೆ. ರಘುಪತಿ ಭಟ್ ಪಕ್ಷೇತರರಾಗಿ ಸ್ಪರ್ಧೆಗಿಳಿಯುವ ಪರಿಸ್ಥಿತಿ ಬರಬಾರದು. ಈ ಬಗ್ಗೆ ಪಕ್ಷದ ವರಿಷ್ಠರು ಅವರೊಂದಿಗೆ ಮಾತುಕತೆ ನಡೆಸುವರು ಎಂದು ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಉಪಸ್ಥಿತರಿದ್ದರು.